ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ
India has unique combination of high growth and low inflation, PM Modi says in Rajya Sabha: ವೇಗವಾಗಿ ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಭಾರತವು ಗ್ಲೋಬಲ್ ಫೋರ್ಸ್ ಆಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ವೇಳೆ ಮಾತನಾಡುತ್ತಿದ್ದ ಪ್ರಧಾನಿಗಳು, ಭಾರತದ ಆರ್ಥಿಕ ಶಕ್ತಿಯನ್ನು ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ಹಿಂದಿನ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸಲು ತಮ್ಮ ಸರ್ಕಾರದ ಹೆಚ್ಚಿನ ಸಮಯ ವ್ಯಯವಾಗಿದೆ ಎಂದಿದ್ದಾರೆ.

ನವದೆಹಲಿ, ಫೆಬ್ರುವರಿ 5: ಬಹಳ ವೇಗವಾಗಿ ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಗುರುವಾರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ವೇಳೆ ಮಾತನಾಡುತ್ತಾ, ಭಾರತದ ಹೆಚ್ಚುತ್ತಿರುವ ಶಕ್ತಿಯ ಬಗ್ಗೆ ಗಮನ ಸೆಳೆದಿದ್ದಾರೆ.
‘ಎರಡನೇ ವಿಶ್ವ ಮಹಾಯುದ್ಧದ ನಂತರ ಹೊಸ ವಿಶ್ವ ಶ್ರೇಣಿ ನಿರ್ಮಾಣವಾಯಿತು. ಈಗ ಜಗತ್ತು ಮತ್ತೆ ಹೊಸ ಶ್ರೇಣಿಯತ್ತ ಸಾಗುತ್ತಿದೆ. ವಿಶ್ವ ಬಂಧು ಎನಿಸಿರುವ ಭಾರತದತ್ತ ಜಗತ್ತು ವಾಲುತ್ತಿದೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.
ವ್ಯಾಪಾರ ಒಪ್ಪಂದಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ವಂದನಾ ನಿರ್ಣಯದ ಮೇಲಿನ ಭಾಷಣದಲ್ಲಿ ನರೇಂದ್ರ ಮೋದಿ ಅವರು ವ್ಯಾಪಾರ ಒಪ್ಪಂದಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಯೂರೋಪಿಯನ್ ಯೂನಿಯನ್ ಜೊತೆಗಿನ ವ್ಯಾಪಾರ ಒಪ್ಪಂದವು ಐತಿಹಾಸಿಕ ಎನಿಸಿದೆ. ಹಲವು ದೇಶಗಳೊಂದಿಗೆ ಭವಿಷ್ಯಕ್ಕೆ ತಾಳೆಯಾಗುವ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೋದಿ ಈ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್
ತಮ್ಮ ಸರ್ಕಾರದ ಹೆಚ್ಚಿನ ಶಕ್ತಿಯು ಹಿಂದಿನ ತಪ್ಪುಗಳನ್ನು ಸರಿಪಡಿಸುವುದರಲ್ಲೇ ವ್ಯಯವಾಗಿದೆ. ದೇಶದ ಬಗ್ಗೆ ಇದ್ದ ಋಣಾತ್ಮಕ ಅಭಿಪ್ರಾಯವನ್ನು ಸರಿಪಡಿಸಲು ಸುಧಾರಣೆಗಳನ್ನು ತರಲಾಗಿದೆ. ಈಗ ದೇಶದ ಆಡಳಿತದಲ್ಲಿ ಸ್ಪಷ್ಟ ನೀತಿ ಮತ್ತು ದೂರಗಾಮಿ ತಂತ್ರ ಇದೆ ಎಂದಿದ್ದಾರೆ ಪ್ರಧಾನಿಗಳು.
ಹಿಂದೊಮ್ಮೆ ಅತಿದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದೆನಿಸಿದ್ದ ಭಾರತ ಈಗ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಅಧಿಕ ಜಿಡಿಪಿ ವೃದ್ಧಿ ಮತ್ತು ಕಡಿಮೆ ಹಣದುಬ್ಬರದ ವಿಶೇಷ ಅನುಕೂಲ ಭಾರತಕ್ಕೆ ಇದೆ. ಮುಂದುವರಿದ ದೇಶಗಳಿಗೆ ವಯಸ್ಸಾಗುತ್ತಿದೆ. ಭಾರತಕ್ಕೆ ಯುವಜನರ ಸಂಖ್ಯಾಬಲ ಇದೆ ಎಂದು ಪ್ರಧಾನಿಗಳು ಭಾರತಕ್ಕಿರುವ ಹಲವು ಅನುಕೂಲಗಳನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ
ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕೊಡುವ ಮೂಲಕ ವಿಶ್ವಕ್ಕೆ ಭರವಸೆಯ ಬೆಳಕಾಗಿದೆ. ಗ್ಲೋಬಲ್ ಸೌತ್ಗೆ (ಅಭಿವೃದ್ಧಿಶೀಲ ದೇಶಗಳು) ಭಾರತವು ಧ್ವನಿಯಾಗಿದೆ ಎಂದೂ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




