ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕಕ್ಕೆ ಹಿನ್ನಡೆ

ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಪೆನ್ನಾರ್ ಜಲ ವಿವಾದ ಇತ್ಯರ್ಥಕ್ಕೆ ಒಂದು ತಿಂಗಳೊಳಗೆ ನ್ಯಾಯಾಧೀಕರಣ ರಚಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಕರ್ನಾಟಕದ ಮಾತುಕತೆ ವಾದವನ್ನು ತಿರಸ್ಕರಿಸಿ, ತಮಿಳುನಾಡಿನ ನ್ಯಾಯಾಧಿಕರಣ ರಚನೆ ಬೇಡಿಕೆಯನ್ನು ಪುರಸ್ಕರಿಸಲಾಗಿದೆ.

ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕಕ್ಕೆ ಹಿನ್ನಡೆ
ಸುಪ್ರೀಂಕೋರ್ಟ್
Image Credit source: Google
Edited By:

Updated on: Feb 02, 2026 | 1:45 PM

ನವದೆಹಲಿ, ಫೆಬ್ರವರಿ 02: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್​​ ಮಹತ್ವದ ಆದೇಶ ನೀಡಿದ್ದು, ನ್ಯಾಯಾಧೀಕರಣ ರಚನೆಗೆ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿರುವ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಪೀಠ, 1 ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ತಿಳಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್​​ ತೀರ್ಪನ್ನು ಕಾಯ್ದಿರಿಸಿತ್ತು.

ಕರ್ನಾಟಕದ ವಾದ ಪುರಸ್ಕರಿಸದ ಕೋರ್ಟ್


ಇನ್ನು ನ್ಯಾಯಾಧೀಕರಣ ರಚನೆಗೆ ಆದೇಶಿಸುವ ಮೂಲಕ ಕರ್ನಾಟಕ ಸರ್ಕಾರದ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಕರಣ ರಚನೆ ಬೇಡ, ಮಾತುಕತೆ ಮೂಲಕ ವಿವಾದ ಬಗೆಹರಿಸುಕೊಳ್ಳುತ್ತೇವೆ ಎಂದು ಕರ್ನಾಟಕ ಹೇಳಿತ್ತು. ಆದರೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ವಾದಿಸಿತ್ತು. ತಮಿಳುನಾಡು ಸರ್ಕಾರದ ವಾದ ಪುರಸ್ಕರಿಸಿರುವ ಸುಪ್ರೀಂಕೋರ್ಟ್​​ ಈ ಬಗ್ಗೆ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡುವುದು ಕಡ್ಡಾಯ; ಸುಪ್ರೀಂ ಕೋರ್ಟ್ ಆದೇಶ

ವಿವಾದ ಏನು?

ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕದಿಂದ ಚೆಕ್ ಡ್ಯಾಮ್‌ಗಳು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನೆರೆ ರಾಜ್ಯ ತಮಿಳುನಾಡು ಆಕ್ಷೇಪಿಸಿತ್ತು. ಇದು ತಮಿಳುನಾಡಿನ ಉತ್ತರ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ ಮುಂತಾದ ಕಡೆ ನೀರಿನ ಹರಿವನ್ನು ಕುಂಠಿತಗೊಳಿಸುತ್ತದೆ ಎಂದು ವಾದಿಸಿತ್ತು. 1892ರ ಮೈಸೂರು-ಮದ್ರಾಸ್ ಒಪ್ಪಂದದ ಪ್ರಕಾರ, ಕರ್ನಾಟಕವು ಕೆಳಭಾಗದ ರಾಜ್ಯದ ಅನುಮತಿಯಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿತ್ತು. ಆದರೆ ಇದಕ್ಕೆ ಕೌಂಟರ್​ ಕೊಟ್ಟಿದ್ದ ಕರ್ನಾಟಕ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗಳು ಇರುವುದರಿಂದ 1892ರ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಮತ್ತು ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸುವ ಹಕ್ಕಿದೆ ಎಂದು ಹೇಳಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:15 pm, Mon, 2 February 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us