ಒಂದಲ್ಲ ಒಂದು ದಿನ ಹಿಜಾಬಿಯೇ ಭಾರತದ ಪ್ರಧಾನ ಮಂತ್ರಿಯಾಗುತ್ತಾಳೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅಸಾದುದ್ದೀನ್ ಓವೈಸಿ, ನಾನು ಮುಸ್ಕಾನ್ ಖಾನ್ ಮತ್ತುಆಕೆಯ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಆಕೆಯ ಶಿಕ್ಷಣದ ಬಗೆಗಿನ ಬದ್ಧತೆ ಮತ್ತು ಧರ್ಮ ಹಾಗೂ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಿರುವ ರೀತಿಗೆ ಖುಷಿಯಾಗಿದೆ ಎಂದು ಹೇಳಿದ್ದರು.
ದೆಹಲಿ: ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ಇದೀಗ ರಾಷ್ಟ್ರವ್ಯಾಪಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನ ಕೂಡ ಈ ವಿವಾದದಲ್ಲಿ ಮೂಗು ತೂರಿಸಿತ್ತು. ಅದಕ್ಕೆ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ತಿರುಗೇಟು ಕೂಡ ನೀಡಿದ್ದರು. ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ, ಭಾರತದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಬರಬೇಡಿ ಎಂದು ಹೇಳಿದ್ದರು. ಇದೀಗ ಹಿಜಾಬ್ ಬಗ್ಗೆ ಮತ್ತೊಂದು ಹೇಳಿಕೆ ನೀಡಿರುವ ಅಸಾದುದ್ದೀನ್ ಓವೈಸಿ, ಒಂದಲ್ಲ ಒಂದು ದಿನ ಹಿಜಾಬಿಯೇ ಭಾರತದ ಪ್ರಧಾನಿಯಾಗುತ್ತಾಳೆ ಎಂದಿದ್ದಾರೆ. ಹಿಜಾಬಿ ಎಂದರೆ ಹಿಜಾಬ್ ಧರಿಸುವ ಮಹಿಳೆ ಎಂದರ್ಥ. ಉತ್ತರ ಪ್ರದೇಶದ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸುವ ಹೆಣ್ಣುಮಕ್ಕಳು ಜಿಲ್ಲಾಧಿಕಾರಿಯಾಗಬಹುದು, ವೈದ್ಯರಾಗಬಹುದು ಅಷ್ಟೇ ಏಕೆ? ಮುಂದೊಂದು ದಿನ ಈ ದೇಶದ ಪ್ರಧಾನಮಂತ್ರಿಯೂ ಆಗುತ್ತಾರೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ.
इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022
ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಸಾದುದ್ದೀನ್ ಓವೈಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ, ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಹಾಗೇ ಮಾತನಾಡುವಾಗಲೆಲ್ಲ ತ್ರಿವಳಿ ತಲಾಖ್ ಕಾನೂನನ್ನು ಉಲ್ಲೇಖಿಸುತ್ತಾರೆ. ಆದರೆ ಈಗ ಹಿಜಾಬ್ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಾಬ್ ಮುಸ್ಲಿಂ ಹುಡುಗಿಯರ ಹಕ್ಕು. ಆದರೆ ಅದನ್ನು ಧರಿಸಲು ನಿರಾಕರಿಸಲಾಗುತ್ತಿದೆ ಎಂದು ಹೇಳಿದ ಅಸಾದುದ್ದೀನ್ ಓವೈಸಿ, ಹಿಜಾಬ್ ಹಕ್ಕು ಪ್ರತಿಪಾದಿಸುತ್ತಿರುವ ಕರ್ನಾಟಕದ ಮಹಿಳೆಯರಿಗೆ ನನ್ನ ಸಲಾಂ ಎಂದು ಹೇಳಿದರು. ಅಷ್ಟೇ ಅಲ್ಲ, ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಎಂದು ಕೂಗಿದವರಿಗೆ ಪ್ರತಿಯಾಗಿ, ಅಲ್ಲಾ ಹು ಅಕ್ಬರ್ ಎಂದು ಕೂಗಿದ ಮಂಡ್ಯದ ಮುಸ್ಕಾನ್ ಖಾನ್ರನ್ನೂ ಶ್ಲಾಘಿಸಿದರು.
ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅಸಾದುದ್ದೀನ್ ಓವೈಸಿ, ನಾನು ಮುಸ್ಕಾನ್ ಖಾನ್ ಮತ್ತುಆಕೆಯ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಆಕೆಯ ಶಿಕ್ಷಣದ ಬಗೆಗಿನ ಬದ್ಧತೆ ಮತ್ತು ಧರ್ಮ ಹಾಗೂ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಿರುವ ರೀತಿಗೆ ಖುಷಿಯಾಗಿದೆ. ಅವಳು ಹೀಗೇ ಮುಂದುವರಿಯಲಿ. ಅವಳ ನಿರ್ಭೀತಿ ನಮ್ಮೆಲ್ಲರಿಗೂ ಧೈರ್ಯದ ಮೂಲವಾಗಿದೆ ಎಂದು ಹೇಳಿದ್ದರು. ಇನ್ನು ಕರ್ನಾಟಕ ಹಿಜಾಬ್ ವಿವಾದ ಸದ್ಯ ಹೈಕೋರ್ಟ್ ಮೆಟ್ಟಿಲೇರಿದೆ. ಮುಂದಿನ ತೀರ್ಪಿನವರೆಗೂ ಶಾಲಾ-ಕಾಲೇಜುಗಳಿಗೆ ಧರ್ಮ ಪ್ರತಿಬಿಂಬಕ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಮಧ್ಯಂತರ ತೀರ್ಪನ್ನು ಕೋರ್ಟ್ ನೀಡಿದೆ. ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಹಿಂದೇಟು ಹಾಕಿದೆ.
ಇದನ್ನೂ ಓದಿ: ₹ 200 ಕೋಟಿ ಮೌಲ್ಯದ 2 ಲಕ್ಷ ಕೆಜಿ ಗಾಂಜಾಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ ಆಂಧ್ರಪ್ರದೇಶ ಪೊಲೀಸ್; ವಿಡಿಯೊ ನೋಡಿ
Published On - 11:30 am, Sun, 13 February 22