
ನವದೆಹಲಿ, ನವೆಂಬರ್ 28: ತಮಿಳುನಾಡಿನ ಮಧುರೈ ತಿರುಪ್ಪರಂಕುಂಡ್ರಮ್ ಬೆಟ್ಟದ ವಿವಾದಿತ ‘ದೀಪತೂನ್’ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ಮುರುಗನ್‌ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶುಕ್ರವಾರ ರಾತ್ರಿ ಎಕ್ಸ್‌ನಲ್ಲಿ ‘‘ವೇಟ್ರಿವೇಲ್ ಮುರುಗನುಕ್ಕು ಅರೋಗರಾ!’’ ಎಂಬ ಸಂದೇಶ ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಪೋಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆಯಾಗಲೀ, ದೀಪತೂನ್ ವಿವಾದವಾಗಲಿ ನೇರವಾಗಿ ಉಲ್ಲೇಖಿಸಿಲ್ಲ. ಇಂಗ್ಲಿಷ್, ತಮಿಳು ಮತ್ತು ಹಿಂದಿ ಲಿಪಿಗಳಲ್ಲಿ ತಮಿಳು ಭಕ್ತಿಗೀತೆಯ ಘೋಷಣೆಯನ್ನು ಹಂಚಿಕೊಂಡಿದ್ದಾರೆ.
ನವೆಂಬರ್ 27ರಂದು ಸುಪ್ರೀಂ ಕೋರ್ಟ್ ತಿರುಪ್ಪರಂಕುಂಡ್ರಮ್ ಬೆಟ್ಟದ ದೀಪತೂನ್‌ನಲ್ಲಿ ನವೆಂಬರ್ 28ರಂದು ಕಾರ್ತಿಕ ದೀಪ ಬೆಳಗಿಸುವಂತೆ ನಿರ್ದೇಶಿಸಿತ್ತು. ದೇವಾಲಯದ ಭದ್ರತೆಯನ್ನು ಸಿಆರ್‌ಪಿಎಫ್‌ಗೆ ವಹಿಸುವಂತೆ ಹಾಗೂ ದೇವಾಲಯದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿ ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಕ್ಕೆ ನೇಮಿಸುವಂತೆ ಆದೇಶಿಸಿತ್ತು.
ಈ ವಿವಾದದ ಹಿನ್ನೆಲೆ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶ. ನವೆಂಬರ್ 24ರ ಕಾರ್ತಿಕ ದೀಪೋತ್ಸವದಂದು ತಿರುಪ್ಪರಂಕುಂಡ್ರಮ್ ಬೆಟ್ಟದ ದೀಪತೂನ್‌ನಲ್ಲಿ ದೀಪ ಬೆಳಗಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಅಂದು ದೀಪತೂನ್‌ನಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಉಚ್ಚಿಪಿಳ್ಳಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹಿಂದಿನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತ್ತು. ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಹಾಗೂ ಮಧುರೈ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ನಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕರೆ ವಿವರಗಳು ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಂತೆಯೂ ಸೂಚಿಸಿತ್ತು.
ಇನ್ನೊಂದೆಡೆ, ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕೆ.ಪಿ. ರಾಮಲಿಂಗಂ ಅವರು ದೀಪತೂನ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿ, ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ರಾಜ್ಯದ 2,116 ದೇವಾಲಯಗಳಲ್ಲಿ ‘ಅರಂ ಕಾಕ್ಕುಂ ಆಲಯ ದೀಪಂ’ ಕಾರ್ಯಕ್ರಮದಡಿ ದೀಪ ಬೆಳಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಮಕ್ಕಲ್ ಜಿಲ್ಲೆಯ ರಾಸಿಪುರಂನಲ್ಲಿ ನಡೆದ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮಲಿಂಗಂ, ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಮಧುರೈ ಜಿಲ್ಲಾಧಿಕಾರಿಯ ನಿಲುವನ್ನೂ ಪ್ರಶ್ನಿಸಿರುವ ಅವರು, ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ‘ದೀಪತೂನ್’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ; ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ದೀಪತೂನ್‌ನಲ್ಲಿ ದೀಪ ಬೆಳಗಿಸುವ ವಿಚಾರ ತಮಿಳುನಾಡಿನಲ್ಲಿ ಧಾರ್ಮಿಕ ಸಂಪ್ರದಾಯ, ಆಡಳಿತಾತ್ಮಕ ನಿರ್ಧಾರ ಮತ್ತು ನ್ಯಾಯಾಲಯದ ಆದೇಶಗಳ ನಡುವಿನ ವಿವಾದವಾಗಿ ಮುಂದುವರಿದಿದೆ. ಈ ಬೆಳವಣಿಗೆಗಳ ನಡುವೆಯೇ ಪ್ರಧಾನಿ ಮೋದಿ ಮುರುಗನ್‌ಗೆ ಪ್ರಾರ್ಥನೆ ಸಲ್ಲಿಸಿರುವ ಸಂದೇಶ ಗಮನ ಸೆಳೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ