ಆಂಟ್ರಿಕ್ಸ್​-ದೇವಾಸ್ ಒಪ್ಪಂದ ಭಾರತಕ್ಕೆ ಕಾಂಗ್ರೆಸ್​ ಮಾಡಿದ ದೊಡ್ಡ ವಂಚನೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ

| Updated By: ಸುಷ್ಮಾ ಚಕ್ರೆ

Updated on: Jan 18, 2022 | 5:46 PM

Antrix -Devas Deal: ಯುಪಿಎ ಅವಧಿಯಲ್ಲಿ ಆಂಟ್ರಿಕ್ಸ್ -ದೇವಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಭಾರತದ ವಿರುದ್ಧದ ದೊಡ್ಡ ವಂಚನೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆಂಟ್ರಿಕ್ಸ್​-ದೇವಾಸ್ ಒಪ್ಪಂದ ಭಾರತಕ್ಕೆ ಕಾಂಗ್ರೆಸ್​ ಮಾಡಿದ ದೊಡ್ಡ ವಂಚನೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ: ಆಂಟ್ರಿಕ್ಸ್- ದೇವಾಸ್ (Antrix -Devas Deal) ನಡುವಿನ 2005ರ ಒಪ್ಪಂದ ಭಾರತದ ಜನರಿಗೆ ಮಾಡಿದ ವಂಚನೆ, ದೇಶದ ವಿರುದ್ಧದ ವಂಚನೆಯಾಗಿದೆ. ಆಂಟ್ರಿಕ್ಸ್- ದೇವಾಸ್ ಪ್ರಕರಣದಲ್ಲಿ ಯುಪಿಎ ಸರ್ಕಾರ (UPA Government) ಎಂದಿಗೂ ಮಧ್ಯಸ್ಥಗಾರರನ್ನು ನೇಮಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 2011ರಲ್ಲಿ ಈ ಒಪ್ಪಂದವನ್ನು ರದ್ದುಗೊಳಿಸಿದಾಗ, ದೇವಾಸ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಹೋಯಿತು. ಆದರೆ, ಆಗಿನ ಯುಪಿಎ ಸರ್ಕಾರವು ಎಂದಿಗೂ ಮಧ್ಯಸ್ಥಗಾರರನ್ನು ನೇಮಿಸಿಲ್ಲ. 21 ದಿನಗಳಲ್ಲಿ ಮಧ್ಯಸ್ಥಗಾರರನ್ನು ನೇಮಿಸುವಂತೆ ಸೂಚಿಸಲಾಯಿತು, ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಧ್ಯಸ್ಥಗಾರರನ್ನು ನೇಮಿಸಲಿಲ್ಲ. ಈ ಒಪ್ಪಂದದಲ್ಲಿ ಕಾಂಗ್ರೆಸ್​ ತನ್ನ ಪಾತ್ರವೇನೆಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ನಿರ್ಮಲಾ ಸೀತಾರಾಮನ್ (Nirmala Sitharaman) ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.

ದೆಹಲಿಯ ಎನ್​ಎಂಸಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದ್ದು, ಇಸ್ರೋದ ದೇವಾಸ್-ಆಂಟ್ರಿಕ್ಸ್ ಒಪ್ಪಂದದ ಕುರಿತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇಸ್ರೋದ ಆಂಟ್ರಿಕ್ಸ್ – ದೇವಾಸ್ ಜೊತೆಗೆ 2005ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ರದ್ದು ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಂಡಿತ್ತು. 2011ರಲ್ಲಿ ಯುಪಿಎ ಸರ್ಕಾರ ಈ ಒಪ್ಪಂದವನ್ನು ರದ್ದು ಮಾಡಿತ್ತು‌. ಈ ಒಪ್ಪಂದ ರದ್ದು ಮಾಡುವಾಗ ಕೇಂದ್ರ ಸಚಿವರ ಬಂಧನವಾಗಿತ್ತು. ಆಂಟ್ರಿಕ್ಸ್ ಇಸ್ರೋದ ವಾಣಿಜ್ಯ ಸಂಸ್ಥೆಯಾಗಿದ್ದು, ಡಿಜಿಟಲ್ ವಿಡಿಯೋ, ಆಡಿಯೋ ಸೇವೆ ನೀಡುವುದಾಗಿ ಹೇಳಿದ್ದ ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಿನ್ನೆ ಸುಪ್ರೀಂ ಕೋರ್ಟ್ ನಿಂದ ಈ ಬಗ್ಗೆ ಅಂತಿಮ ಆದೇಶ ಹೊರಬಿದ್ದಿದ್ದು, ಸ್ಯಾಟಕಾಮ್ ಪಾಲಿಸಿಯನ್ನು ದೇವಾಸ್ ಕಂಪನಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ದೇವಾಸ್ ಮಲ್ಟಿಮೀಡಿಯಾ ಕಂಪನಿ 488 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ವರ್ಗಾಯಿಸಿ ವಂಚನೆ ಮಾಡಿದೆ. 579 ಕೋಟಿ ರೂಪಾಯಿ ಹಣ ದೇವಾಸ್ ಮಲ್ಟಿಮೀಡಿಯಾ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿತ್ತು. ಆದರೆ ಇದರ ಶೇ.85 ರಷ್ಟು ಹಣ ವಿದೇಶಕ್ಕೆ ವರ್ಗಾವಣೆ ಮಾಡಿತ್ತು. ವೀರಪ್ಪ ಮೊಯ್ಲಿ ಸರ್ಕಾರ ಎಸ್ ಬ್ಯಾಂಡ್ ಅನ್ನು ಆಂಟ್ರಿಕ್ಸ್ ಗೂ ಕೊಡಲು ಆಗಲ್ಲ ಎಂದಿದ್ದರು. ಒಪ್ಪಂದ ರದ್ದು ಮಾಡೋದು ಕ್ಯಾಬಿನೆಟ್ ತೀರ್ಮಾನ ಎಂದು ವೀರಪ್ಪ ಮೋಯ್ಲಿ ಹೇಳಿದ್ದರು. ಇದು ವಂಚನೆಯ ಒಪ್ಪಂದವಾಗಿದೆ. ಯುಪಿಎ ಸರ್ಕಾರದ ಮೂಗಿನಡಿಯಲ್ಲೇ ವಂಚನೆ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ವಂಚನೆ ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಕ್ಯಾಬಿನೆಟ್ ಅನ್ನು ಕತ್ತಲಲ್ಲಿ ಇಟ್ಟು ಹೇಗೆ ಒಪ್ಪಂದ ಮಾಡಿಕೊಂಡಿತು? ಎಂದು
ನಿರ್ಮಲಾ ಸೀತಾರಾಮನ್ ಪ್ರಶ್ನೆ ಮಾಡಿದ್ದಾರೆ.

ಯುಪಿಎ ಅವಧಿಯಲ್ಲಿ ಆಂಟ್ರಿಕ್ಸ್ ದೇವಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಭಾರತದ ವಿರುದ್ಧದ ವಂಚನೆಯಾಗಿದೆ. ಆಂಟ್ರಿಕ್ಸ್ -ದೇವಾಸ್ ಮೇಲಿನ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಎಲ್ಲರ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ದೇವಾಸ್ ಅನ್ನು ದಿವಾಳಿಗೊಳಿಸುವ ಎನ್‌ಸಿಎಲ್‌ಎಟಿ, ಎನ್‌ಸಿಎಲ್‌ಟಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಯುಪಿಎ ಅವಧಿಯಲ್ಲಿ ಆಂಟ್ರಿಕ್ಸ್ -ದೇವಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಭಾರತದ ವಿರುದ್ಧದ ದೊಡ್ಡ ವಂಚನೆಯಾಗಿದೆ ಎಂದು ಅವರು ಹೇಳಿದರು.

2005 ರ ಆಂಟ್ರಿಕ್ಸ್-ದೇವಾಸ್ ಒಪ್ಪಂದಕ್ಕಾಗಿ ರಾಷ್ಟ್ರೀಯ ಭದ್ರತೆ ಉದ್ದೇಶಗಳಿಗಾಗಿ ಬಳಸಲಾದ ಎಸ್-ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ನೀಡಲು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸೀತಾರಾಮನ್ ಆರೋಪಿಸಿದ್ದಾರೆ.

ಬೆಂಗಳೂರು ಮೂಲದ ನವೋದ್ಯಮ ದೇವಾಸ್‌ ಮಲ್ಟಿಮೀಡಿಯಾವನ್ನು ಮುಚ್ಚುವಂತೆ ಕೋರಿ ಕೇಂದ್ರ ಸರ್ಕಾರದ ಸ್ವಾಮ್ಯತ್ವ ಹೊಂದಿರುವ ಆಂಟ್ರಿಕ್ಸ್​ ಕಾರ್ಪೊರೇಷನ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಎನ್‌ಸಿಎಲ್‌ಎಟಿ ತೀರ್ಪಿನ ವಿರುದ್ಧ ದೇವಾಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿತು. ಆ ಮೂಲಕ ದೇವಾಸ್‌ ನವೋದ್ಯಮವನ್ನು ಬರಖಾಸ್ತುಗೊಳಿಸುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠದ ಈ ಹಿಂದಿನ ಆದೇಶವನ್ನು ಅದು ಎತ್ತಿಹಿಡಿಯಿತು. ದೇವಾಸ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಅರವಿಂದ ಪಿ ದಾತಾರ್ ವಾದ ಮಂಡಿಸಿದ್ದರು. ಆಂಟ್ರಿಕ್ಸ್​ ಸಂಸ್ಥೆ ಪರವಾಗಿ ನ್ಯಾಯವಾದಿಗಳ ಕಚೇರಿ ಖೈತಾನ್ ಅಂಡ್‌ ಕೊ ಪ್ರತಿನಿಧಿಸಿತ್ತು.

2005ರಲ್ಲೇ ಆಂಟ್ರಿಕ್ಸ್‌ ಮತ್ತು ಬೆಂಗಳೂರು ಮೂಲದ ಸ್ಟಾರ್ಟ್​ಅಪ್ ಆಗಿದ್ದ ದೇವಾಸ್‌ ಮಲ್ಟಿಮೀಡಿಯಾ ನಡುವೆ ಒಪ್ಪಂದ ಏರ್ಪಟ್ಟಿತ್ತು. ನಂತರದಲ್ಲಿ ಈ ಒಪ್ಪಂದವನ್ನು ರದ್ದುಪಡಿಸಿದ್ದಕ್ಕಾಗಿ ಆಂಟ್ರಿಕ್ಸ್‌ ಸಂಸ್ಥೆ ಸುಮಾರು 9,000 ಕೋಟಿ ರೂಪಾಯಿ (1.2 ಬಿಲಿಯನ್‌ ಡಾಲರ್‌) ದಂಡ ಕಟ್ಟಬೇಕಾಯಿತು. 2005ರ ಒಪ್ಪಂದ ಪ್ರಕಾರ, ಆಂಟ್ರಿಕ್ಸ್‌ ಸಂಸ್ಥೆಯು ದೇವಾಸ್‌ ಮಲ್ಟಿಮೀಡಿಯಾ ಸಂಸ್ಥೆಗೆ ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡಿ, ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿತ್ತು. ಈ ಉಪಗ್ರಹಗಳು ಭಾರತದ ಟೆರಸ್ಟ್ರಿಯಲ್‌ ಸಂವಹನ ಸೇವೆಗೆ ಆಧಾರವಾಗಲಿದ್ದವು. ಆದರೆ, 2011ರ ಫೆಬ್ರವರಿಯಲ್ಲಿ ಈ ಒಪ್ಪಂದವನ್ನು ರದ್ದುಪಡಿಸಿತು. ಇದಾದ ನಂತರ ಹಲವು ವರ್ಷಗಳಿಂದಲೂ ಕಾನೂನು ಹೋರಾಟ ನಡೆಸುತ್ತಲೇ ಬಂದ ಆಂಟ್ರಿಕ್ಸ್‌ಗೆ, ಬಳಿಕ ಭಾರೀ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: Union Budget 2022: ಈ ಬಾರಿಯ ಬಜೆಟ್​ನಲ್ಲಿ ಐಟಿ ಪಾವತಿದಾರರಿಗೆ ನಿರ್ಮಲಾ ಸೀತಾರಾಮನ್ ಏನು ಗಿಫ್ಟ್ ಕೊಡ್ತಾರೆ?

Union Budget 2022: ಅರ್ಥಶಾಸ್ತ್ರಜ್ಞರ ಜತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆ

Published On - 5:30 pm, Tue, 18 January 22