ಎನ್​ಟಿಎಯಲ್ಲಿ ಮುಖ್ಯ ಬದಲಾವಣೆ; ಐಎಎಸ್​-ಐಪಿಎಸ್ ಸೇರಿದಂತೆ 3 ಅಧಿಕಾರಿಗಳ ನೇಮಕ

ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಐಎಎಸ್​, ಐಪಿಎಸ್ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಈ ಅಧಿಕಾರಿಗಳನ್ನು ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಪ್ರತ್ಯೇಕ ಆದೇಶಗಳ ಪ್ರಕಾರ, ರವಿ ಕುಮಾರ್ ಸಿಂಗ್ (ಐಪಿಎಸ್) ಮತ್ತು ಪ್ರಸನ್ನ ವೆಂಕಟೇಶ್ ವಿ (ಐಎಎಸ್) ಅವರನ್ನು NTAಯಲ್ಲಿ ನಿರ್ದೇಶಕರಾಗಿ ನೇಮಿಸಲಾಗಿದೆ. ಐಆರ್​ಎಸ್​ ಅಧಿಕಾರಿ ಅಮಿತ್ ಸಂದರಿಯಾ ಅವರನ್ನು NTAಯಲ್ಲಿ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ.

ಎನ್​ಟಿಎಯಲ್ಲಿ ಮುಖ್ಯ ಬದಲಾವಣೆ; ಐಎಎಸ್​-ಐಪಿಎಸ್ ಸೇರಿದಂತೆ 3 ಅಧಿಕಾರಿಗಳ ನೇಮಕ
NTA
Image Credit source: TV9

Updated on: Aug 28, 2026 | 10:22 PM

ನವದೆಹಲಿ, ಆಗಸ್ಟ್ 28: ನೀಟ್ (NEET) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತೀವ್ರ ತನಿಖೆ ಹಾಗೂ ಸಾರ್ವಜನಿಕ ಟೀಕೆಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ಎನ್​ಟಿಎಗೆ ಇಬ್ಬರು ನಿರ್ದೇಶಕರು ಮತ್ತು ಒಬ್ಬರು ಜಂಟಿ ನಿರ್ದೇಶಕರನ್ನು ನೇಮಕ ಮಾಡಿದೆ. ಆದೇಶ ಹೊರಡಿಸಿದ 3 ವಾರಗಳಲ್ಲಿ ನೇಮಕಗೊಂಡ ಅಧಿಕಾರಿಗಳು ತಮ್ಮ ಹೊಸ ಕರ್ತವ್ಯಗಳನ್ನು ವಹಿಸಿಕೊಳ್ಳಬೇಕು, ಇಲ್ಲದಿದ್ದರೆ ‘ಸೆಂಟ್ರಲ್ ಸ್ಟಾಫಿಂಗ್ ಸ್ಕೀಮ್’ನಿಂದ ಅವರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಸಿಬ್ಬಂದಿ ಸಚಿವಾಲಯದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಎನ್‌ಟಿಎ ನಡೆಸುವ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ಪ್ರಮುಖ ನೇಮಕಾತಿಗಳು ನಡೆದಿವೆ.

ಆಗಸ್ಟ್ 27ರಂದು ಸಿಬ್ಬಂದಿ ಸಚಿವಾಲಯ ಹೊರಡಿಸಿರುವ ಪ್ರತ್ಯೇಕ ಆದೇಶಗಳ ಪ್ರಕಾರ, ಭಾರತೀಯ ಪೊಲೀಸ್ ಸೇವೆಯ (IPS) ಅಧಿಕಾರಿ ರವಿ ಕುಮಾರ್ ಸಿಂಗ್ ಮತ್ತು ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಪ್ರಸನ್ನ ವೆಂಕಟೇಶ್ ವಿ. ಅವರನ್ನು ಎನ್‌ಟಿಎ ನಿರ್ದೇಶಕರಾಗಿ ನೇಮಿಸಲಾಗಿದೆ. ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳ ವಿಭಾಗದ 2016ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿ ಅಮಿತ್ ಸಾಂದರಿಯಾ ಅವರನ್ನು ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯಿಂದ ಪರೀಕ್ಷಾ ಪದ್ಧತಿ ಸುಧಾರಣೆಗೆ ಜನರಿಂದ ಸಲಹೆಗಳ ಆಹ್ವಾನ

ರವಿ ಕುಮಾರ್ ಸಿಂಗ್ (ನಿರ್ದೇಶಕರು):

ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ-ಕೇಂದ್ರಾಡಳಿತ ಪ್ರದೇಶಗಳ (AGMUT) ಕೆಡರ್‌ನ 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಯುಪಿಎಸ್‌ಸಿ ಪರೀಕ್ಷೆಯ ಮೂಲಕ ನೇರ ಆಯ್ಕೆಯಾದ ಇವರು, ಎನ್‌ಟಿಎ ಸೇರುವ ಮೊದಲು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಸುಮಾರು 14 ವರ್ಷಗಳ ಸೇವಾ ಅನುಭವವಿದೆ.

ಪ್ರಸನ್ನ ವೆಂಕಟೇಶ್ ವಿ. (ನಿರ್ದೇಶಕರು):

ಆಂಧ್ರಪ್ರದೇಶ ಕೆಡರ್‌ನ 2012ರ ಬ್ಯಾಚ್‌ನ ಐಎಎಸ್ ಅಧಿಕಾರಿ. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಪದವೀಧರರಾದ ಇವರು ಏಲೂರು ಜಿಲ್ಲಾಧಿಕಾರಿಯಾಗಿ, ವಿಜಯವಾಡ ಮುನ್ಸಿಪಲ್ ಕಮಿಷನರ್ ಆಗಿ ಹಾಗೂ ಕರ್ನೂಲ್ ಜಂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಎನ್‌ಟಿಎಗೆ ಬರುವ ಮೊದಲು ಗುಂಟೂರಿನಲ್ಲಿ ಆಂಧ್ರಪ್ರದೇಶ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಕಾರ್ಯದರ್ಶಿಯಾಗಿದ್ದರು.

ಅಮಿತ್ ಸಾಂದರಿಯಾ (ಜಂಟಿ ನಿರ್ದೇಶಕರು):

ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ವಿಭಾಗದ 2016ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ. ಐಐಟಿ ದೆಹಲಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಇವರು, ದೆಹಲಿಯ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ: ನೀಟ್ ಪ್ರತಿಭಟನೆ ವೇಳೆ ಪೋಲಿಸ್ ದೌರ್ಜನ್ಯದ ತನಿಖೆ; ಉನ್ನತ ಮಟ್ಟದ ವಿಚಾರಣಾ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಪರೀಕ್ಷಾ ಅಕ್ರಮಗಳಿಂದ ಕಳೆದುಹೋಗಿರುವ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿಸಲು ಈ ಹೊಸ ನೇಮಕಾತಿಗಳನ್ನು ಮಾಡಲಾಗಿದೆ. ಸರ್ಕಾರ ಇತ್ತೀಚೆಗೆ NTAಯ ಪರೀಕ್ಷಾ ವ್ಯವಸ್ಥೆಯಲ್ಲಿ ನಾಲ್ಕು ಹಂತದ ಪ್ರಶ್ನೆಪತ್ರಿಕೆ ಪರಿಶೀಲನೆ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವುದು, 600 ತಜ್ಞರನ್ನು ತೆಗೆದುಹಾಕುವುದು ಮತ್ತು ಡೊಮೇನ್ ತಜ್ಞರನ್ನು ಸೇರಿಸಿಕೊಳ್ಳುವುದು ಸೇರಿದಂತೆ ವ್ಯಾಪಕ ಬದಲಾವಣೆಗಳನ್ನು ಘೋಷಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us