
ನವದೆಹಲಿ, ಜೂನ್ 22: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ‘ಆಧಾರ್ ಆ್ಯಪ್’ (ಆಧಾರ್ ತಂತ್ರಾಂಶ) ಕೇವಲ ಐದೇ ತಿಂಗಳಲ್ಲಿ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದೆ. ಈ ಅಲ್ಪಾವಧಿಯಲ್ಲಿಯೇ ಇದು ಬರೋಬ್ಬರಿ 31 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ತಂತ್ರಜ್ಞಾನದ ಮೂಲಕ ಜನರ ಬೆರಳ ತುದಿಗೆ ಸೇವೆಗಳನ್ನು ತಲುಪಿಸುವ ಸರ್ಕಾರದ ಪ್ರಯತ್ನಕ್ಕೆ ಸಾರ್ವಜನಿಕರಿಂದ ದೃಢವಾದ ಬೆಂಬಲ ವ್ಯಕ್ತವಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಸಾರ್ವಜನಿಕರ ಜೀವನವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಹೊಸ ಆಧಾರ್ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜನರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನವೀಕರಣ (ಅಪ್‌ಡೇಟ್) ಸೇರಿದಂತೆ ಹಲವು ಪ್ರಮುಖ ಸೇವೆಗಳನ್ನು ನೇರವಾಗಿ ಪಡೆಯಬಹುದು.
ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಗುರುತನ್ನು ಸುಲಭವಾಗಿ ತೋರಿಸಲು, ಹಂಚಿಕೊಳ್ಳಲು ಮತ್ತು ಪರಿಶೀಲಿಸಲು ಈ ಆ್ಯಪ್ ಸಹಕಾರಿಯಾಗಿದೆ.
ಇದನ್ನೂ ಓದಿ: ಆಧಾರ್ ಅಪ್ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ
ದೈನಂದಿನ ಜೀವನದ ವಿವಿಧ ಅಗತ್ಯಗಳಿಗಾಗಿ ಈ ಆ್ಯಪ್ ಅನ್ನು ವ್ಯಾಪಕವಾಗಿ ಬಳಸಬಹುದಾಗಿದೆ. ಆಫ್‌ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿ (OVSE) ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೋಟೆಲ್‌ಗಳಲ್ಲಿ ಸುಲಭವಾಗಿ ಚೆಕ್-ಇನ್ ಆಗಬಹುದು. ಆಸ್ಪತ್ರೆ ದಾಖಲಾತಿ, ಸಂದರ್ಶಕರ ನಿರ್ವಹಣೆ, ವಿವಿಧ ಕಾರ್ಯಕ್ರಮಗಳ ಪ್ರವೇಶ, ಗಿಗ್ ಕಾರ್ಮಿಕರು (ತಾತ್ಕಾಲಿಕ ನೌಕರರು) ಮತ್ತು ಸೇವಾ ಪಾಲುದಾರರ ಗುರುತು ಪರಿಶೀಲನೆಯನ್ನು ಇದು ಅತ್ಯಂತ ಸರಳಗೊಳಿಸುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.