ಮೋದಿ ರಾಜತಾಂತ್ರಿಕತೆ ಯಶಸ್ವಿ; ಬ್ರಿಟನ್, ಕೆನಡಾ ಮತ್ತು ಐರೋಪ್ಯ ಒಕ್ಕೂಟದಿಂದ ಭಾರತಕ್ಕೆ ಭಾರಿ ಆರ್ಥಿಕ ಲಾಭ!

ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸರಣಿ ದ್ವಿಪಕ್ಷೀಯ ಮಾತುಕತೆಗಳು ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ ಮುನ್ಸೂಚನೆ ನೀಡಿವೆ. ಫ್ರಾನ್ಸ್‌ನಲ್ಲಿ ಮುಕ್ತಾಯಗೊಂಡ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯು ದೇಶಕ್ಕೆ ಭಾರಿ ಆರ್ಥಿಕ ಯಶಸ್ಸನ್ನು ತಂದುಕೊಟ್ಟಿದೆ. ಬ್ರಿಟನ್, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ನಡೆಸಿದ ಮಾತುಕತೆಗಳು ಕೇವಲ ಚರ್ಚೆಗೆ ಸೀಮಿತವಾಗದೆ, ಕೋಟ್ಯಂತರ ರೂ. ವ್ಯಾಪಾರ ಒಪ್ಪಂದಗಳ ಮುಖಾಂತರ ಭಾರತಕ್ಕೆ ಭಾರೀ ಆರ್ಥಿಕ ಲಾಭ ತಂದುಕೊಡುತ್ತಿದೆ.

ಮೋದಿ ರಾಜತಾಂತ್ರಿಕತೆ ಯಶಸ್ವಿ; ಬ್ರಿಟನ್, ಕೆನಡಾ ಮತ್ತು ಐರೋಪ್ಯ ಒಕ್ಕೂಟದಿಂದ ಭಾರತಕ್ಕೆ ಭಾರಿ ಆರ್ಥಿಕ ಲಾಭ!
Pm Modi With World Leaders In G7 Summit
Image Credit source: PTI

Updated on: Jun 17, 2026 | 11:24 PM

ನವದೆಹಲಿ, ಜೂನ್ 17: ಪ್ರಧಾನಿ ನರೇಂದ್ರ ಮೋದಿ (PM Modi in France) ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (CETA) ಮುಂಬರುವ ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಶೇ. 99ರಷ್ಟು ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ ಸಿಗಲಿದ್ದು, ಐಟಿ, ಫೈನಾನ್ಸ್ ಸೇರಿದಂತೆ 137ಕ್ಕೂ ಹೆಚ್ಚು ಸೇವಾ ವಲಯಗಳ ಉದ್ಯೋಗಿಗಳಿಗೆ ಮತ್ತು ಕಂಪನಿಗಳಿಗೆ ಭಾರಿ ಆರ್ಥಿಕ ಲಾಭವಾಗಲಿದೆ.

2021ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೈಗೊಂಡಿದ್ದ ‘ಭಾರತ-ಯುಕೆ ರೋಡ್‌ಮ್ಯಾಪ್ 2030’ರ ಅಡಿಯಲ್ಲಿ, 2030 ರ ವೇಳೆಗೆ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯೊಂದಿಗೆ ಈ ಒಪ್ಪಂದವನ್ನು ರೂಪಿಸಲಾಗಿದೆ. 14 ಸುತ್ತುಗಳ ಸುದೀರ್ಘ ಮಾತುಕತೆಯ ನಂತರ 2025ರ ಜುಲೈನಲ್ಲಿ ಇದಕ್ಕೆ ಸಹಿ ಹಾಕಲಾಗಿತ್ತು, ಈಗ ಇದು ಜಾರಿಗೆ ಸಿದ್ಧವಾಗಿದೆ.


ಈ ಒಪ್ಪಂದದ ಅಡಿಯಲ್ಲಿ ಬ್ರಿಟನ್ ಮಾರುಕಟ್ಟೆಗೆ ರಫ್ತಾಗುವ ಭಾರತದ ಶೇ. 99ರಷ್ಟು ಸರಕುಗಳ ಮೇಲಿನ ಭಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿದ್ದ ಶೇ. 70ರವರೆಗೆ ಇದ್ದ ಸುಂಕ ಶೂನ್ಯವಾಗಲಿದೆ. ಕಡಲ ಉತ್ಪನ್ನಗಳ ಮೇಲಿನ ಶೇ. 21.5, ಎಂಜಿನಿಯರಿಂಗ್ ಮತ್ತು ಆಟೋ ಬಿಡಿಭಾಗಗಳ ಮೇಲಿನ ಶೇ. 18, ಚರ್ಮ ಮತ್ತು ಪಾದರಕ್ಷೆಗಳ ಮೇಲಿನ ಶೇ. 16 ಹಾಗೂ ಜವಳಿ ಮೇಲಿನ ಶೇ. 12ರಷ್ಟು ಸುಂಕಗಳು ಸಂಪೂರ್ಣ ರದ್ದಾಗಲಿವೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಮತ್ತು ಕೆನಡಾ ನಡುವಿನ ಆರ್ಥಿಕ ಬಾಂಧವ್ಯ ಸುಧಾರಿಸುತ್ತಿರುವುದಕ್ಕೆ ಜಿ7 ಶೃಂಗಸಭೆ ಸಾಕ್ಷಿಯಾಗಿದೆ. ಉಭಯ ದೇಶಗಳ ನಾಯಕರ ಸಭೆಯ ಬಳಿಕ ಬಿಡುಗಡೆ ಮಾಡಲಾದ ಜಂಟಿ ಪ್ರಕಟಣೆಯಲ್ಲಿ, ‘ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ’ (CEPA) ಕುರಿತು ನಡೆಯುತ್ತಿರುವ ಮಾತುಕತೆಗಳ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಸಕ್ತ 2026ರ ವರ್ಷದ ಅಂತ್ಯದೊಳಗೇ ಈ ಮಹತ್ವದ ಒಪ್ಪಂದವನ್ನು ಅಂತಿಮಗೊಳಿಸುವ ಹಂಚಿಕೆಯ ಗುರಿಯನ್ನು ಉಭಯ ದೇಶಗಳು ಪುನರುಚ್ಚರಿಸಿವೆ.

ಇದನ್ನೂ ಓದಿ: ಮೋದಿ ಬಹಳ ಸುಂದರ ವ್ಯಕ್ತಿ, ಕೆಲಸದ ವಿಷಯದಲ್ಲಿ ಮಾತ್ರ ಕಿಲ್ಲರ್; ಗೆಳೆಯನನ್ನು ಹೊಗಳಿದ ಟ್ರಂಪ್

ಯಾವುದೇ ಒಂದು ನಿರ್ದಿಷ್ಟ ಜಾಗತಿಕ ಬಣಕ್ಕೆ ಸೀಮಿತವಾಗದೆ ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳೊಂದಿಗೆ ಸಮಾನ ಮತ್ತು ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಧಾನಿ ಮೋದಿಯವರ ‘ಮಲ್ಟಿ-ಅಲೈನ್‌ಮೆಂಟ್’ ವಿದೇಶಾಂಗ ನೀತಿಯು ಭಾರತಕ್ಕೆ ದೊಡ್ಡ ಮಟ್ಟದ ಆರ್ಥಿಕ ಯಶಸ್ಸನ್ನು ತಂದುಕೊಡುತ್ತಿದೆ. ಬ್ರಿಟನ್, ಕೆನಡಾ ಮತ್ತು ಇಡೀ ಯುರೋಪ್ ಮಾರುಕಟ್ಟೆಗಳು ಭಾರತದ ಪಾಲಿಗೆ ಮುಕ್ತವಾಗುತ್ತಿರುವುದು ಮುಂಬರುವ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಭಾರಿ ಕೊಡುಗೆ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:20 pm, Wed, 17 June 26

Follow Us