
ಮುಂಬೈ, ಜೂನ್ 13: ದೇಶವನ್ನೇ ಆಘಾತಕ್ಕೀಡುಮಾಡಿದ್ದ ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತ (Ahmedabad Plain crash) ಸಂಭವಿಸಿ ಶುಕ್ರವಾರಕ್ಕೆ (ಜೂನ್ 12) ಸರಿಯಾಗಿ ಒಂದು ವರ್ಷ ಆಗಿದೆ. ಆದರೆ ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಯಾವುದೇ ಅಂತಿಮ ವರದಿಯನ್ನು ಬಿಡುಗಡೆ ಮಾಡಿಲ್ಲ. ಈ ಮೂಲಕ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿದ್ದ 12 ತಿಂಗಳ ಕಡ್ಡಾಯ ಗಡುವನ್ನು ಭಾರತ ಮೀರಿದಂತಾಗಿದೆ.
ವಿಮಾನ ಅಪಘಾತಗಳ ತನಿಖೆಗೆ ಮಾರ್ಗಸೂಚಿ ನೀಡುವ ICAO ನಿಯಮಾವಳಿಗಳ ಪ್ರಕಾರ, ದುರಂತ ನಡೆದ ಒಂದು ವರ್ಷದೊಳಗೆ ಅಂತಿಮ ವರದಿ ನೀಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಸಾರ್ವಜನಿಕರ ಮಾಹಿತಿಗಾಗಿ ಮಧ್ಯಂತರ ವರದಿಯನ್ನಾದರೂ ಪ್ರಕಟಿಸಬೇಕು. ಆದರೆ ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು, ವಿಮಾನದ ವ್ಯವಸ್ಥೆಗಳು, ಬ್ಲ್ಯಾಕ್ ಬಾಕ್ಸ್ ಡೇಟಾ ಹಾಗೂ ಇಂಜಿನ್ ಘಟಕಗಳ ತಾಂತ್ರಿಕ ವಿಶ್ಲೇಷಣೆ ಪ್ರಗತಿಯಲ್ಲಿದೆ. ನಿಖರ ವೈಜ್ಞಾನಿಕ ಪುರಾವೆಗಳಿಗಾಗಿ ಮತ್ತಷ್ಟು ತಾಂತ್ರಿಕ ಮೌಲ್ಯಮಾಪನ ಅಗತ್ಯವಿದೆ. ಹೀಗಾಗಿ ವರದಿ ವಿಳಂಬವಾಗುತ್ತಿದೆ ಎಂಬ ಸಬೂಬು ನೀಡಿದೆ.
2025ರ ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 171 (ಬೋಯಿಂಗ್ 787 ಡ್ರೀಮ್‌ಲೈನರ್) ಟೇಕ್-ಆಫ್ ಆದ ಕೇವಲ 32 ಸೆಕೆಂಡುಗಳಲ್ಲಿ ಪಕ್ಕದಲ್ಲೇ ಇದ್ದ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಸಂಕೀರ್ಣದ ಮೇಲೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ ಭಾರಿ ಪ್ರಮಾಣದ ಇಂಧನದಿಂದಾಗಿ ಇಡೀ ಪ್ರದೇಶ ಹೊತ್ತಿ ಉರಿದು ಸುಮಾರು 1000 ಡಿಗ್ರಿ ಸೆಲ್ಸಿಯಸ್ ತಾಪಮಾನದ ಬೆಂಕಿಯ ಜ್ವಾಲೆ ಸೃಷ್ಟಿಯಾಗಿತ್ತು. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ 12 ಸಿಬ್ಬಂದಿ ಹಾಗೂ 229 ಪ್ರಯಾಣಿಕರು ಸೇರಿದಂತೆ 242 ಜನರ ಪೈಕಿ 241 ಜನರು ಸಜೀವ ದಹನವಾಗಿದ್ದರು. ಕೇವಲ ಒಬ್ಬ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದ. ಇದರೊಂದಿಗೆ ವಿಮಾನ ಪತನಗೊಂಡ ಹಾಸ್ಟೆಲ್‌ನಲ್ಲಿದ್ದ 19 ಅಮಾಯಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಒಟ್ಟು 260 ಜೀವಗಳನ್ನು ಬಲಿ ಪಡೆದುಕೊಂಡಿದ್ದ ಈ ದುರಂತವು ಭಾರತದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವಾಗಿ ದಾಖಲಾಗಿದೆ.
ಈ ದುರಂತದ ತನಿಖೆಯ ಸುತ್ತ ಈಗಾಗಲೇ ಹತ್ತಾರು ವಿವಾದಗಳು ಎದ್ದಿವೆ. ಪೈಲಟ್‌ನ ಉದ್ದೇಶಪೂರ್ವಕ ತಪ್ಪಿನಿಂದ ವಿಮಾನ ಪತನಗೊಂಡಿದೆ ಎನ್ನುವುದು ಒಂದು ಸಿದ್ಧಾಂತವಾದರೆ, ಬೋಯಿಂಗ್ 787 ವಿಮಾನದ ಇಂಧನ ಸ್ವಿಚ್‌ಗಳಲ್ಲಿ ಉಂಟಾದ ಗಂಭೀರ ತಾಂತ್ರಿಕ ದೋಷವೇ ಇಂಜಿನ್ ಸ್ಥಗಿತಗೊಳ್ಳಲು ಕಾರಣ ಎಂದು ಇನ್ನೊಂದು ಸಿದ್ಧಾಂತ ಹೇಳುತ್ತದೆ. ಈ ಸೂಕ್ಷ್ಮ ಹಿನ್ನೆಲೆಯಲ್ಲಿ ಮಧ್ಯಂತರ ವರದಿ ಬಿಡುಗಡೆ ಮಾಡಿದರೆ ವದಂತಿಗಳು ಹೆಚ್ಚಾಗುತ್ತವೆ ಮತ್ತು ತನಿಖೆಯ ಹಾದಿ ತಪ್ಪುತ್ತದೆ. ಹಾಗಾಗಿ ಅರೆಬರೆ ಮಾಹಿತಿ ಇರುವ ಮಧ್ಯಂತರ ವರದಿ ಸದ್ಯಕ್ಕೆ ಬೇಡ ಎಂದು ಭಾರತೀಯ ಪೈಲಟ್‌ಗಳ ಒಕ್ಕೂಟ (FIP) ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದೆ.
ಇದನ್ನೂ ಓದಿ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೆ ಕೊನೆಗೂ ಕಾರಣ ಪತ್ತೆ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ
ದಶಕಗಳ ಕಾಲ ಭಾರತವು 12 ತಿಂಗಳ ತನಿಖಾ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿತ್ತು. ಆದರೆ 2010ರ ಮಂಗಳೂರು ವಿಮಾನ ದುರಂತ ಹಾಗೂ 2020ರ ಕೋಝಿಕ್ಕೋಡ್ ದುರಂತದ ನಂತರ ಈ ಬಾರಿಯೇ ತನಿಖಾ ವರದಿಗಳು ವಿಳಂಬವಾಗಿವೆ ಎಂದು ಹೇಳಲಾಗಿದೆ. ಜಾಗತಿಕವಾಗಿ ನೋಡಿದರೆ, 2019ರ ಇಥಿಯೋಪಿಯನ್ ಏರ್‌ಲೈನ್ಸ್ ಕ್ರಾಶ್ ವರದಿ ಬರಲು ಮೂರೂವರೆ ವರ್ಷ ಬೇಕಾಗಿತ್ತು. ಇತ್ತೀಚಿನ ಐಎಟಿಎ (IATA) ಸಮೀಕ್ಷೆಯ ಪ್ರಕಾರ ಜಗತ್ತಿನ ಶೇ 55 ರಷ್ಟು ವಿಮಾನ ಅಪಘಾತಗಳ ತನಿಖಾ ವರದಿಗಳು ನಿಗದಿತ ಒಂದು ವರ್ಷದೊಳಗೆ ಪ್ರಕಟವಾಗುತ್ತಿಲ್ಲ ಎನ್ನುವುದು ಬಹಿರಂಗವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ