ಪ್ರಧಾನಿ ಮೋದಿ ಜನ್ಮದಿನ:ಕಾಶಿಯಿಂದ ವಡ್ನಗರದವರೆಗೆ ‘ಸೇವಾ ಸಂಕಲ್ಪ’ ಮೆಗಾ ಬೈಕ್ ಯಾತ್ರೆ, 25 ವರ್ಷಗಳ ಸಾರ್ವಜನಿಕ ಸೇವೆಗೆ ವಿಶೇಷ ಗೌರವ

ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬಕ್ಕೆ ವಾರಾಣಸಿಯಿಂದ ವಡ್ನಗರದವರೆಗೆ ಬೃಹತ್ 'ಸೇವಾ ಸಂಕಲ್ಪ' ಬೈಕ್ ಯಾತ್ರೆ ಆರಂಭವಾಗಿದೆ. 500 ಬೈಕರ್‌ಗಳು ಗಂಗಾಜಲ ಹೊತ್ತು 10 ರಾಜ್ಯಗಳ ಮೂಲಕ 40,000 ಕಿ.ಮೀ. ಕ್ರಮಿಸಲಿವೆ. ಇದು ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಗೆ ಗೌರವ ಸಲ್ಲಿಸುವುದಲ್ಲದೆ, ಯುವಜನತೆ ಮತ್ತು ಮತದಾರರನ್ನು ಸೆಳೆಯುವ ರಾಜಕೀಯ ಉದ್ದೇಶವನ್ನೂ ಹೊಂದಿದೆ. ಪರಿಸರ ಮತ್ತು ಸಾಮಾಜಿಕ ಕಾರ್ಯಕ್ರಮಗಳೂ ಇವೆ.

ಪ್ರಧಾನಿ ಮೋದಿ ಜನ್ಮದಿನ:ಕಾಶಿಯಿಂದ ವಡ್ನಗರದವರೆಗೆ ‘ಸೇವಾ ಸಂಕಲ್ಪ’ ಮೆಗಾ ಬೈಕ್ ಯಾತ್ರೆ, 25 ವರ್ಷಗಳ ಸಾರ್ವಜನಿಕ ಸೇವೆಗೆ ವಿಶೇಷ ಗೌರವ
ನರೇಂದ್ರ ಮೋದಿ
Image Credit source: DD India

Updated on: Sep 17, 2026 | 8:29 AM

ವಾರಾಣಸಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಸಂಸದೀಯ ಕ್ಷೇತ್ರ ಕಾಶಿಯಿಂದ ಹುಟ್ಟೂರು ವಡ್ನಗರದವರೆಗೆ ಬೃಹತ್ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆಗೆ ಚಾಲನೆ ಸಿಕ್ಕಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಸಿರು ನಿಶಾನೆ ತೋರಿದ ಈ ಯಾತ್ರೆಯಲ್ಲಿ, 500 ಯುವ ಬೈಕರ್‌ಗಳು ಗಂಗಾಜಲವನ್ನು ಹೊತ್ತು 10 ರಾಜ್ಯಗಳ 1,159ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ಸಾಗಲಿದ್ದಾರೆ.

ಗಂಗಾಜಲ ಸಂಗ್ರಹ ಹಾಗೂ ರುದ್ರಾಭಿಷೇಕ: ಯಾತ್ರೆಯ ಆರಂಭಕ್ಕೂ ಮುನ್ನ 51 ಬೈಕ್ ಸವಾರರು ಕಾಶಿಯ ಲಲಿತಾ ಘಾಟ್‌ನಲ್ಲಿ ಶಂಖನಾದ ಹಾಗೂ ಡಮರು ವಾದ್ಯಗಳ ನಡುವೆ ಪವಿತ್ರ ಗಂಗಾಜಲವನ್ನು ಸಂಗ್ರಹಿಸಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾಜಲದಿಂದ ಮಹಾ ರುದ್ರಾಭಿಷೇಕ ನೆರವೇರಿಸಿ, ಪ್ರಧಾನಿ ಮೋದಿಯವರ ಆಯುರಾರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ನಡೆಯುವ ಈ ಬೈಕ್ ಯಾತ್ರೆಯು ಸುಮಾರು 40 ಸಾವಿರ ಕಿ.ಮೀ ದೂರವನ್ನು ಕ್ರಮಿಸಲಿದೆ. ಇದು 10 ರಾಜ್ಯಗಳು,193 ಜಿಲ್ಲೆಗಳು, 773 ತಾಲೂಕುಗಳು ಹಾಗೂ1159 ಹಳ್ಳಿಗಳ ಮೂಲಕ ಹಾದುಹೋಗಲಿದೆ. ಉತ್ತರ ಪ್ರದೇಶವೊಂದರಲ್ಲೇ 50 ಜಿಲ್ಲೆಗಳನ್ನು ಇದು ಒಳಗೊಂಡಿದೆ.

ಮತ್ತಷ್ಟು ಓದಿ:

ಪ್ರಧಾನಿ ಮೋದಿ 76ನೇ ಜನ್ಮದಿನ: ಯೂಟ್ಯೂಬ್‌ನಲ್ಲಿ 3 ಕೋಟಿ, ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ; ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ನಾಯಕ ನರೇಂದ್ರ ಮೋದಿ

 

ಕಾಶಿಯಿಂದ ಹೊರಟ ಯಾತ್ರಿಕರು ಗಂಗಾಜಲವನ್ನು ವಡ್ನಗರದ ಶ್ರೀ ಹಾಟಕೇಶ್ವರ ಮಹಾದೇವ ಮಂದಿರಕ್ಕೆ ಕೊಂಡೊಯ್ಯುತ್ತಿದ್ದರೆ, ಅತ್ತ ಗುಜರಾತ್‌ನ ವಡ್ನಗರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆರಂಭವಾದ ಮತ್ತೊಂದು ಬೈಕ್ ಯಾತ್ರೆಯು ಗುಜರಾತ್‌ನ ನದಿಗಳ ಪವಿತ್ರ ಜಲವನ್ನು ಹೊತ್ತು ಕಾಶಿಯತ್ತ ಸಾಗುತ್ತಿದೆ.

ದಿಗ್ಗಜ ನಾಯಕರ ಸಮಾಗಮ: ಈ ಐತಿಹಾಸಿಕ ಸಮಾರಂಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಯುಪಿ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

ಯುವಜನತೆ ಮತ್ತು ಮತದಾರರ ಸೆಳೆಯಲು ಪ್ಲಾನ್: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಯುವ ಮೋಟಾರ್‌ಸೈಕಲ್ ಸವಾರರ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಡಿಜಿಟಲ್ ಕ್ರಾಂತಿ ಮತ್ತು ಮೂಲಸೌಕರ್ಯ ಸಾಧನೆಗಳನ್ನು ಹೊಸ ತಲೆಮಾರಿನ ಮತದಾರರಿಗೆ ತಲುಪಿಸಲು ಬಿಜೆಪಿ ಈ ತಂತ್ರ ರೂಪಿಸಿದೆ.

ಸಮಾಜಮುಖಿ ಕಾರ್ಯಕ್ರಮಗಳು: ಬೈಕರ್ಸ್ ಹಾದುಹೋಗುವ ಪ್ರತಿ ನಿಲುಗಡೆಯಲ್ಲೂ ಕೇವಲ ರ‍್ಯಾಲಿ ಮಾಡುವುದಷ್ಟೇ ಅಲ್ಲದೆ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಕ್ಷಯರೋಗ ಮುಕ್ತ ಭಾರತ ಜಾಗೃತಿ ಮತ್ತು ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ.

25 ವರ್ಷಗಳ ಆಡಳಿತ ಪ್ರದರ್ಶನ: ವಾರಾಣಸಿಯ ರುದ್ರಾಕ್ಷ ಸಮಾವೇಶ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ 12ವರ್ಷ ಸೇವೆ ಸಲ್ಲಿಸಿದ 25 ವರ್ಷಗಳ ಸಾರ್ವಜನಿಕ ಜೀವನದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us