
ನವದೆಹಲಿ, ಆಗಸ್ಟ್ 11: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಅಮೆರಿಕದ ಭಾಷಣದಲ್ಲಿ ಹಾಕಿದ ಪರಮಾಣು ಬೆದರಿಕೆಯನ್ನು (nuclear threat) ಭಾರತ ಖಂಡಿಸಿದೆ. ಇದು ಪರಮಾಣು ಅಸ್ತ್ರವನ್ನು ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಮಾಡುವ ಪಾಕಿಸ್ತಾನದ (Pakistan) ವರ್ತನೆಗೆ ಮತ್ತೊಂದು ಉದಾಹರಣೆ ಎಂದು ಭಾರತ ತಿರುಗೇಟು ನೀಡಿದೆ. ಫ್ಲೋರಿಡಾದಲ್ಲಿ ತಮ್ಮ ಭಾಷಣದ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ “ಪರಮಾಣು ಯುದ್ಧ”ದ ಬೆದರಿಕೆಗಳನ್ನು ಹಾಕಿದ್ದರು. ಭಾರತದೊಂದಿಗೆ ಮುಂದಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗಿ ಒಂದುವೇಳೆ ಪಾಕಿಸ್ತಾನ ತನ್ನ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿದರೆ “ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ” ಎಂದು ಅಸಿಮ್ ಮುನೀರ್ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆ ನೀಡಿದ್ದು, “ಅಮೆರಿಕಾ ಭೇಟಿಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥರು ನೀಡಿರುವ ಹೇಳಿಕೆಗಳ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿಗಳು ನಮ್ಮ ಗಮನಕ್ಕೆ ಬಂದಿದೆ. ಪರಮಾಣು ಕತ್ತಿಯನ್ನು ಝಳಪಿಸುವುದು ಪಾಕಿಸ್ತಾನದ ಹಳೆಯ ಬುದ್ಧಿ” ಎಂದು ಲೇವಡಿ ಮಾಡಿದೆ. ಈ ಹೇಳಿಕೆಗಳನ್ನು ಭಾರತದೊಂದಿಗೆ ಸ್ನೇಹಪರವಾಗಿರುವ ಮೂರನೇ ದೇಶದ ನೆಲದಿಂದ ಮಾಡಿರುವುದು ವಿಷಾದಕರ. ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ಮುಂದುವರಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಸಿಂಧೂ ನದಿಗೆ ಭಾರತ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆ; ಅಮೆರಿಕದಲ್ಲಿ ಅಸೀಮ್ ಮುನೀರ್ ಬೆದರಿಕೆ
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಅಮೆರಿಕ ನೆಲದಿಂದ ಬಂದ ಪರಮಾಣು ಬೆದರಿಕೆಯು “ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬೇಜವಾಬ್ದಾರಿ ರಾಷ್ಟ್ರ” ಎಂದು ಸಾಬೀತುಪಡಿಸಿದೆ. ಪಾಕಿಸ್ತಾನದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ರಾಷ್ಟ್ರೇತರ ವ್ಯಕ್ತಿಗಳ ಕೈಗೆ ಸಿಗುವ ನಿಜವಾದ ಅಪಾಯವಿದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಆ ದೇಶವನ್ನು ನಿಯಂತ್ರಿಸುವುದು ಅವರ ಮಿಲಿಟರಿಯೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
“ಪಾಕಿಸ್ತಾನ ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸಿಯೇ ನಾವು ಪತನವಾಗುತ್ತೇವೆ ಎಂಬುದು ಸತ್ಯ. ಕಾಶ್ಮೀರ ಪಾಕಿಸ್ತಾನದ ಕಣ್ಣಿನ ರಕ್ತನಾಳ ” ಎಂದು ಅಸಿಮ್ ಮುನೀರ್ ಹೇಳಿದ್ದರು.
ಇದನ್ನೂ ಓದಿ: ಮತ್ತೆ ಅಮೆರಿಕಕ್ಕೆ ಹೊರಟ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಎರಡು ತಿಂಗಳಲ್ಲಿ ಎರಡನೇ ಭೇಟಿ
ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ಅದು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯಬಹುದು. ಹಾಗೇನಾದರೂ ಡ್ಯಾಂ ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ. ಭಾರತವು ಸಿಂಧೂ ನದಿಗೆ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಡ್ಯಾಂ ಪೂರ್ಣವಾದ ನಂತರ ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅದು ನಮಗೂ ಸೇರಿದ್ದು ಎಂದು ಅಸಿಮ್ ಮುನಿರ್ ಅಮೆರಿಕದ ನೆಲದಿಂದ ಬೆದರಿಕೆ ಹಾಕಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ