
ನವದೆಹಲಿ, ಜುಲೈ 24: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆ ಮುಂದುವರಿದಿದೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಇದರ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಬೃಹತ್ ಕಾರ್ಯಾಚರಣೆ ನಡೆಸಿದ್ದು, ತನ್ನ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಎನ್ಟಿಎಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಭಾಗವಾಗಿ ಇನ್ನೂ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯೊಳಗೆ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಸರ್ಕಾರವು ಕ್ರಮಗಳನ್ನು ಬಿಗಿಗೊಳಿಸುತ್ತಿದ್ದು, ವಜಾಗೊಂಡಿರುವ ಕೆಲವು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮವನ್ನೂ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳು ಹೊರಬರಲಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳಿಂದಾಗಿ ವಿವಾದಕ್ಕೆ ಸಿಲುಕಿರುವ ಎನ್‌ಟಿಎ ಸಂಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: TV9 Kannada News Live: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್: 47 ಅಧಿಕಾರಿಗಳನ್ನ ವಜಾ ಮಾಡಿದ ಕೇಂದ್ರ ಸರ್ಕಾರ
ನೀಟ್ ಪೇಪರ್ ಲೀಕ್ ಪ್ರಕರಣದಿಂದಾಗಿ ಎನ್‌ಟಿಎ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿದ್ದು, ಸಂಸ್ಥೆಯನ್ನು ಸಂಪೂರ್ಣ ಪುನರ್ರಚನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸಂಸ್ಥೆ ವಿಫಲವಾಗಿದೆ ಎಂದು ಟೀಕಿಸಿ ಎನ್‌ಟಿಎಯನ್ನೇ ರದ್ದುಗೊಳಿಸಬೇಕೆಂದು ಹಲವರು ಆಗ್ರಹಿಸಿದ್ದರೂ, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
Sources- “National Testing Agency has terminated 47 officials from their service. Legal and criminal actions will also be taken against some of these officials. This is part of a complete overhaul of NTA that has been in controversy over paper leaks.” pic.twitter.com/zz2mcGIqQp
— ANI (@ANI) July 24, 2026
ಪೇಪರ್ ಲೀಕ್ ತಡೆ ಮಸೂದೆಗೆ ಸಂಪುಟ ಸಮ್ಮತಿ:
ಪೇಪರ್ ಲೀಕ್ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಕರಡು ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‌ಟಿಎ ಈ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಮಂಜೂರಾತಿ ನೀಡಲಾಗಿದ್ದು, ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈ ಮಸೂದೆಯು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ಕ್ಕೆ ತಿದ್ದುಪಡಿ ತರಲಿದ್ದು, ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಕೋಟಿ ರೂ. ದಂಡ ವಿಧಿಸಲು ಪ್ರಸ್ತಾಪಿಸಿದೆ.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಎಂದರೇನು?:
NTA (National Testing Agency) ಎಂಬುದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಪರೀಕ್ಷಾ ಸಂಸ್ಥೆಯಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕವಾಗಿ, ದಕ್ಷತೆಯಿಂದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳೊಂದಿಗೆ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ ಸಿಬಿಎಸ್‌ಇ (CBSE), ಯುಜಿಸಿ (UGC) ಮುಂತಾದ ಸಂಸ್ಥೆಗಳು ನಡೆಸುತ್ತಿದ್ದ ಬೃಹತ್ ಸ್ಪರ್ಧಾತ್ಮಕ ಪರೀಕ್ಷೆಗಳ ಹೊಣೆಯನ್ನು ತಗ್ಗಿಸಲು NTAಯನ್ನು ಸ್ಥಾಪಿಸಲಾಯಿತು.
NTA ನಡೆಸುವ ಪ್ರಮುಖ ಪರೀಕ್ಷೆಗಳು ಯಾವುವು?:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ದೇಶಾದ್ಯಂತ ವೈದ್ಯಕೀಯ, ಎಂಜಿನಿಯರಿಂಗ್, ನಿರ್ವಹಣೆ, ಉನ್ನತ ಶಿಕ್ಷಣ ಹಾಗೂ ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳ ವಿವರ ಇಲ್ಲಿದೆ.
NEET (UG): ದೇಶದಾದ್ಯಂತ ಎಂ.ಬಿ.ಬಿ.ಎಸ್ (MBBS), ಬಿ.ಡಿ.ಎಸ್ (BDS), ಆಯುಷ್ (AYUSH) ಮುಂತಾದ ಪದವಿ ಹಂತದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಏಕೈಕ ರಾಷ್ಟ್ರೀಯ ಪರೀಕ್ಷೆ.
JEE Main: ಎನ್‌ಐಟಿ (NIT), ಐಐಐಟಿ (IIIT) ಹಾಗೂ ಇತರ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಬಿ.ಇ, ಬಿ.ಟೆಕ್ (B.E/B.Tech) ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಜೊತೆಗೆ ಇದು ಐಐಟಿ (IIT) ಪ್ರವೇಶದ JEE Advanced ಪರೀಕ್ಷೆಗೆ ಅರ್ಹತಾ ಪರೀಕ್ಷೆಯಾಗಿದೆ.
CUET (Common University Entrance Test): ದೇಶದ ಕೇಂದ್ರೀಯ ಮತ್ತು ಇತರ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪದವಿ (UG) ಮತ್ತು ಸ್ನಾತಕೋತ್ತರ (PG) ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆ.
UGC NET: ಸಹಾಯಕ ಪ್ರಾಧ್ಯಾಪಕ ಹುದ್ದೆ (Assistant Professor) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಅರ್ಹತೆಗಾಗಿ ನಡೆಸುವ ಪರೀಕ್ಷೆ.
CMAT ಮತ್ತು GPAT: ಮ್ಯಾನೇಜ್‌ಮೆಂಟ್ (MBA) ಮತ್ತು ಫಾರ್ಮಸಿ (M.Pharm) ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು.
CSIR UGC-NET: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಜೆಆರ್‌ಎಫ್ (JRF) ಮತ್ತು ಉಪನ್ಯಾಸಕ ಹುದ್ದೆಯ ಅರ್ಹತೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಸಂಬಂಧಿಸಿದಂತೆ ಆಗಾಗ ಕೇಳಲಾಗುವ ಪ್ರಮುಖ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಹೀಗಿವೆ:
ಪ್ರಶ್ನೆ: NTA ಎಂದರೇನು ಮತ್ತು ಇದರ ಮುಖ್ಯ ಕೆಲಸವೇನು?
ಉತ್ತರ: NTA (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಎಂಬುದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಭಾರತದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ನಡೆಸುವ ಪ್ರಮುಖ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಇದರ ಮುಖ್ಯ ಕೆಲಸವಾಗಿದೆ.
ಪ್ರಶ್ನೆ: NTAಯನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ: NTAಯನ್ನು 2017ರ ನವೆಂಬರ್‌ನಲ್ಲಿ ಸ್ಥಾಪಿಸಲಾಯಿತು. ಇದಕ್ಕೂ ಮೊದಲು ಪರೀಕ್ಷೆಗಳನ್ನು ನಡೆಸುತ್ತಿದ್ದ ಸಿಬಿಎಸ್‌ಇ (CBSE) ಮತ್ತು ಯುಜಿಸಿ (UGC)ಯಂತಹ ಸಂಸ್ಥೆಗಳ ಮೇಲಿನ ಹೊರೆಯನ್ನು ತಗ್ಗಿಸಲು ಇದನ್ನು ಜಾರಿಗೆ ತರಲಾಯಿತು.
ಪ್ರಶ್ನೆ: NTA ನಡೆಸುವ ಅತ್ಯಂತ ಪ್ರಮುಖ ಪರೀಕ್ಷೆಗಳು ಯಾವುವು?
ಉತ್ತರ: NTA ದೇಶದ ಬೃಹತ್ ಪರೀಕ್ಷೆಗಳಾದ NEET (UG), JEE (Main), CUET (UG & PG), UGC-NET ಮುಂತಾದ ಪರೀಕ್ಷೆ ನಡೆಸುತ್ತದೆ.
ಪ್ರಶ್ನೆ: NTA ಪರೀಕ್ಷೆಗಳನ್ನು ಯಾವ ರೂಪದಲ್ಲಿ ನಡೆಸಲಾಗುತ್ತದೆ?
ಉತ್ತರ: NTA ನಡೆಸುವ ಹೆಚ್ಚಿನ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ (CBT – Computer Based Test) ಮಾದರಿಯಲ್ಲಿರುತ್ತವೆ. ಆದರೆ, NEET (UG)ಯಂತಹ ಕೆಲವು ಪರೀಕ್ಷೆಗಳನ್ನು ಪೆನ್ ಮತ್ತು ಪೇಪರ್ (OMR) ರೂಪದಲ್ಲಿ ನಡೆಸಲಾಗುತ್ತದೆ.
ಪ್ರಶ್ನೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅಭ್ಯಾಸಕ್ಕಾಗಿ NTA ನೀಡುವ ಸೌಲಭ್ಯವೇನು?
ಉತ್ತರ: ಕಂಪ್ಯೂಟರ್ ಜ್ಞಾನವಿಲ್ಲದ ಅಥವಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ NTA ದೇಶಾದ್ಯಂತ ‘ಟೆಸ್ಟ್ ಪ್ರಾಕ್ಟೀಸ್ ಸೆಂಟರ್‌ಗಳನ್ನು’ ಸ್ಥಾಪಿಸಿದೆ. ವಿದ್ಯಾರ್ಥಿಗಳು ಇಲ್ಲಿಗೆ ತೆರಳಿ ಉಚಿತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಅಭ್ಯಾಸ ಮಾಡಬಹುದು.
ಪ್ರಶ್ನೆ: NTA ಅಧಿಕೃತ ವೆಬ್‌ಸೈಟ್ ಯಾವುದು?
ಉತ್ತರ: NTAಯ ಅಧಿಕೃತ ವೆಬ್‌ಸೈಟ್: nta.ac.in