ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ; ಸರ್ಕಾರಕ್ಕೆ ಹೆಚ್ಚಿನ ವಿಪಕ್ಷಗಳ ಬೆಂಬಲ; ಬಿಜೆಪಿಯಿಂದ ಸಭಾತ್ಯಾಗ

Tamil Nadu Assembly Passes Resolution Against NEET, BJP Stages Walkout: ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲು ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿದೆ. ಸಿಎಂ ವಿಜಯ್ ನೇತೃತ್ವದ ಸರ್ಕಾರದ ಈ ನಿರ್ಣಯವನ್ನು ಡಿಎಂಕೆ, ಎಡಿಎಂಕೆ, ಪಿಎಂಕೆ ಇತ್ಯಾದಿ ಹೆಚ್ಚಿನ ವಿಪಕ್ಷಗಳು ಬಂಬಲಿಸಿವೆ. ಬಿಜೆಪಿ ಈ ನಿರ್ಣಯ ವಿರೋಧಿಸಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದೆ.

ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ; ಸರ್ಕಾರಕ್ಕೆ ಹೆಚ್ಚಿನ ವಿಪಕ್ಷಗಳ ಬೆಂಬಲ; ಬಿಜೆಪಿಯಿಂದ ಸಭಾತ್ಯಾಗ
ತಮಿಳುನಾಡು ವಿಧಾನಸಭೆ
Image Credit source: PTI

Updated on: Aug 11, 2026 | 1:50 PM

ನವದೆಹಲಿ, ಆಗಸ್ಟ್ 11: ತಮಿಳುನಾಡು ವಿಧಾನಸಭೆಯಲ್ಲಿ ನೀಟ್ (NEET) ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ಸಿಎಂ ವಿಜಯ್ ನೇತೃತ್ವದ ಸರ್ಕಾರವು ಇಂದು ಮಂಗಳವಾರ ಮಹತ್ವದ ನಿರ್ಣಯವನ್ನು ಮಂಡಿಸಿದೆ. ಬಿಜೆಪಿ ಹೊರತುಪಡಿಸಿ ಹೆಚ್ಚಿನ ವಿಪಕ್ಷಗಳು ಸರ್ಕಾರದ ಈ ನಿರ್ಣಯಕ್ಕೆ ಬೆಂಬಲ ನೀಡಿವೆ. ಬಿಜೆಪಿ ಸದಸ್ಯರು ಈ ನಿರ್ಣಯ ವಿರೋದಿಸಿ ಸದನದಿಂದ ಹೊರನಡೆದರು.

ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್’ ತಮಿಳುನಾಡಿನ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರ ವಾದಿಸಿ, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿತು.

ರಾಜ್ಯದ ಹಕ್ಕುಗಳ ಪ್ರತಿಪಾದನೆ: ಶಿಕ್ಷಣವು ರಾಜ್ಯ ಪಟ್ಟಿಯ ವಿಷಯವಾಗಿದ್ದು, ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ಹೇರಿರುವುದು ಫೆಡರಲ್ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದು ಸರ್ಕಾರದ ಮುಖ್ಯ ವಾದ. ತಮಿಳುನಾಡು ತನ್ನದೇ ಆದ ಪ್ರವೇಶ ಪರೀಕ್ಷಾ ವಿಧಾನವನ್ನು ಹೊಂದಲು ಬಯಸುತ್ತಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ

ಬಿಜೆಪಿಯಿಂದ ವಿರೋಧ ಮತ್ತು ಸಭೆತ್ಯಾಗ: ಈ ನಿರ್ಣಯಕ್ಕೆ ತಮಿಳುನಾಡು ಬಿಜೆಪಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿರ್ಣಯವನ್ನು ಮಂಡಿಸಿದ ತಕ್ಷಣ ಬಿಜೆಪಿ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿ, ಸಭಾಧ್ಯಕ್ಷರ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ, ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಿಂದ ವಾಕೌಟ್ ಮಾಡಿದರು.

ಸರ್ಕಾರದ ಸಮರ್ಥನೆ: ವಿರೋಧ ಪಕ್ಷದ ನಾಯಕರು ಈ ನಿರ್ಣಯವನ್ನು ಕೇವಲ ರಾಜಕೀಯ ಪ್ರೇರಿತ ಎಂದು ಟೀಕಿಸಿದರೆ, ಸಿಎಂ ವಿಜಯ್ ಅವರು, “ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

ರಾಜ್ಯ ಸರ್ಕಾರವು ಮಂಡಿಸಿರುವ ಈ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು. ಅಲ್ಲಿಂದ ಇದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ರವಾನೆಯಾಗಬೇಕಿದೆ. ಈ ಪ್ರಕ್ರಿಯೆಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ನೀಟ್ ವಿರೋಧಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us