ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 15 ಜನರ ಸಾವು
ನವದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 15 ಜನ ಮೃತಪಟ್ಟಿದ್ದಾರೆ ಮತ್ತು 11 ಜನ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ 14 ಮತ್ತು 15ನೇ ಪ್ಲಾಟ್‌ಫಾರ್ಮ್‌ಗೆ ಏಕಾಏಕಿ ನೂರಾರು ಜನರು ನುಗ್ಗಿದ್ದರಿಂದ ದುರ್ಘಟನೆ ಸಂಭವಿಸಿದೆ. ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ನವದೆಹಲಿ, ಫೆಬ್ರವರಿ 16: ನವದೆಹಲಿ ರೈಲು ನಿಲ್ದಾಣದಲ್ಲಿ (New Delhi Railway Station) ಕಾಲ್ತುಳಿತ (Stampede) ಸಂಭವಿಸಿ 15 ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಿದೆ. 11 ಜನರಿಗೆ ಗಾಯಗೊಂಡಿದ್ದು, ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ನವದೆಹಲಿ ರೈಲು ನಿಲ್ದಾಣದಿಂದ ಪ್ರಯಾಗ್ರಾಜ್ ಮಹಾ ಕುಂಭಮೇಳಕ್ಕೆ ರೈಲ್ವೆ ಇಲಾಖೆ ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ಗೆ ತೆರಳಲು ವಿವಿಧ ರಾಜ್ಯಗಳಿಂದ ಬಂದಿದ್ದ ನೂರಾರು ಪ್ರಯಾಣಿಕರು ನವದೆಹಲಿ ರೈಲು ನಿಲ್ದಾಣದೊಳಗೆ ನುಗ್ಗಿದ್ದಾರೆ. ಪ್ಲಾಟ್ಫಾರ್ಮ್ ನಂಬರ್ 14 ಮತ್ತು 15ರಲ್ಲಿ ನಿಂತಿದ್ದ ಪ್ರಯಾಗ್ರಾಜ್ಗೆ ಹೊರಡುವ ವಿಶೇಷ ರೈಲಿನ ಜನರಲ್ ಬೋಗಿಗೆ ಹತ್ತುವಾಗ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತವಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ಎನ್ಡಿಆರ್ಎಫ್ ಸಿಬ್ಬಂದಿ, ರೈಲ್ವೆ, ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದರು. ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್ಡಿಆರ್ಎಫ್ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಸಂತಾಪ
ಕಾಲ್ತುಳಿತ ದುರಂತದ ವಿಷಯ ತಿಳಿದು ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆ ನಾವಿರುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ತೊಂದರೆಗೊಳಗಾದವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ದೇವರು ದುಃಖ ಭರಿಸುವ ಶಕ್ತಿ ನೀಡಲಿ: ರಾಜನಾಥ್ ಸಿಂಗ್
ನವದೆಹಲಿ ರೈಲು ನಿಲ್ದಾಣದಲ್ಲಿ ದುರಂತ ಘಟನೆ ನಡೆದಿದೆ. ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಕಾಲ್ತುಳಿತದಿಂದ ಉಂಟಾದ ಜೀವಹಾನಿಯಿಂದ ತುಂಬಾ ನೋವಾಗಿದೆ. ಮೃತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ತ್ವರಿತವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮಹಾಕುಂಭ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಸರ್ಕಾರ ಮರೆಮಾಡುತ್ತಿದೆ; ಅಖಿಲೇಶ್ ಯಾದವ್ ಆರೋಪ
ಕೇಂದ್ರ ಸರ್ಕಾರ ವಿರುದ್ಧ ಖರ್ಗೆ ವಾಗ್ದಾಳಿ
ದುರಂತದಲ್ಲಿ ಮೃತಪಟ್ಟವರ ವಿಚಾರ ಅತ್ಯಂತ ನೋವಿನ ಸಂಗತಿ. ಕಾಲ್ತುಳಿತದ ವಿಡಿಯೊದಲ್ಲಿನ ದೃಶ್ಯಗಳು ಹೃದಯವಿದ್ರಾವಕವಾಗಿವೆ. ದುರಂತದಲ್ಲಿ ಮೃತಪಟ್ಟವರ ಬಗ್ಗೆ ಸರ್ಕಾರ ಸೂಕ್ತ ಮಾಹಿತಿ ನೀಡುತ್ತಿಲ್ಲ. ಮೃತರ ಸಂಖ್ಯೆ ಬಗ್ಗೆ ಸೂಕ್ತ ಮಾಹಿತಿ ನೀಡದೆ ಮರೆಮಾಚುವ ಯತ್ನ ಮಾಡುತ್ತಿದೆ. ಮೋದಿ ಸರ್ಕಾರದ ಈ ನಡೆ ನಾಚಿಕೆಗೇಡು, ಖಂಡನೀಯವಾದದು. ಮೃತರ ಮತ್ತು ಗಾಯಾಳುಗಳ ಸಂಖ್ಯೆ ಬಗ್ಗೆ ಸೂಕ್ತ ಮಾಹಿತಿ ನೀಡಿ. ಕಾಣೆಯಾದವರ ಗುರುತು ಪತ್ತೆ ಹಚ್ಚಿ ಸೂಕ್ತ ಮಾಹಿತಿ ನೀಡಿ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 am, Sun, 16 February 25