ಇದು ಎಷ್ಟನೇ ಕೊರೊನಾ ಅಲೆ ಎಂಬುದು ಮುಖ್ಯವಲ್ಲ; ಚಿಂತಿಸಬೇಕಾಗಿದ್ದು ಬೇರೆಯೇ ಇದೆ: ತಜ್ಞರು

ಇದು ಎಷ್ಟನೇ ಕೊರೊನಾ ಅಲೆ ಎಂಬುದು ಮುಖ್ಯವಲ್ಲ; ಚಿಂತಿಸಬೇಕಾಗಿದ್ದು ಬೇರೆಯೇ ಇದೆ: ತಜ್ಞರು
ಕೊರೊನಾ (ಪ್ರಾತಿನಿಧಿಕ ಚಿತ್ರ)

ಬಂದಿರುವ ಕೊರೊನಾ ಸಂಪೂರ್ಣವಾಗಿ ಹೋಗಿಯೇ ಇಲ್ಲ. ಒಂದು, ಎರಡು, ಮೂರನೇ ಅಲೆ ಎನ್ನುವುದರ ಆಧಾರದ ಮೇಲೆ ಜನ ಜಾಗೃತರಾಗುವುದಕ್ಕಿಂತ ಸದಾ ಎಚ್ಚರಿಕೆ ವಹಿಸುವ ಮನಸ್ಥಿತಿ ಹೊಂದಬೇಕು: ತಜ್ಞರು

TV9kannada Web Team

| Edited By: Skanda

Aug 06, 2021 | 11:08 AM

ದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಲಾರಂಭಿಸಿದ್ದು, ಸೋಂಕು ತೀವ್ರ ಸ್ವರೂಪದಲ್ಲಿ ಬಾಧಿಸುತ್ತಿದೆ. ಈ ಬೆಳವಣಿಗೆಗಳು ಮೂರನೇ ಅಲೆಯ ಆತಂಕಕ್ಕೆ ಕಾರಣವಾಗಿವೆ. ಆದರೆ, ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ತಜ್ಞರು ಭಾರತದಲ್ಲಿ ಇನ್ನೂ ಎರಡನೇ ಅಲೆ (Corona 2nd Wave) ಅಂತ್ಯವನ್ನೇ ಕಂಡಿಲ್ಲ. ಅಲ್ಲದೇ ಎರಡನೇ ಅಲೆ, ಮೂರನೇ ಅಲೆ (Corona 3rd Wave) ಎನ್ನುವುದು ಲೆಕ್ಕಾಚಾರಗಳಿಗಷ್ಟೇ ಸೀಮಿತ. ವಾಸ್ತವವಾಗಿ ಸೋಂಕು ಒಮ್ಮೆ ಕಡಿಮೆಯಾಗುವುದು ಮತ್ತೊಮ್ಮೆ ಏರುವುದು ಆಗುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆಯಂತೆ ಆಗಿದೆ. ಹಾಗಾಗಿ ಈಗ ಇರುವುದು ಎರಡನೇ ಅಲೆಯೋ, ಮೂರನೇ ಅಲೆಯೋ ಎಂಬ ಲೆಕ್ಕಕ್ಕಿಂತಲೂ ಅದನ್ನು ನಿಯಂತ್ರಿಸುವುದು (Controlling) ಮುಖ್ಯ ಎಂದಿದ್ದಾರೆ.

ಕೆಲ ತಜ್ಞರ ಅಂದಾಜಿನ ಪ್ರಕಾರ ಭಾರತ ದೇಶ ಕೊರೊನಾ ಮೂರನೇ ಅಲೆ ಹೊಡೆತಕ್ಕೆ ಆಗಸ್ಟ್ ತಿಂಗಳಿನಲ್ಲಿ ಸಿಲುಕಿಕೊಳ್ಳಲಿದೆ ಎನ್ನಲಾಗಿದೆ. ಆದರೆ, ದೆಹಲಿ ಮೂಲದ ಸಾಂಕ್ರಾಮಿಕ ರೋಗಗಳ ತಜ್ಞ ವೈದ್ಯ ಚಂದ್ರಕಾಂತ್ ಲಹರಿಯಾ ಅಲೆಗಳ ಲೆಕ್ಕಾಚಾರದ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳುವುದು ಬೇಕಿಲ್ಲ. ಏಕೆಂದರೆ, ಬಂದಿರುವ ಕೊರೊನಾ ಸಂಪೂರ್ಣವಾಗಿ ಹೋಗಿಯೇ ಇಲ್ಲ. ಒಂದು, ಎರಡು, ಮೂರನೇ ಅಲೆ ಎನ್ನುವುದರ ಆಧಾರದ ಮೇಲೆ ಜನ ಜಾಗೃತರಾಗುವುದಕ್ಕಿಂತ ಸದಾ ಎಚ್ಚರಿಕೆ ವಹಿಸುವ ಮನಸ್ಥಿತಿ ಹೊಂದಬೇಕು ಎಂದಿದ್ದಾರೆ.

ಇತ್ತ, ಕೊರೊನಾ ಎರಡನೇ ಅಲೆ ಬಗ್ಗೆ ಮಾಹಿತಿ ನೀಡಿದ್ದ ಹೈದರಾಬಾದ್, ಕಾನ್ಪುರದ ಐಐಟಿ ತಜ್ಞರು, ಅಕ್ಟೋಬರ್​ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ಹೋಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್​ ಅಗರ್​ವಾಲ್ ಈ ಬಗ್ಗೆ ಪ್ರತಿಕ್ರಿಸಿದ್ದು, ಭಾರತದಲ್ಲಿ ನಿತ್ಯವೂ 40 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಅದರರ್ಥ ಎರಡನೇ ಅಲೆಯೆಂದು ನಾವು ಯಾವುದನ್ನು ಕರೆಯುತ್ತಿದ್ದೇವೋ ಆ ಘಟ್ಟವಿನ್ನೂ ಮುಗಿದಿಲ್ಲ ಎಂದು ತಿಳಿಸಿದ್ದಾರೆ.

ಸಂಭವನೀಯ ಮೂರನೇ ಅಲೆ ಬಗ್ಗೆ ಹಾಗೂ ಅದಕ್ಕೆ ಕಾರಣವಾಗಬಹುದಾದ ಅಂಶಗಳ ಬಗ್ಗೆಯೂ ತಜ್ಞರು ಮಾಹಿತಿ ನೀಡಿದ್ದು, ಅವುಗಳು ಇಂತಿವೆ: 1.ಲೆಕ್ಕಾಚಾರದ ಪ್ರಕಾರ ಕೊರೊನಾ ಮೂರನೇ ಅಲೆ ಜುಲೈ-ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ ಎಂದು ಈ ಹಿಂದೆಯೇ ತಜ್ಞರು ಹೇಳಿದ್ದರು ಹಾಗೂ ಅಕ್ಟೋಬರ್​ ತಿಂಗಳಿನಲ್ಲಿ ಅದು ಉತ್ತುಂಗವನ್ನು ತಲುಪಲಿದೆ ಎಂದೂ ತಿಳಿಸಿದ್ದಾರೆ 2. ಲೆಕ್ಕಾಚಾರಕ್ಕಿಂತಲೂ ವಾಸ್ತವ ವಿಭಿನ್ನವಾಗಿರಲಿದ್ದು, ಅದಕ್ಕೆ ಜನರ ನಡವಳಿಕೆ ಹಾಗೂ ಲಸಿಕೆ ವಿತರಣೆ ಬಹುಮುಖ್ಯ ಕಾರಣವಾಗಲಿದೆ 3. ಮೂರನೇ ಅಲೆಯ ಹೊಡೆತ ದೇಶಾದ್ಯಂತ ಒಂದೇ ರೀತಿ ಇರುವುದಿಲ್ಲ. ಜನ ಎಷ್ಟರ ಮಟ್ಟಿಗೆ ಕೊರೊನಾ ಲಸಿಕೆ ತೆಗೆದುಕೊಳ್ಳುತ್ತಾರೆ ಹಾಗೂ ನಿಯಮಾವಳಿಗಳನ್ನು ಪಾಲಿಸುತ್ತಾರೆ ಎನ್ನುವುದರ ಮೇಲೆ ಎದು ಅವಲಂಬಿತವಾಗಿರಲಿದೆ 4. ಮೂರನೇ ಅಲೆಯ ತೀವ್ರತೆ ಎರಡನೇ ಅಲೆಯಂತೆ ಇರುವ ಸಾಧ್ಯತೆ ಕಾಣಿಸುತ್ತಿಲ್ಲ 5. ಕೊರೊನಾ ನಿಯಮಾವಳಿಗಳನ್ನು ಸಡಿಲಿಸಿ ಅನ್​ಲಾಕ್​ ಘೋಷಿಸುತ್ತಿದ್ದಂತೆಯೇ ಕೆಲವೆಡೆ ಸೋಂಕು ಮತ್ತೆ ಏರಿಕೆಯಾಗಿದೆಯಾದರೂ ಅದನ್ನು ಮೂರನೇ ಅಲೆ ಎಂದು ಹೇಳುವುದು ಸಾಧ್ಯವಿಲ್ಲ. ಅದು ಎರಡನೇ ಅಲೆಯ ಮುಂದುವರೆದ ಭಾಗ ಎನ್ನಬಹುದು

(Number of waves does not matter here is what experts opinion on covid 3rd wave in India)

ಇದನ್ನೂ ಓದಿ: ಮೆಟ್ರೋದಲ್ಲಿ ಕೊರೊನಾ ವೈರಸ್ ಪೀಡಿತನಂತೆ ಪ್ರಾಂಕ್ ಮಾಡಿ ಜನರನ್ನು ಹೆದರಿಸಿದ್ದವನಿಗೆ ಎರಡು ವರ್ಷ ಜೈಲು ಶಿಕ್ಷೆ 

Holige Habba: ಕೊರೊನಾ ತೊಲಗಲಿ ಎಂದು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ, ಮನೆ ಮನೆಗಳಲ್ಲಿ ಹೋಳಿಗೆ ಘಮ

Follow us on

Related Stories

Most Read Stories

Click on your DTH Provider to Add TV9 Kannada