ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರಿಗೆ ಬಿಜೆಪಿಯಿಂದ 20-30 ಕೋಟಿ ರೂ. ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ಬಿಜೆಪಿಯ ವಿರುದ್ಧ ಮತ್ತೊಮ್ಮೆ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರನ್ನು ಪಕ್ಷಾಂತರ ಮಾಡಲು ಮನವೊಲಿಸಲು ಬಿಜೆಪಿ 20ರಿಂದ 30 ಕೋಟಿ ರೂ.ಗಳ ಆಮಿಷವೊಡ್ಡಿತ್ತು ಎಂದು ಪಕ್ಷದ ನಾಯಕ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪ ಮಾಡಿದ್ದಾರೆ. ಆದರೆ, ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ. ನ್ಯಾಷನಲ್ ಕಾನ್ಫರೆನ್ಸ್‌ನ ಮೈತ್ರಿ ಪಕ್ಷವಾದ ಕಾಂಗ್ರೆಸ್ ಈ ಆರೋಪವನ್ನು ಬಲವಾಗಿ ಬೆಂಬಲಿಸಿದೆ. ಒಮರ್ ಅಬ್ದುಲ್ಲಾ ಅವರ ಈ ಹೇಳಿಕೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರಿಗೆ ಬಿಜೆಪಿಯಿಂದ 20-30 ಕೋಟಿ ರೂ. ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ
Omar Abdullah

Updated on: Jul 11, 2026 | 9:46 PM

ಶ್ರೀನಗರ, ಜುಲೈ 11: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಇಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ (NC) ಶಾಸಕರಿಗೆ 20ರಿಂದ 30 ಕೋಟಿ ರೂ. ಹಣ, ಸಚಿವ ಸ್ಥಾನ ಮತ್ತು ಜಮ್ಮು-ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಕೊಡಿಸುವ ಆಮಿಷಗಳನ್ನು ಬಿಜೆಪಿ ಒಡ್ಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಜಮ್ಮು ಕಾಶ್ಮೀರದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಶ್ರೀನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ. ತಮ್ಮ ಪಕ್ಷದ ಜಮ್ಮು ಭಾಗದ ಶಾಸಕರೊಬ್ಬರನ್ನು ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಒಮರ್ ಅಬ್ದುಲ್ಲಾ ಬಹಿರಂಗಪಡಿಸಿದ್ದಾರೆ.


“ಬಿಜೆಪಿ ಅಧಿಕಾರಿಯೊಬ್ಬರು ಮುಚ್ಚಿದ ಕೋಣೆಯಲ್ಲಿ ನಮ್ಮ ಜಮ್ಮುವಿನ ಶಾಸಕರೊಬ್ಬರಿಗೆ, ‘ನಾವು ನಿಮಗೆ 20ರಿಂದ 30 ಕೋಟಿ ರೂ. ಹಣ, ಒಂದು ಸಚಿವ ಸ್ಥಾನ ಮತ್ತು ರಾಜ್ಯ ಸ್ಥಾನಮಾನ ನೀಡುತ್ತೇವೆ. ನೀವು ನಮ್ಮೊಂದಿಗೆ ಬನ್ನಿ’ ಎಂದು ಆಫರ್ ನೀಡಿದ್ದಾರೆ. ಆದರೆ, ತಮ್ಮ ಶಾಸಕರು ಈ ಆಫರ್ ಅನ್ನು ತಕ್ಷಣವೇ ತಿರಸ್ಕರಿಸಿದ್ದಾರೆ ಮತ್ತು ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ” ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!

“ಬಿಜೆಪಿ ನಾಯಕರೇ, ನಮ್ಮನ್ನು ಅಷ್ಟು ದುರ್ಬಲರು ಎಂದು ಭಾವಿಸಬೇಡಿ. ನಿಮಗೆ ಹಿಂಬಾಗಿಲಿನಿಂದ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪ್ರವೇಶವಿಲ್ಲ. ಸದ್ಯಕ್ಕೆ ಇಲ್ಲಿನ ಜನತೆ ನಿಮ್ಮನ್ನು ಹಿಂದಿನ ಸೀಟಿನಲ್ಲಿ ಕೂರಿಸಿದ್ದಾರೆ, ನೀವು ಅಲ್ಲೇ ಇರಬೇಕಾಗುತ್ತದೆ” ಎಂದು ಅವರು ಗುಡುಗಿದ್ದಾರೆ.

ಜುಲೈ 20ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ:

ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕೆಂದು ಆಗ್ರಹಿಸಿ ಜುಲೈ 20ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಇನ್ನು ಅಧಿಕೃತ ಅನುಮತಿ ಸಿಗದಿದ್ದರೂ ಪ್ರತಿಭಟನೆ ನಡೆಸುವುದು ಖಚಿತ ಎಂದು ಒಮರ್ ಅಬ್ದುಲ್ಲಾ ಪುನರುಚ್ಚರಿಸಿದ್ದಾರೆ. ಈ ಪ್ರತಿಭಟನೆಗೆ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 52 ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಡಿಎಂಕೆ ಸೇರಲು10 ಶಾಸಕರು ಸಿದ್ಧರಿದ್ದಾರೆ ಎಂದು ಆಮಿಷ; ಟಿವಿಕೆ ಎಂಎಲ್​ಎ ಇಳಯರಾಜ ಆರೋಪ

ಒಮರ್​ಗೆ ಕಾಂಗ್ರೆಸ್ ಬೆಂಬಲ:

ಜಮ್ಮು-ಕಾಶ್ಮೀರ ಸರ್ಕಾರದ ಮೈತ್ರಿಕೂಟದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಬಿಜೆಪಿಯ ವಿರುದ್ಧದ ಒಮರ್ ಅಬ್ದುಲ್ಲಾ ಅವರ ಆರೋಪಗಳನ್ನು ಬಲವಾಗಿ ಬೆಂಬಲಿಸಿದೆ. ಇದಕ್ಕೆ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್ ಪ್ರತಿಕ್ರಿಯಿಸಿದ್ದು, “ಶಾಸಕರಿಗೆ 30 ಕೋಟಿ ಆಫರ್ ನೀಡಿ ಪಕ್ಷ ಒಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಇಂತಹ ಭ್ರಷ್ಟ ಕ್ರಮಗಳ ಬಗ್ಗೆ ದೇಶಕ್ಕೆ ಉತ್ತರಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.


ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, “ಇದು ಮೋದಿ-ಶಾ ಜೋಡಿಯ ಹಳೆಯ ಟೂಲ್‌ಕಿಟ್ ಮತ್ತು ಅವರ ಎಂದಿನ ಆಪರೇಷನ್ ಮಾದರಿ” ಎಂದು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಬಲಾಬಲ:

ಪ್ರಸ್ತುತ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಒಟ್ಟು 95 ಸದಸ್ಯರ ಬಲದ (5 ನಾಮನಿರ್ದೇಶಿತ ಸದಸ್ಯರು ಸೇರಿ) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 48 ಶಾಸಕರ ಬೆಂಬಲ ಬೇಕು. ಆಡಳಿತಾರೂಢ ಮೈತ್ರಿಕೂಟ (52 ಶಾಸಕರು): ನ್ಯಾಷನಲ್ ಕಾನ್ಫರೆನ್ಸ್ (41), ಕಾಂಗ್ರೆಸ್ (6), ಸಿಪಿಐ(ಎಂ) (1) ಮತ್ತು 4 ಪಕ್ಷೇತರ ಶಾಸಕರು. ಪ್ರತಿಪಕ್ಷವಾದ ಬಿಜೆಪಿ 29 ಶಾಸಕರನ್ನು ಹೊಂದಿದ್ದು, ಪಿಡಿಪಿ 4 ಸ್ಥಾನಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us