ಪಾಕ್ ಕುರಿತ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಬಿಜೆಪಿ ಆಕ್ರೋಶ

ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ನಂತರ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಆದರೆ, ಕರ್ನಾಟಕದ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಜೊತೆಗೆ ಯುದ್ಧ ಅನಿವಾರ್ಯವಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಂತಹ ಕಾಂಗ್ರೆಸ್ ನಾಯಕರ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲವೇ? ಎಂದು ರಾಷ್ಟ್ರೀಯ ಬಿಜೆಪಿ ಟೀಕಿಸಿದೆ. 'ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಪಾಕಿಸ್ತಾನ ಬಳಸುತ್ತಿದೆ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ತಮ್ಮ ನಾಯಕರ ಮೇಲೆ ಯಾವುದೇ ನಿಯಂತ್ರಣವಿಲ್ಲವೇ?' ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಪಾಕ್ ಕುರಿತ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಬಿಜೆಪಿ ಆಕ್ರೋಶ
Ravishankar Prasad

Updated on: Apr 28, 2025 | 5:00 PM

ನವದೆಹಲಿ, ಏಪ್ರಿಲ್ 28: ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam Attack) ಉಗ್ರರು ದಾಳಿ ನಡೆಸಿ 26 ಜನರನ್ನು ಬಲಿ ಪಡೆದಿದ್ದರು. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸುವ ಅನಿವಾರ್ಯತೆಯಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಪಾಕಿಸ್ತಾನದಲ್ಲಿ ದೊಡ್ಡ ಸುದ್ದಿಯಾಗಿ ಹರಿದಾಡಿತ್ತು. ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದು, ‘ಕಾಂಗ್ರೆಸ್ ನಾಯಕರು ಭಾರತದೊಳಗೆ ನೀಡುತ್ತಿರುವ ಹೇಳಿಕೆಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಈ ನಾಯಕರ ಮೇಲೆ ಕಾಂಗ್ರೆಸ್ ಮುಖ್ಯಸ್ಥರ ಮೇಲೆ ಹಿಡಿತವಿಲ್ಲವೇ?’ ಎಂದು ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಕೆಲವು ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳನ್ನು ಪಾಕಿಸ್ತಾನ ಭಾರತವನ್ನು ಕೆಣಕಲು ಬಳಸುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹರಿಹಾಯ್ದಿದ್ದು, ಈ ರೀತಿ ಹೇಳಿಕೆ ನೀಡುತ್ತಿರುವ ನಾಯಕರ ಮೇಲೆ ಅವರಿಗೆ ಯಾವುದೇ ನಿಯಂತ್ರಣವಿಲ್ಲವೇ? ಎಂದು ಪ್ರಶ್ನಿಸಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಕರ್ನಾಟಕದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾದ ನಂತರ ರವಿಶಂಕರ್ ಪ್ರಸಾದ್ ಈ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೆ ಮಹಾರಾಷ್ಟ್ರ ನಾಯಕ ವಿಜಯ್ ವಡೆಟ್ಟಿವಾರ್, ಕರ್ನಾಟಕ ಸಚಿವ ಆರ್.ಬಿ ತಿಮ್ಮಾಪುರ್ ಮತ್ತು ರಾಹುಲ್ ಗಾಂಧಿ ಅವರ ಬಾವ ರಾಬರ್ಟ್ ವಾದ್ರಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ, ನಾನು ಯುದ್ಧದ ಪರ ಅಲ್ಲ: ಸಿದ್ದರಾಮಯ್ಯ

“ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಪಕ್ಷದ ಮೇಲೆ ಯಾವುದೇ ನಿಯಂತ್ರಣವಿಲ್ಲವೇ? ಅಥವಾ ಅವರಿಬ್ಬರೂ ತಮ್ಮ ನಾಯಕರಿಗೆ ಪಾಕಿಸ್ತಾನದ ಪರ ಹೇಳಿಕೆಗಳನ್ನು ನೀಡುತ್ತಾ, ತಮ್ಮ ಇಚ್ಛೆಯಂತೆ ಮಾತನಾಡುವ ಸ್ವಾತಂತ್ರ್ಯವನ್ನು ನೀಡಿದ್ದಾರೆಯೇ” ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದ ಜೊತೆ ಯುದ್ಧದ ಅಗತ್ಯವಿಲ್ಲ ಎಂದು ಹೇಳಿದ್ದರು. “ದೇಶಾದ್ಯಂತ ಶಾಂತಿ ನೆಲೆಸಬೇಕು. ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಭದ್ರತೆಯನ್ನು ಬಲಪಡಿಸಬೇಕು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಜೊತೆ ಕೈ ಜೋಡಿಸಿತಾ ಚೀನಾ?

ಈ ಹೇಳಿಕೆಗಳ ನಂತರ, ಬಿಜೆಪಿ ಸಿದ್ದರಾಮಯ್ಯ ಅವರನ್ನು ‘ಪಾಕಿಸ್ತಾನ ರತ್ನ’ ಎಂದು ಕರೆದಿದ್ದ ಪಾಕಿಸ್ತಾನದ ಮಾಧ್ಯಮ ವರದಿಗಳನ್ನು ಪೋಸ್ಟ್ ಮಾಡಿತ್ತು. ನಂತರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದರು. ಯುದ್ಧವು ಯಾವಾಗಲೂ ಕೊನೆಯ ಅಸ್ತ್ರವಾಗಿರಬೇಕು. ಶತ್ರುವನ್ನು ಸೋಲಿಸಲು ಎಲ್ಲಾ ಇತರ ವಿಧಾನಗಳು ವಿಫಲವಾದಾಗ ಮಾತ್ರ ಯುದ್ಧವನ್ನು ಮಾಡಬೇಕು ಎಂದು ಹೇಳಿದ್ದರು.

ಇನ್ನೊಬ್ಬ ಹಿರಿಯ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಇಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. “ಭಯೋತ್ಪಾದಕರು ಜನರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಕೊಂದಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಭಯೋತ್ಪಾದಕರಿಗೆ ಇದೆಲ್ಲದಕ್ಕೂ ಸಮಯವಿದೆಯೇ? ಖಂಡಿತ ಈ ರೀತಿ ನಡೆದಿರಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಭಯೋತ್ಪಾದಕರಿಗೆ ಜಾತಿ ಅಥವಾ ಧರ್ಮವಿಲ್ಲ. ಈ ದಾಳಿಗೆ ಕಾರಣವಾಗಿರುವವರನ್ನು ಹಿಡಿದು ಕ್ರಮ ಕೈಗೊಳ್ಳಿ” ಎಂದು ಅವರು ಹೇಳಿದ್ದರು.

ಕರ್ನಾಟಕ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಕೂಡ, “ಗುಂಡು ಹಾರಿಸುತ್ತಿರುವ ವ್ಯಕ್ತಿ ಜಾತಿ ಅಥವಾ ಧರ್ಮವನ್ನು ಕೇಳುತ್ತಾನೆಯೇ? ಅವನು ಗುಂಡು ಹಾರಿಸಿ ಹೋಗುತ್ತಾನೆ. ಸ್ವಲ್ಪ ಪ್ರಾಯೋಗಿಕವಾಗಿ ಯೋಚಿಸಿ. ಅವನು ಅಲ್ಲಿ ನಿಂತು ಮಾತನಾಡುತ್ತಾ ನಿಲ್ಲುತ್ತಾನಾ ಅಥವಾ ಗುಂಡು ಹಾರಿಸಿ ಹೋಗುತ್ತಾನಾ?” ಎಂದು ಕರ್ನಾಟಕದ ಅಬಕಾರಿ ಸಚಿವ ತಿಮ್ಮಾಪುರ್ ಹೇಳಿದ್ದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕಾಂಗ್ರೆಸ್ ಶಾಸಕ ವಿಜಯ್ ವಡ್ಡೆಟಿವಾರ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಹೆಸರನ್ನು ಪಾಕಿಸ್ತಾನ ಪಕ್ಷ ಎಂದು ಬದಲಾಯಿಸಬೇಕು ಎಂದು ಪೂನವಾಲಾ ಹೇಳಿದ್ದಾರೆ. “INC ಹೆಸರನ್ನು ಪಾಕಿಸ್ತಾನ ಆಧಾರಿತ ಪಕ್ಷ ಎಂದು ಬದಲಾಯಿಸಬೇಕು. ಒಂದೆಡೆ, ರಾಹುಲ್ ಗಾಂಧಿ ಬಂದು ಸರ್ವಪಕ್ಷ ಸಭೆಯಲ್ಲಿ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳುತ್ತಾರೆ. ಮತ್ತೊಂದೆಡೆ ಆ ಪಕ್ಷದ ನಾಯಕರು ಹಿಂದೂ ಸಂತ್ರಸ್ತರನ್ನು ಗೇಲಿ ಮಾಡುತ್ತಾರೆ. ಆ ದಾಳಿಯಿಂದ ಬಚಾವಾದವರು ತಮಗೆ ಏನಾಯಿತು ಎಂಬುದರ ಬಗ್ಗೆ ಸುಳ್ಳು ಹೇಳುತ್ತಾರೆಯೇ ಎಂದು ನಾನು ಆ ಪಕ್ಷವನ್ನು ಕೇಳಲು ಬಯಸುತ್ತೇನೆ. ಅವರ ದ್ವಂದ್ವ ನೀತಿ ಕೆಲಸ ಮಾಡುವುದಿಲ್ಲ. ಪಾಕಿಸ್ತಾನಕ್ಕೆ ಕಾಂಗ್ರೆಸ್ ಸಾಫ್ಟ್ ಕಾರ್ನರ್ ತೋರುತ್ತಿದೆ” ಎಂದು ಪೂನವಾಲಾ ANI ಜೊತೆ ಮಾತನಾಡುತ್ತಾ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ