ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಓರ್ವ ಭಯೋತ್ಪಾದಕ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಓರ್ವ ಭಯೋತ್ಪಾದಕ. ವಿಧಾನಸಭಾ ಚುನಾವಣೆಯಲ್ಲಿ ಅವರೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದು ಏಕೆಂದು ತಿಳಿಯುತ್ತಿಲ್ಲ ಎಂದು ಟೀಕಿಸಿದ್ದಾರೆ. ಈ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.

ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
Mallikarjun Kharge With Pm Modi
Image Credit source: PTI

Updated on: Apr 21, 2026 | 4:56 PM

ಚೆನ್ನೈ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ (Tamil Nadu Assembly Elections) ಕ್ಷಣಗಣನೆ ಶುರುವಾಗಿದೆ. ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಏಪ್ರಿಲ್ 23ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಎಐಎಡಿಎಂಕೆಯನ್ನು ಟೀಕಿಸಿದರು. ಈ ವೇಳೆ ಅವರು “ಪ್ರಧಾನಿ ನರೇಂದ್ರ ಮೋದಿ (PM Narendra Modi) ಓರ್ವ ಭಯೋತ್ಪಾದಕ” ಎಂದು ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ತಮ್ಮ ವಿರೋಧಿಗಳನ್ನು ಬೆದರಿಸುತ್ತಾರೆ ಮತ್ತು ಭಯಪಡಿಸುತ್ತಾರೆ. ಅವರೊಬ್ಬ ಭಯೋತ್ಪಾದಕ ಎಂದು ಖರ್ಗೆ ಹೇಳುವ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಅಣ್ಣಾದೊರೈ ಅವರ ಫೋಟೋ ಹಾಕುವ ಈ ಎಐಎಡಿಎಂಕೆ ಜನರು ಮೋದಿಯೊಂದಿಗೆ ಹೇಗೆ ಕೈಜೋಡಿಸುತ್ತಾರೆ? ಎಐಎಡಿಎಂಕೆ ಮೋದಿಯೊಂದಿಗೆ ಹೇಗೆ ಕೈ ಜೋಡಿಸಿದರು? ಅವರೊಬ್ಬ ಭಯೋತ್ಪಾದಕ. ಅವರು ಸಮಾನತೆಯನ್ನು ನಂಬುವುದಿಲ್ಲ. ಅವರ ಪಕ್ಷವೆಂದೂ ಸಮಾನತೆ ಮತ್ತು ನ್ಯಾಯವನ್ನು ನಂಬುವುದಿಲ್ಲ. ಅಂತಹ ಬಿಜೆಪಿಯೊಂದಿಗೆ ಎಐಎಡಿಎಂಕೆ ಸೇರುತ್ತಿದೆ. ಅಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ” ಎಂದು ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿಯವರ ‘ಝಲ್ಮುರಿ’ ವಿಡಿಯೋ ವೈರಲ್: ಇನ್ಸ್​ಟಾಗ್ರಾಮ್‌ನಲ್ಲಿ 100 ಮಿಲಿಯನ್ ವೀಕ್ಷಣೆ

ಈ ಹೇಳಿಕೆ ಕೂಡಲೇ ದೊಡ್ಡ ವಿವಾದವಾಗಿ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಯಾಚನೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸಿದೆ.


ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಕೂಡಲೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ಮೋದಿ ಯಾವಾಗಲೂ ನಮಗೆ ಬೆದರಿಕೆ ಹಾಕುತ್ತಾರೆ ಎಂದು ನಾನು ಹೇಳಿದ್ದೇನೆ. ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಇತರ ಸಂಸ್ಥೆಗಳು ಅವರ ಕೈಯಲ್ಲಿವೆ ಎಂದು ನಾನು ಹೇಳಿದ್ದೆ. ಅವರು ಭಯೋತ್ಪಾದಕ ಎಂದು ನಾನು ಖಂಡಿತವಾಗಿಯೂ ಹೇಳಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಸುದ್ದಿಗೋಷ್ಠಿಯ ವಿಡಿಯೋದಲ್ಲಿ ಖರ್ಗೆ ಭಯೋತ್ಪಾದಕ ಎಂಬ ಪದವನ್ನು ಬಳಸಿರುವುದು ದಾಖಲಾಗಿರುವುದರಿಂದ ಬಿಜೆಪಿ ಕ್ಷಮೆಯಾಚನೆಗೆ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Tue, 21 April 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us