ದೆಹಲಿ: ಕೊರೊನಾ ವಿರುದ್ಧ ಹೋರಾಡಲು ಬಳಕೆಯಾಗುವ ಕೆಲವು ಔಷಧಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್ಟಿ ಕೌನ್ಸಿಲ್) ಇಂದು (ಜೂನ್ 12) ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ತೆರಿಗೆ ವಿನಾಯಿತಿಯನ್ನು ಕೆಲವು ಮಂತ್ರಿಗಳ ಸಲಹೆ, ಶಿಫಾರಸಿನಂತೆ ಕೈಗೊಳ್ಳಲಾಗಿದೆ ಎಮದು ಜಿಎಸ್ಟಿ ಮಂಡಳಿ ತಿಳಿಸಿದೆ.
ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಮೇಲಿನ ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ರೆಮಿಡಿಸಿವರ್ ಇಂಜೆಕ್ಷನ್ ಮೇಲಿನ ಜಿಎಸ್ಟಿ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಅಂಬ್ಯುಲೆನ್ಸ್ ಮೇಲಿನ ಜಿಎಸ್ಟಿ ದರ ಕೂಡ ಇಳಿಕೆಯಾಗಿದೆ.
ಬ್ಲ್ಯಾಕ್ ಫಂಗಸ್ಗೆ ಸಂಬಂಧಿಸಿದ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕೊವಿಡ್ಗೆ ಸಂಬಂಧಿಸಿದ 3 ವಸ್ತುಗಳಿಗೆ ಜಿಎಸ್ಟಿ ಇಲ್ಲ ಎಂದು ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ವಿತ್ತ ಸಚಿವಾಲಯದಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆದ ನಂತರ ಅವರು ಮಾತನಾಡಿದ್ದಾರೆ.
ಲಸಿಕೆ ಮೇಲಿನ ಜಿಎಸ್ಟಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊರೊನಾ ಲಸಿಕೆ ಮೇಲಿನ ಶೇ.5ರಷ್ಟು ಜಿಎಸ್ಟಿ ಮುಂದುವರಿಕೆ ಆಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಶೇ.75ರಷ್ಟು ಕೊವಿಡ್ ಲಸಿಕೆಯನ್ನು ಕೇಂದ್ರವೇ ಖರೀದಿಸುತ್ತಿದೆ. ಹೀಗಾಗಿ ಲಸಿಕೆ ಮೇಲಿನ ಜಿಎಸ್ಟಿಯಿಂದ ಜನರಿಗೆ ಹೊರೆಯಾಗಲ್ಲ. ಕೇಂದ್ರ ಸರ್ಕಾರ ಜನರಿಗೆ ಲಸಿಕೆಯನ್ನ ಉಚಿತವಾಗಿ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಌಂಬುಲೆನ್ಸ್ ಮೇಲಿನ ಜಿಎಸ್ಟಿ ಶೇ.28ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ. ಜಿಎಸ್ಟಿ ಮಂಡಳಿ ಕೈಗೊಂಡ ನಿರ್ಧಾರ ತಕ್ಷಣವೇ ಜಾರಿಯಾಗಲಿದೆ. ವ್ಯಾಪಾರಿಗಳಿಗೆ ರಿಲೀಫ್ ನೀಡಿಕೆ ಇಂದಿನ ಅಜೆಂಡಾದಲ್ಲಿರಲಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕಾನ್ಸನ್ಟ್ರೇಟರ್, ವೆಂಟಿಲೇಟರ್, ವೆಂಟಿಲೇಟರ್ ಮಾಸ್ಕ್, BiPAP ಮೆಷಿನ್ ಮೇಲಿನ ಜಿಎಸ್ಟಿ ದರವನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಕೊರೊನಾ ಟೆಸ್ಟಿಂಗ್ ಕಿಟ್ ಮೇಲಿನ ಜಿಎಸ್ಟಿ ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಪಲ್ಸ್ ಆಕ್ಸಿಮೀಟರ್ ಮೇಲಿನ ಜಿಎಸ್ಟಿ ಶೇ.12ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ. ಹ್ಯಾಂಡ್ ಸ್ಯಾನಿಟೈಸರ್, ಉಷ್ಣಾಂಶ ಪರೀಕ್ಷಿಸುವ ಯಂತ್ರಗಳು, ಗ್ಯಾಸ್/ಎಲೆಕ್ಟ್ರಿಕ್ ಚಿತಾಗಾರಗಳ ಸಾಮಗ್ರಿ, ಆಳವಡಿಕೆಗೆ ಜಿಎಸ್ಟಿ ಶೇ.18 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಂಬ್ಯುಲೆನ್ಸ್ ಮೇಲಿನ ಜಿಎಸ್ಟಿ ಶೇ.28 ರಿಂದ ಶೇ.12 ಕ್ಕೆ ಇಳಿಕೆಯಾಗಿದೆ. ಈ ಜಿಎಸ್ಟಿ ದರ ಇಳಿಕೆಯು 2021 ರ ಸೆಪ್ಟೆಂಬರ್ ವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಇಂದು ನಡೆದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
Published On - 4:00 pm, Sat, 12 June 21