Women’s Day: ಮಹಿಳಾ ದಿನಾಚರಣೆ ನಿಮಿತ್ತ ನಾರಿಶಕ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
ಹಿಳೆಯರ ಸಾಮರ್ಥ್ಯವನ್ನು ಅರಿತು, ಆ ಸಾಮರ್ಥ್ಯಕ್ಕೆ ತಕ್ಕಂತೆ ನೀತಿಗಳನ್ನು ರಚಿಸಲು ನಮ್ಮ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಿಳಾ ದಿನಾಚರಣೆ (Women’s Day) ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಸೋಮವಾರ (ಮಾರ್ಚ್ 7) ನಾರಿ ಶಕ್ತಿ ಪುರಸ್ಕಾರಕ್ಕೆ ಪಾತ್ರರಾದ ಮಹಿಳೆಯರೊಂದಿಗೆ ಸಂವಾದ ನಡೆಸಿದ್ದಾರೆ. 2020 ಮತ್ತು 2021ನೇ ಸಾಲಿನ ನಾರಿಶಕ್ತಿ ಪುರಸ್ಕಾರವನ್ನು ಒಟ್ಟು 28 ಮಹಿಳೆಯರಿಗೆ ಇಂದು ಮಹಿಳಾ ದಿನಾಚರಣೆಯಂದು (ಮಾರ್ಚ್ 8) ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರದಾನ ಮಾಡಲಿದ್ದಾರೆ. ಅಂದರೆ 2020ನೇ ಸಾಲಿನಲ್ಲಿ 14 ಮಹಿಳೆಯರು ಮತ್ತು 2021ನೇ ಸಾಲಿನಲ್ಲಿ 14 ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದು, ಇಂದು ಪ್ರಶಸ್ತಿ ಪಡೆಯಲಿದ್ದಾರೆ. ಹಿಂದುಳಿದ, ದುರ್ಬಲ ವರ್ಗದ ಮಹಿಳೆಯರ ಅಭಿವೃದ್ಧಿಗೆ ಇವರ ಪಟ್ಟ ಶ್ರಮ, ಮಾಡಿದ ಅಸಾಧಾರಣ ಕೆಲಸಗಳನ್ನು ಪರಿಗಣಿಸಿ ನಾರಿ ಶಕ್ತಿ ಪುರಸ್ಕಾರ ನೀಡಲಾಗುತ್ತಿದೆ.
ನಿನ್ನೆ ಮಹಿಳೆಯರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೆಲ್ಲರ ಕೆಲಸಗಳನ್ನೂ ಹೊಗಳಿದ್ದಾರೆ. ಇಡೀ ಸಮಾಜ, ದೇಶಕ್ಕೆ ಅವರ ಕೊಡುಗೆ ಪ್ರಶಂಸನೀಯ ಎಂದಿದ್ದಾರೆ. ನಾರಿಶಕ್ತಿ ಪುರಸ್ಕಾರಕ್ಕೆ ಪಾತ್ರರಾದ ಈ ಮಹಿಳೆಯರ ಕೆಲಸದಲ್ಲಿ ಸೇವಾ ಮನೋಭಾವದೊಂದಿಗೆ ಹೊಸತನವೂ ಇದೆ. ಮಹಿಳೆಯರು ಕೆಲಸ ಮಾಡದ, ಸಾಧನೆ ಮಾಡದ ಕ್ಷೇತ್ರ ಯಾವುದೂ ಇಲ್ಲ. ದೇಶವನ್ನ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಹಾಗೇ, ತಾವು ಮಹಿಳೆಯರೊಂದಿಗೆ ಸಂವಾದ ನಡೆಸಿದ ಫೋಟೋಗಳನ್ನೂ ಟ್ವಿಟರ್ನಲ್ಲೂ ಶೇರ್ ಮಾಡಿಕೊಂಡಿದ್ದಾರೆ.
On the eve of Women’s Day, interacted with recipients of the Nari Shakti Puraskar. We are very proud of their accomplishments and their efforts to serve society. https://t.co/lfJIr6A1nn pic.twitter.com/wOlLHDeAW4
— Narendra Modi (@narendramodi) March 7, 2022
ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಹಿಳೆಯರ ಸಾಮರ್ಥ್ಯವನ್ನು ಅರಿತು, ಆ ಸಾಮರ್ಥ್ಯಕ್ಕೆ ತಕ್ಕಂತೆ ನೀತಿಗಳನ್ನು ರಚಿಸಲು ನಮ್ಮ ಕೇಂದ್ರ ಸರ್ಕಾರ ಬದ್ಧವಾಗಿದೆ. ಮಹಿಳೆಯರು ಆರ್ಥಿಕರಾಗಿ ಸಬಲರಾಗಿದ್ದಾರೆ. ಹೀಗಾಗಿ ಒಂದು ಕುಟುಂಬದಲ್ಲಿರುವ ಪ್ರತಿ ಮಹಿಳೆಯೂ ಆಯಾ ಕುಟುಂಬದಲ್ಲಿ ಏನೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಾನ ಹಕ್ಕು ಹೊಂದಿರುತ್ತಾರೆ ಎಂದೂ ಹೇಳಿದರು. ಅಂದಹಾಗೇ, ಈ ನಾರಿಶಕ್ತಿ ಪುರಸ್ಕಾರ್ ಎಂಬುದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಒಂದು ಉಪಕ್ರಮ. ಈ ಸಮಾಜದಲ್ಲಿ ಬದಲಾವಣೆ ತಂದ, ಸುಧಾರಣೆಗಾಗಿ ಅಸಾಧಾರಣ ಕೆಲಸ ಮಾಡಿದ ಮಹಿಳೆಯರನ್ನು ಗೌರವಿಸಲು ಇದನ್ನು ಪ್ರಾರಂಭಿಸಲಾಗಿದೆ. ಉದ್ಯಮ, ಕೃಷಿ, ಸಾಮಾಜಿಕ ಕಾರ್ಯ, ಶಿಕ್ಷಣ, ಸಾಹಿತ್ಯ, ಭಾಷಾಶಾಸ್ತ್ರ, ಕಲೆ ಮತ್ತು ಕರಕುಶಲ, STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ), ಅಂಗವೈಕಲ್ಯ ಹಕ್ಕುಗಳು, ಕಡಲ ಉದ್ಯಮ ಮತ್ತು ವನ್ಯಜೀವಿ ಸಂರಕ್ಷಣೆ ಹೀಗೆ ಇಂಥ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ನಾರಿಶಕ್ತಿ ಪುರಸ್ಕಾರ ನೀಡಲಾಗುತ್ತದೆ.
ಇದನ್ನೂ ಓದಿ: Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು
Published On - 8:08 am, Tue, 8 March 22