ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ವಿಪಕ್ಷಗಳ ಸಂಸದರಿಂದ ಅವಿಶ್ವಾಸ ನಿರ್ಣಯ ಮಂಡನೆ

|

Updated on: Dec 10, 2024 | 4:36 PM

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಈ ನಿರ್ಣಯಕ್ಕೆ 61 ಸಂಸದರು ಸಹಿ ಹಾಕಿದ್ದಾರೆ. ಪಕ್ಷಪಾತ ಧೋರಣೆಯ ಆರೋಪದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದನದ ಕಲಾಪದಲ್ಲಿ ಅವರು ಆಡಳಿತ ಪಕ್ಷಕ್ಕೆ ಒಲವು ತೋರಿದ್ದಾರೆ ಮತ್ತು ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ವಿಪಕ್ಷಗಳ ಸಂಸದರಿಂದ ಅವಿಶ್ವಾಸ ನಿರ್ಣಯ ಮಂಡನೆ
ಜಗದೀಪ್ ಧಂಖರ್
Follow us on

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ವಿರೋಧ ಪಕ್ಷವಾದ ಇಂಡಿಯಾ ಬಣಕ್ಕೆ ಸೇರಿದ ಎಲ್ಲಾ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿವೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಇಂದು ಖಚಿತಪಡಿಸಿದ್ದಾರೆ. ಜಗದೀಪ್ ಧಂಖರ್ ಸದನದ ಕಲಾಪಗಳನ್ನು ಅತ್ಯಂತ ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇಂಡಿಯಾ ಬಣದ ಪಕ್ಷಗಳಿಗೆ ಇದು ಅತ್ಯಂತ ನೋವಿನ ನಿರ್ಧಾರವಾಗಿದೆ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾವು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಈ ಪ್ರಸ್ತಾವನೆಯನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಎಂಎಂ, ಎಎಪಿ ಮತ್ತು ಡಿಎಂಕೆ ಸೇರಿದಂತೆ ಸುಮಾರು 61 ವಿರೋಧ ಪಕ್ಷದ ಸಂಸದರಿಂದ ಈ ಪ್ರಸ್ತಾಪಕ್ಕೆ ಬೆಂಬಲದ ಸಹಿ ಸಿಕ್ಕಿದೆ. ರಾಜ್ಯಸಭಾ ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲು ಅಗತ್ಯವಿರುವ ಕನಿಷ್ಠ ಸಂಖ್ಯೆ 50 ಆಗಿದೆ.

ಇದನ್ನೂ ಓದಿ: ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ: ಸಂಸತ್ತಿನಲ್ಲಿ ಜಗದೀಪ್ ಧನ್ಖರ್ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ

ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ಅಮೆರಿಕದ ಬಿಲಿಯನೇರ್ ಜಾರ್ಜ್ ಸೊರೊರ್ಸ್ ನಡುವಿನ ಸಂಬಂಧದ ಬಗ್ಗೆ ವಾದ-ವಿವಾದಗಳಿಂದ ರಾಜ್ಯಸಭೆಯನ್ನು ಇಂದು ಮತ್ತೆ ಮುಂದೂಡಲಾಯಿತು. ಎನ್‌ಡಿಎ ಮತ್ತು ಇಂಡಿಯಾ ಬಣವು ಸದನದ ಕಾರ್ಯನಿರ್ವಹಣೆಗೆ ಅವಕಾಶ ನೀಡಲಿಲ್ಲ ಎಂದು ಪರಸ್ಪರ ಆರೋಪ ಮಾಡುತ್ತಲೇ ಇತ್ತು.

ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಒತ್ತಾಯಿಸಿ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದರು. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಅವರ ವ್ಯಂಗ್ಯಚಿತ್ರಗಳನ್ನು ಹಿಡಿದುಕೊಂಡು “ಮೋದಿ ಅದಾನಿ ಭಾಯಿ ಭಾಯಿ” ಎಂಬ ಘೋಷಣೆಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಜಗದೀಪ್ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಇಂಡಿಯಾ ಬಣ ನಾಯಕರ ಪ್ಲಾನ್

ಆಡಳಿತ ಪಕ್ಷವು ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದಿರುವುದು ದೇಶದ ದೌರ್ಭಾಗ್ಯ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಸಮಸ್ಯೆಗಳನ್ನು ಚರ್ಚಿಸಲು ಸಂಸತ್ತನ್ನು ಕರೆಯಲಾಗಿದೆ. ಆಡಳಿತ ಪಕ್ಷವು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ