
ನವದೆಹಲಿ, ಫೆಬ್ರವರಿ 06: ಕನಸು ಕಾಣದಿರುವುದು ಅಪರಾಧ, ಕನಸ್ಸನ್ನು ಪ್ರತಿಯೊಬ್ಬರೂ ಕಾಣಲೇಬೇಕು, ಕೇವಲ ಕನಸ್ಸಿನ ಬಗ್ಗೆ ಮಾತನಾಡುತ್ತಾ ಇರುವುದಲ್ಲ, ಸಫಲತೆಯ ಹಾದಿ ಹಿಡಿದು ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ಪರೀಕ್ಷಾ ಪೆ ಚರ್ಚಾ(Pariksha Pe Charcha) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ನೀವು ಸಮರ್ಥರಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು.
ಒಬ್ಬ ವಿದ್ಯಾರ್ಥಿ ಗಗನಯಾತ್ರಿಯಾಗಲು ಬಯಸಿದರೆ, ಸಂಪೂರ್ಣವಾಗಿ ಅಧ್ಯಯನ ಮಾಡಬೇಕು, ಜ್ಞಾನವನ್ನು ವಿಸ್ತರಿಸುವುದನ್ನು ಮುಂದುವರಿಸಬೇಕು. ಕೇವಲ ನನ್ನ ಕನಸು ಇದಿದೆ ಎನ್ನುತ್ತಾ ಜಪ ಮಾಡುತ್ತಿರುವುದಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ನಿಮಗೆ ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ: ಮೋದಿ
ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ, ನೀವು ಪಂಚತಾರಾ ಹೋಟೆಲ್‌ನಲ್ಲಿ ವಾಸಿಸುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತೀರಿ ಎಂದರ್ಥವಲ್ಲ. ಸೌಲಭ್ಯಗಳು ಗಮನವನ್ನು ಸುಧಾರಿಸುವುದಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಟಾಪರ್‌ಗಳಲ್ಲಿ ಹೆಚ್ಚಿನವರು ಬಡತನದಲ್ಲಿ ಬೆಳೆದ ಮಕ್ಕಳೇ ಇರುತ್ತಾರೆ.
ಮಕ್ಕಳಿಗೆ ಹೊಸ ವಿಷಯಗಳನ್ನು ಕಲಿಸಲು ಒತ್ತು
ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಹೊಸ ವಿಷಯಗಳನ್ನು ಕಲಿಯುವತ್ತ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಕಡಿಮೆ ಅಂಕಗಳನ್ನು ಪಡೆದರೂ ಭಯಪಡಬೇಡಿ, ಬದಲಾಗಿ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಮತ್ತು ಉತ್ತಮವಾಗಿ ಕೆಲಸ ಮಾಡಿ.
ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ಪ್ರಧಾನಿ ಮೋದಿ ಸಲಹೆ
ಪ್ರಧಾನಿ ಮೋದಿ ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಡೈರಿಯಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದರು. ನಂತರ, ಮರುದಿನ, ಯಾವ ಕೆಲಸಗಳು ಪೂರ್ಣಗೊಂಡಿವೆ ಮತ್ತು ಯಾವುದನ್ನು ಪೂರ್ಣಗೊಳಿಸಲಾಗಿಲ್ಲ ಎಂಬುದರ ಬಗ್ಗೆ ಆಲೋಚನೆ ಮಾಡಿ, ಇದು ಅವರಿಗೆ ಸಮಯ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಇದು ಅವರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋಷಕರಿಗೆ ಪ್ರಧಾನಿ ಮೋದಿ ಈ ಸಲಹೆ
ಮಕ್ಕಳು ಅಧ್ಯಯನದ ಒತ್ತಡವನ್ನು ಅನುಭವಿಸದಂತೆ ಪೋಷಕರು ಅವರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಪ್ರಧಾನಿ ಮೋದಿ ಹೇಳಿದರು.
12ನೇ ತರಗತಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಹೇಗೆ?
ಎರಡೆರಡು ಪರೀಕ್ಷೆಗಳಿಗೆ ಒಮ್ಮೆಲೆ ತಯಾರಿ ನಡೆಸುವುದು ಎಂದರೆ ಸುಲಭದ ಮಾತಲ್ಲ, ಆದರೆ ನಿಮಗೆ ಬೋರ್ಡ್ ಪರೀಕ್ಷೆಗಳು ಅತಿ ಮುಖ್ಯ ಹೀಗಾಗಿ ನೀವು ಬೋರ್ಡ್ ಪರೀಕ್ಷೆಗಳತ್ತ ಗಮನಗರಿಸಿದರೆ ಬೇರೆ ಪರೀಕ್ಷೆಗಳ ಬಗ್ಗೆಯೂ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಓದುವಾಗ ಏಕಾಗ್ರತೆ ಕೊರತೆ
ನಾವು ಯಾವುದಾದರೂ ವಿಷಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದನ್ನು ಎಷ್ಟು ವರ್ಷವಾದರೂ ಮರೆಯದೇ ನೆನಪಿಸಿಕೊಳ್ಳುತ್ತೇವೆ. ನಿಮಗಿಂತ ದುರ್ಬಲರಾಗಿರುವ ಮಕ್ಕಳಿಗೆ ನೀವು ಪ್ರತಿದಿನ ಕಲಿಸಬೇಕು ಮತ್ತು ತರಬೇತಿ ನೀಡಬೇಕು. ಇದು ನಿಮ್ಮ ಆಲೋಚನೆಗಳನ್ನು ಪುನರಾವರ್ತಿಸಲು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ನಿಮಗಿಂತ ಬುದ್ಧಿವಂತ ಮಕ್ಕಳೊಂದಿಗೆ ಕುಳಿತು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ.
ಜೀವನಕ್ಕೆ ಅಂಕಗಳು ಎಷ್ಟು ಮುಖ್ಯ?
ನಮ್ಮೊಳಗಿನ ವಿದ್ಯಾರ್ಥಿಯನ್ನು ಸದಾ ಎಚ್ಚರವಾಗಿರಿಸಿಕೊಳ್ಳಬೇಕು, ಅರ್ಧಂಬರ್ಧ ಶಿಕ್ಷಣವು ಯಶಸ್ವಿ ಜೀವನಕ್ಕೆ ಕಾರಣವಾಗುವುದಿಲ್ಲವಾದ್ದರಿಂದ ನಾವು ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಕಳೆದ ವರ್ಷದ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ 10 ವಿದ್ಯಾರ್ಥಿಗಳ ಹೆಸರುಗಳು ನಿಮಗೆ ನೆನಪಿದೆಯೇ? ಅವರ ಫೋಟೋಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದರೂ, ನಮಗೆ ಅವರ ನೆನಪಿಲ್ಲ. ಇದರರ್ಥ ಅಂಕಗಳ ಪರಿಣಾಮವು ಸ್ವಲ್ಪ ಸಮಯ ಮಾತ್ರ ಇರುತ್ತದೆ. ಆದ್ದರಿಂದ, ಅಂಕಗಳ ಮೇಲೆ ಕೇಂದ್ರೀಕರಿಸುವ ಬದಲು, ನಾವು ನಮ್ಮ ಜೀವನದ ನಿಜವಾದ ಉದ್ದೇಶದ ಮೇಲೆ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
#WATCH | PM Narendra Modi interacts with students during the 9th edition of ‘Pariksha pe Charcha’.
He says, “… Be responsible citizens… If we want a Viksit Bharat, we need to ensure cleanliness and raise awareness for the same… Technology is a boon, and we need to embrace… pic.twitter.com/18PJTFgwaI
— ANI (@ANI) February 6, 2026
ಪರೀಕ್ಷೆಗೆ ಓದುವುದು ಹೇಗೆ?
ಶಿಕ್ಷಕರು ತಮಗೆ ಅಂಕಗಳನ್ನು ತಂದುಕೊಡುವ ವಿಷಯಗಳನ್ನು ಕಲಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ, ಉತ್ತಮ ಶಿಕ್ಷಕರು ಇಡೀ ಪಠ್ಯಕ್ರಮದ ಮೇಲೆ ಕೇಂದ್ರೀಕರಿಸುತ್ತಾರೆ, ಇದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೌಲರ್ ಭುಜದ ವ್ಯಾಯಾಮ ಮಾಡುವುದರಿಂದ ಮಾತ್ರ ಫಿಟ್ ಆಗಿರಬಹುದೇ ಎಂದು ಅವರು ಕೇಳಿದರು? ಬೌಲರ್ ಚೆನ್ನಾಗಿ ಬೌಲಿಂಗ್ ಮಾಡಲು ಬಯಸಿದರೆ, ಅವನು ತನ್ನ ಇಡೀ ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಒಬ್ಬ ಕ್ರಿಕೆಟಿಗ ತನ್ನ ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕಾದಂತೆಯೇ, ಶಿಕ್ಷಣವು ನಮ್ಮ ಜೀವನವನ್ನು ಯಶಸ್ವಿಗೊಳಿಸಲು ಒಂದು ಮಾಧ್ಯಮವಾಗಿದೆ. ಅಂತಿಮ ಗುರಿ ಪರೀಕ್ಷೆಯ ಅಂಕಗಳಾಗಿರಬಾರದು. ಅಂತಿಮ ಗುರಿ ಜೀವನದ ಅಭಿವೃದ್ಧಿಯ ಗುರಿಯಾಗಿರಬೇಕು.
ಮಕ್ಕಳಿಗೆ ಕೌಶಲ್ಯ ಮುಖ್ಯವೇ ಅಥವಾ ಅಂಕಗಳೇ ಹೆಚ್ಚು ಮುಖ್ಯವೇ?
ಮಕ್ಕಳಿಗೆ ಕೌಶಲ್ಯ ಹೆಚ್ಚು ಮುಖ್ಯವೇ ಅಥವಾ ಅಂಕಗಳು ಹೆಚ್ಚು ಮುಖ್ಯವೇ ಎಂದು ಕೇಳಿದಾಗ, ಎಲ್ಲದರಲ್ಲೂ ಸಮತೋಲನ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಒಂದು ಕಡೆ ವಾಲಿದರೆ, ನಾವು ಬೀಳುತ್ತೇವೆ, ಆದರೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅದನ್ನು ತಡೆಯುತ್ತದೆ. ಎರಡು ರೀತಿಯ ಕೌಶಲ್ಯಗಳಿವೆ: ಮೊದಲನೆಯದಾಗಿ, ಜೀವನ ಕೌಶಲ್ಯಗಳು ಮತ್ತು ಎರಡನೆಯದಾಗಿ, ವೃತ್ತಿಪರ ಕೌಶಲ್ಯಗಳು. ಎರಡೂ ಕೌಶಲ್ಯಗಳಿಗೆ ಗಮನ ಕೊಡುವುದು ಅತ್ಯಗತ್ಯ. ಅಭ್ಯಾಸವಿಲ್ಲದೆ ಯಾವುದೇ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ, ಮತ್ತು ಎಲ್ಲವೂ ಜ್ಞಾನದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ, ಅಧ್ಯಯನ ಮಾಡದೆ ಯಾವುದೇ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸ್ವದೇಶಿ ವಸ್ತುಗಳನ್ನು ಗೌರವಿಸಿ
ನಾವೇ ಸ್ವದೇಶಿ ವಸ್ತುಗಳನ್ನು ಗೌರವಿಸದಿದ್ದರೆ ಬೇರೆ ದೇಶದವರು ಅದನ್ನು ಗೌರವಿಸುತ್ತಾರಾ, ವಿಕಸಿತ ಭಾರತ ನಿರ್ಮಾಣ ಮಾಡುವಾಗ ಇದೆಲ್ಲಾ ಅಂಶಗಳ ಕಡೆಗೆ ಹೆಚ್ಚು ಗಮನಹರಿಸಬೇಕು, ನಮ್ಮ ದೇಶದಲ್ಲೇ ಸಿದ್ಧಪಡಿಸಿರುವ ವಸ್ತುಗಳನ್ನು ನಾವು ಗೌರವಿಸಬೇಕು ಎಂದರು. ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿದೆ ಎಂಬ ಕಾರಣಕ್ಕೆ ಸಮಯ ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ