ಎಷ್ಟೇ ಅಡೆತಡೆಗಳು ಬಂದರೂ ಮಹಿಳಾ ಮೀಸಲಾತಿ ಜಾರಿಗೊಳಿಸಿಯೇ ಬದ್ಧ: ಪ್ರಧಾನಿ ಮೋದಿ ಖಡಕ್ ನುಡಿ

ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಎಕ್ಸ್ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಜಾರಿಗೆ ಎದುರಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದಾಗಿ ಖಡಕ್ ಸಂದೇಶ ರವಾನಿಸಿದ್ದಾರೆ.

ಎಷ್ಟೇ ಅಡೆತಡೆಗಳು ಬಂದರೂ ಮಹಿಳಾ ಮೀಸಲಾತಿ ಜಾರಿಗೊಳಿಸಿಯೇ ಬದ್ಧ: ಪ್ರಧಾನಿ ಮೋದಿ ಖಡಕ್ ನುಡಿ
ಮಹಿಳಾ ಮೀಸಲಾತಿ ಬಗ್ಗೆ ಪ್ರಧಾನಿ ಮೋದಿ ಖಡಕ್ ಮಾತು

Updated on: Nov 28, 2026 | 1:43 PM

ಮುಖ್ಯಾಂಶಗಳು

  • ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಸರ್ಕಾರ ಬದ್ಧ
  • ಮೀಸಲಾತಿ ಹಾದಿಯ ಅಡೆತಡೆ ನಿವಾರಿಸುವುದಾಗಿ ಮೋದಿ ಭರವಸೆ
  • 2029ರ ಲೋಕಸಭೆ ಚುನಾವಣೆ ವೇಳೆಗೆ ಮೀಸಲಾತಿ ಜಾರಿ ಗುರಿ

ನವದೆಹಲಿ, ನವೆಂಬರ್ 28: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳೆಯರಿಗೆ ಅವರ ಹಕ್ಕು ದೊರಕಿಸುವ ಹಾದಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಶನಿವಾರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಕಿರು ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, ಮಹಿಳಾ ಮೀಸಲಾತಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಹೋರಾಟದಲ್ಲಿ ತಾವೂ ಭಾಗಿಯಾಗಿದ್ದು, ಮಹಿಳೆಯರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮತ್ತೆ ಮುಂದಿಡಲು ಸಿದ್ಧತೆ ನಡೆಸಿರುವ ಹಾಗೂ ಇತರ ಪಕ್ಷಗಳ ಬೆಂಬಲ ಪಡೆಯಲು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಹೇಳಿಕೆ ಮಹತ್ವ ಪಡೆದಿದೆ. ಮಹಿಳಾ ಮೀಸಲಾತಿ ಕಾಯ್ದೆಯನ್ನು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೊಂದಿಗೆ ಜೋಡಿಸಿರುವ ಕೇಂದ್ರ ಸರ್ಕಾರ, 2029ರ ಲೋಕಸಭೆ ಚುನಾವಣೆಯ ವೇಳೆಗೆ ಕ್ಷೇತ್ರಗಳ ಮರುವಿಂಗಡಣೆಯ ಬಳಿಕ ರೂಪುಗೊಳ್ಳುವ ದೊಡ್ಡ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿದೆ.

Loading...

ಆದರೆ, ಏಪ್ರಿಲ್‌ನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸೋಲಿಸಿದ್ದ ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈಗಿರುವ 545 ಲೋಕಸಭಾ ಸ್ಥಾನಗಳಲ್ಲಿಯೇ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

ಮಹಿಳಾ ಮೀಸಲಾತಿ ಜಾರಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸುವುದಾಗಿ ಪ್ರಧಾನಿ ಮೋದಿ ಮತ್ತೊಮ್ಮೆ ಭರವಸೆ ನೀಡಿದ್ದು, ಈ ವಿಚಾರದಲ್ಲಿ ಸರ್ಕಾರದ ಸಂಕಲ್ಪ ದೃಢವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಮಾತಿನ ವಿಡಿಯೋ


ಎಕ್ಸ್ ಸಂದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

‘‘ನಾರಿ ಶಕ್ತಿಗೆ ಪಾಲು ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಿದೆ. ವರ್ಷಗಳಿಂದ ನಾನೂ ಇದಕ್ಕಾಗಿ ಶ್ರಮಿಸುತ್ತಿರುವವರಲ್ಲಿ ಒಬ್ಬನಾಗಿದ್ದೇನೆ. ಎಷ್ಟೋ ಮಹಿಳೆಯರು ಈ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಎಷ್ಟೋ ಸಹೋದರಿಯರು ಪತ್ರದ ಮೂಲಕ ನನಗೆ ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ. ದೇಶದ ನೂರಕ್ಕೆ ನೂರರಷ್ಟು ನಾರಿ ಶಕ್ತಿಯ ಆಶೀರ್ವಾದ ನಮ್ಮ ಜೊತೆಗಿದೆ ಎಂಬುದು ನನಗೆ ಗೊತ್ತು. ದೇಶದ ಪ್ರತಿಯೊಬ್ಬ ಮಹಿಳೆಗೂ ನಾನು ಭರವಸೆ ನೀಡುತ್ತೇನೆ, ಮಹಿಳಾ ಮೀಸಲಾತಿಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಯನ್ನೂ ನಾವು ನಿವಾರಿಸುತ್ತೇವೆ, ತೊಡೆದುಹಾಕುತ್ತೇವೆ. ನಮ್ಮ ಧೈರ್ಯವೂ ಗಟ್ಟಿಯಾಗಿದೆ, ನಮ್ಮ ಮನೋಬಲವೂ ಅಚಲವಾಗಿದೆ ಹಾಗೂ ನಮ್ಮ ಸಂಕಲ್ಪವೂ ದೃಢವಾಗಿದೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಪಕ್ಷಗಳು ದೇಶದ ನಾರಿ ಶಕ್ತಿಯನ್ನು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರ ಪಾಲು ಹೆಚ್ಚಿಸಿಕೊಳ್ಳುವುದರಿಂದ ಎಂದಿಗೂ ತಡೆಯಲು ಸಾಧ್ಯವಿಲ್ಲ. ಕೇವಲ ಕಾಲ ಕೂಡಿಬರುವುದಷ್ಟೇ ಬಾಕಿ ಇದೆ’’ ಎಂದು ವಿಡಿಯೋ ಸಂದೇಶದಲ್ಲಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us