ಫಾದರ್ ಸ್ಟಾನ್ ಸ್ವಾಮಿ ನಿಧನ; ರಾಷ್ಟ್ರಪತಿಗಳಿಗೆ ಪತ್ರ ಬರೆದು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕರು
ಸೋನಿಯಾ ಗಾಂಧಿ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್, ಹೇಮಂತ್ ಸೊರೇನ್, ಹೆಚ್.ಡಿ. ದೇವೇಗೌಡ, ಫರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್, ಡಿ. ರಾಜ, ಸೀತಾರಾಮ್ ಯೆಚೂರಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ಗೆ ಪತ್ರ ಬರೆದಿದ್ದಾರೆ.
ದೆಹಲಿ: ಫಾದರ್ ಸ್ಟಾನ್ ಸ್ವಾಮಿ ನಿಧನದ ಬಗ್ಗೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದುಃಖ ವ್ಯಕ್ತಪಡಿಸಿದ್ದಾರೆ. ಸ್ಟಾನ್ ಸ್ವಾಮಿಯನ್ನು ಕೆಟ್ಟದಾಗಿ ನಡೆಸಿಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಹಾಗೂ ಇದಕ್ಕೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಸೋನಿಯಾ ಗಾಂಧಿ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್, ಹೇಮಂತ್ ಸೊರೇನ್, ಹೆಚ್.ಡಿ. ದೇವೇಗೌಡ, ಫರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್, ಡಿ. ರಾಜ, ಸೀತಾರಾಮ್ ಯೆಚೂರಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ಗೆ ಪತ್ರ ಬರೆದಿದ್ದಾರೆ.
84 ವರ್ಷ ವಯಸ್ಸಿನ ಫಾದರ್ ಹಾಗೂ ಹೋರಾಟಗಾರ ಸ್ಟಾನ್ ಸ್ವಾಮಿ ಜಾರ್ಖಂಡ್ ಭಾಗದ ಆದಿವಾಸಿ ಜನಾಂಗದ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದ್ದರು. ಅವರನ್ನು ಕಳೆದ ಅಕ್ಟೋಬರ್ನಲ್ಲಿ ಯುಎಪಿಎ ಹಾಗೂ ಭಿಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು ಎಂದು ಪತ್ರವನ್ನು ಆರಂಭಿಸಲಾಗಿದೆ.
ಅವರಿಗೆ ಪಾರ್ಕಿನ್ಸನ್ ಖಾಯಿಲೆ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಇದ್ದರೂ ಚಿಕಿತ್ಸೆ ನಿರಾಕರಿಸಲಾಗಿತ್ತು. ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಜೈಲಿನಲ್ಲಿ ಸಣ್ಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೊರೊನಾ ಕೇಸ್ನಲ್ಲಿ ಅತಿಯಾದ ಏರಿಕೆ ಕಂಡುಬಂದಿದ್ದ ತಲೋಜಾ ಜೈಲಿನಿಂದ ಅವರನ್ನು ಸ್ಥಳಾಂತರಿಸುವ ಬಗ್ಗೆಯೂ ಬಹಳಷ್ಟು ಬೇಡಿಕೆಗಳನ್ನು ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
ತನ್ನನ್ನು ಮನೆಗೆ ಕಳುಹಿಸುವ ಬಗ್ಗೆ ಹಾಗೂ ಜಾಮೀನು ನೀಡುವ ಬಗ್ಗೆ ಮಾಡಿದ ಮನವಿಯೂ ತಿರಸ್ಕರಿಸಲ್ಪಟ್ಟಿದ್ದವು. ಈ ಮಧ್ಯೆ ಬಾಂಬೆ ಹೈಕೋರ್ಟ್ನ ಮಧ್ಯಸ್ಥಿಕೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಕೊವಿಡ್-19 ಕಾರಣದಿಂದ ಆರೋಗ್ಯ ಹದಗೆಡುತ್ತಿರುವಾಗಲಾದರೂ ಈ ಕ್ರಮ ಕೈಗೊಂಡ ಬಾಂಬೆ ಹೈಕೋರ್ಟ್ಗೆ ಧನ್ಯವಾದಗಳು. ಆದರೆ, ಇದು ನ್ಯಾಯಾಂಗ ಬಂಧನದಲ್ಲಿ ಇರುವಾಗಲೇ ಸಂಭವಿಸಬಹುದಾದ ಸಾವನ್ನು ತಡೆಗಟ್ಟಲು ಅದಾಗಲೇ ಬಹಳ ತಡವಾಗಿತ್ತು ಎಂದು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಪ್ರಕರಣದಲ್ಲಿ ತಪ್ಪು ಕೇಸ್ ದಾಖಲಿಸಿ, ಸ್ಟಾನ್ ಸ್ವಾಮಿ ಜೈಲಿನಲ್ಲೇ ಇರುವಂತೆ ಮಾಡಿದ ಹಾಗೂ ಅಮಾನವೀಯವಾಗಿ ನಡೆಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಮ್ಮ ಸರ್ಕಾರಕ್ಕೆ ತಕ್ಷಣ ಆದೇಶಿಸಬೇಕು ಎಂದು ರಾಷ್ಟ್ರಪತಿಗಳಲ್ಲಿ ವಿರೋಧ ಪಕ್ಷದವರು ಕೇಳಿಕೊಳ್ಳುತ್ತೇವೆ. ಹಾಗೂ ಭಿಮಾ ಕೊರೆಗಾಂವ್ ಪ್ರಕರಣ ಮತ್ತು ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯುಎಪಿಎ, ದೇಶದ್ರೋಹ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡು ಜೈಲುವಾಸ ಅನುಭವಿಸುತ್ತಿರುವವರನ್ನು ಬಿಡುಗಡೆಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜಾಮೀನು ಅರ್ಜಿ ವಿಚಾರಣೆಯ ದಿನವೇ ಭೀಮಾ ಕೊರೆಗಾಂವ್ ಗಲಭೆ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ
ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?