ನವದೆಹಲಿ, ಜುಲೈ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಗಳವಾರ ರಾಜ್ಯಸಭೆಯಲ್ಲಿ ಕರ್ನಾಟಕದ ವಾಲ್ಮೀಕಿ ಹಗರಣ ಪ್ರಸ್ತಾಪಿಸಿ, ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿದರು. ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಎಸ್ಸಿ ಎಸ್ಟಿ ಮತ್ತು ಮಹಿಳೆಯರಿಗೆ ಬಜೆಟ್ನಲ್ಲಿ ಹೆಚ್ಚು ಹಣ ನೀಡಲಾಗಿಲ್ಲ ಎನ್ನುವ ಆರೋಪದ ಬಗ್ಗೆ ಉತ್ತರಿಸುತ್ತಿದ್ದರು. ಕರ್ನಾಟಕ ಸರ್ಕಾರ ಎಸ್ಸಿ ಎಸ್ಟಿ ಫಂಡ್ಗೆ ನೀಡಿದ ಬಜೆಟ್ನಲ್ಲಿ ಸಾವಿರಾರು ಕೋಟಿ ರೂ ಲೂಟಿ ಮಾಡಲಾಗಿರುವ ವಿಚಾರವನ್ನು ಪ್ರಸ್ತಾಪಿಸಿದರು.
ಕರ್ನಾಟಕಕ್ಕೆ ಎಸ್ಸಿ ಎಸ್ಟಿ ಫಂಡ್ಗೆ ನೀಡಲಾದ 9,980 ರೂ ಬಜೆಟ್ನಲ್ಲಿ 4,301 ಕೋಟಿ ರೂ ಹಣವನ್ನು ಟ್ರೈಬಲ್ ಸಬ್ಪ್ಲಾನ್ನಿಂದಲೇ ತೆಗೆಯಲಾಗಿದೆ. ಆ ಹಣ ಎಲ್ಲೋ ಹೋಗಿದೆ ಎಂದೇ ಗೊತ್ತಿಲ್ಲ. ಇಲ್ಲಿಯವರೆಗೆ ಕರ್ನಾಟಕ ಸರ್ಕಾರ 2,220 ಕೋಟಿ ರೂ ವೆಚ್ಚ ಮಾಡಿದೆ. ಇದರಲ್ಲಿ ಎಸ್ಸಿ ಎಸ್ಟಿ ಸಬ್ಪ್ಲಾನ್ನಿಂದ 1,587 ಕೋಟಿ ರೂ, ಟ್ರೈಬಲ್ ಸಬ್ಪ್ಲಾನ್ನಿಂದ 641 ಕೋಟಿ ರೂ ಒಳಗೊಂಡಿದೆ. ಅದು ಎಲ್ಲಿಗೆ ಹೋಯಿತು ಅಂತ ಆ ದೇವರಿಗೇ ಗೊತ್ತಿರಬೇಕು. ಈ ವಿಚಾರವನ್ನು ಕರ್ನಾಟಕ ವಿಧಾನಸಭೆಯಲ್ಲಿ ವಿಪಕ್ಷದವರು ಪ್ರಶ್ನಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಇದನ್ನೂ ಓದಿ: ನೀವ್ಯಾವ ಬಜೆಟ್ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಎತ್ತಿದ್ದೀರಿ? ಕಾಂಗ್ರೆಸ್ಗೆ ನಿರ್ಮಲಾ ಸೀತಾರಾಮನ್ ಸವಾಲು
ಎಸ್ಸಿ ಎಸ್ಟಿ ಬಗ್ಗೆ ಮಾತನಾಡುವ ಮಾಜಿ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರೇ, ಕರ್ನಾಟಕಕ್ಕೆ ಹೋಗಿ ಎಸ್ಸಿ ಎಸ್ಟಿ ಫಂಡ್ ಏನಾಯಿತು ಎಂದು ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿ… ಇಲ್ಲಿ ಕೇಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವೆ ಕುಟುಕಿದರು.
ಎಸ್ಸಿ ಎಸ್ಟಿ ಬಗ್ಗೆ ಮಾತನಾಡುವವರು ಕರ್ನಾಟಕಕ್ಕೆ ಹೋಗಿ ಅಲ್ಲಿ ಹಣ ಎನಾಗುತ್ತಿದೆ ಎಂದು ನೋಡಲಿ. ಅಲ್ಲಿ ಪ್ರೈವೇಟ್ ಅಕೌಂಟ್ಗಳಿಗೆ ಹಾಕಲಾಗುತ್ತಿದೆ. ಇಲ್ಲಿ ಬಂದು ಪ್ರಶ್ನೆ ಮಾಡುತ್ತೀರಿ ಎಂದು ವಿಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ
ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ವಾಲ್ಮೀಕಿ ಹಗರಣ ಪ್ರಸ್ತಾಪಿಸಿ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದರು. ವಾಲ್ಮೀಕಿ ನಿಗಮದಲ್ಲಿ 189 ಕೋಟಿ ರೂ ಎಸ್ಸಿ ಎಸ್ಟಿ ಹಣ ಲಪಟಾಯಿಸಲಾಗಿದೆ ಎನ್ನುವ ಆರೋಪಕ್ಕೆ ಅಲ್ಲಿನ ಮುಖ್ಯಮಂತ್ರಿಗಳು, ಲೂಟಿ ಆಗಿರುವುದು 189 ಕೋಟಿ ರೂ ಅಲ್ಲ, 89 ಕೋಟಿ ರೂ ಎನ್ನುತ್ತಾರೆ ಎಂದು ಹಣಕಾಸು ಸಚಿವೆ ವ್ಯಂಗ್ಯ ಮಾಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ