AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಸ್ಫೋಟವಾದರೂ ಭೂತಾನ್​ಗೆ ತೆರಳಿದ ಪ್ರಧಾನಿ ಮೋದಿ ಬದ್ಧತೆಗೆ ಸ್ಥಳೀಯ ಮಾಧ್ಯಮಗಳು ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಭೂತಾನ್​ಗೆ ಎರಡು ದಿನಗಳ ಭೇಟಿಗೆ ತೆರಳುವುದು ಮೊದಲೇ ನಿರ್ಧರಿತವಾಗಿತ್ತು. ಆದರೆ, ಸೋಮವಾರ ಇದ್ದಕ್ಕಿದ್ದಂತೆ ದೆಹಲಿಯ ಕೆಂಪು ಕೋಟೆ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ ಸಾಕಷ್ಟು ಜನರು ಮೃತಪಟ್ಟರು. ಇದರಿಂದಾಗಿ ಪ್ರಧಾನಿ ಮೋದಿ ಭೂತಾನ್​ ಪ್ರವಾಸವನ್ನು ರದ್ದುಗೊಳಿಸಬಹುದು ಎಂದು ಭೂತಾನ್​ನ ಮಾಧ್ಯಮಗಳು ಭಾವಿಸಿದ್ದವು. ಆದರೆ, ಪೂರ್ವನಿಯೋಜಿತ ಭೇಟಿಯನ್ನು ರದ್ದುಗೊಳಿಸದೆ ಭೂತಾನ್​ಗೆ ತೆರಳಿದ ಪ್ರಧಾನಿ ಮೋದಿಯವರ ಬದ್ಧತೆಯನ್ನು ಭೂತಾನ್ ಮಾಧ್ಯಮಗಳು ಮೆಚ್ಚಿಕೊಂಡಿವೆ.

ದೆಹಲಿಯಲ್ಲಿ ಸ್ಫೋಟವಾದರೂ ಭೂತಾನ್​ಗೆ ತೆರಳಿದ ಪ್ರಧಾನಿ ಮೋದಿ ಬದ್ಧತೆಗೆ ಸ್ಥಳೀಯ ಮಾಧ್ಯಮಗಳು ಮೆಚ್ಚುಗೆ
Pm Modi Bhutan Visit
ಸುಷ್ಮಾ ಚಕ್ರೆ
|

Updated on: Nov 11, 2025 | 9:46 PM

Share

ನವದೆಹಲಿ, ನವೆಂಬರ್ 11: ಪ್ರಧಾನಿ ಮೋದಿ (PM Narendra Modi) ಭೂತಾನ್ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯಿಂದ ಭೂತಾನ್ ಮಾಧ್ಯಮಗಳು ಅಚ್ಚರಿಗೊಂಡಿವೆ. ಭೂತಾನ್ ಪತ್ರಿಕೆಯ ಸಂಪಾದಕರು ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಮೂಲಕ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. “ದೆಹಲಿ ಸ್ಫೋಟಗಳ ನಂತರ ಪ್ರಧಾನಿ ಮೋದಿ ಭೂತಾನ್​ಗೆ ಬರಲು ಸಾಧ್ಯವಾಗುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ಆದರೆ ಭೂತಾನ್​ಗೆ ಅವರ ಆಗಮನದಿಂದ ನಮಗೆ ಆಶ್ಚರ್ಯವಾಯಿತು” ಎಂದು ಅವರು ಬರೆದಿದ್ದಾರೆ.

ತಮ್ಮ ದೇಶದಲ್ಲಿ ಭೀಕರ ದಾಳಿ ನಡೆದರೂ ಬೇರೆ ದೇಶದ ಸಂಬಂಧಕ್ಕೆ ಬೆಲೆ ಕೊಟ್ಟು ತಮ್ಮ ಪ್ರವಾಸವನ್ನು ಮುಂದುವರೆಸಿದ ಪ್ರಧಾನಿ ಮೋದಿಯವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಭೂತಾನ್​ನ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ಈ ಬಾರಿ ಪ್ರಧಾನಿ ಮೋದಿ ಅವರ ಭೇಟಿ ಎರಡೂ ದೇಶಗಳು ಜಂಟಿಯಾಗಿ ನಿರ್ಮಿಸುತ್ತಿರುವ 1020 ಮೆಗಾವ್ಯಾಟ್ ಪುನತ್ಸಂಗ್ಚು II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲು ಮಾತ್ರವಲ್ಲದೆ, 1972ರಿಂದ ಭೂತಾನ್-ಭಾರತ ಸಂಬಂಧಗಳಲ್ಲಿ ಪ್ರಮುಖ ಶಕ್ತಿಯಾಗಿರುವ ದೊರೆ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ IV ಅವರನ್ನು ಗೌರವಿಸಿದ್ದು ವಿಶೇಷವಾಗಿತ್ತು ಎಂದು ಭೂತಾನ್ ಮಾಧ್ಯಮದ ಸಂಪಾದಕರೊಬ್ಬರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: PM Modi on Delhi Blast: ದೆಹಲಿ ನಿಗೂಢ ಸ್ಫೋಟ, ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ, ಪ್ರಧಾನಿ ಮೋದಿ ಪ್ರತಿಜ್ಞೆ

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನಿನ ಜನರಿಗೆ ಅಪಾರ ಸಂತೋಷ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಬಹುನಿರೀಕ್ಷಿತ ಭಾಷಣದಲ್ಲಿ, ಗೆಲೆಫು ಮೈಂಡ್‌ಫುಲ್‌ನೆಸ್ ನಗರಕ್ಕೆ ರೈಲ್ವೆ ಸಂಪರ್ಕ ಮತ್ತು ಭಾರತದ ಕಡೆಯಿಂದ ವಲಸೆ ಚೆಕ್‌ಪಾಯಿಂಟ್ ಘೋಷಿಸುವ ಮೂಲಕ ಭೂತಾನಿನ ಜನರಿಗೆ ಅಪಾರ ಸಂತೋಷ ತಂದರು. ಅವರು ನಾಲ್ಕನೇ ರಾಜನಿಗೆ ಗೌರವ ಸಲ್ಲಿಸಿದರು. ಅವರು ದೆಹಲಿ ದಾಳಿಯ ಬಗ್ಗೆಯೂ ಮಾತನಾಡಿದರು. ಈ ಸಂದರ್ಭದಲ್ಲಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ವ್ಯಕ್ತಪಡಿಸಿದ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್, ಬೌದ್ಧ ಧಾರ್ಮಿಕ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ, ದೆಹಲಿ ಸ್ಫೋಟ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ಪ್ರಾರ್ಥಿಸಿದರು. ಭಾರತದ ಸಮೃದ್ಧಿ ಮತ್ತು ಯಶಸ್ಸಿಗೆ ಪ್ರಾರ್ಥಿಸಿದರು” ಎಂದು ಅವರು ಪೋಸ್ಟ್ ಮಾಡಿದ್ದಾರೆ.

“ಇಂದು ನಾನು ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ. ನಿನ್ನೆ ರಾತ್ರಿಯಿಡೀ ತನಿಖೆಯಲ್ಲಿ ಭಾಗಿಯಾಗಿರುವ ಸಂಸ್ಥೆಗಳು ಮತ್ತು ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಪಿತೂರಿಯ ಆಳವನ್ನು ಭೇದಿಸುತ್ತವೆ. ಅಪರಾಧಿಗಳನ್ನು ಬಿಡಲಾಗುವುದಿಲ್ಲ” ಎಂದು ಇಂದು ಭೂತಾನ್​ನಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

ಇದನ್ನೂ ಓದಿ: ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ- ಭೂತಾನ್ ರಾಜ

ಪ್ರಧಾನಿ ಮೋದಿ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ವಿದೇಶ ಭೇಟಿಯಲ್ಲಿ ಭೂತಾನ್‌ಗೆ ಭೇಟಿ ನೀಡಿದ್ದರು. ಆಗಸ್ಟ್ 2019ರಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಅವರು ಭೂತಾನ್‌ಗೆ ರಾಜ್ಯ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಮಾರ್ಚ್ 2024ರಲ್ಲಿ ಭೂತಾನ್‌ಗೆ ಮತ್ತೊಮ್ಮೆ ಭೇಟಿ ನೀಡಿದ್ದರು. ಆಗ ಅಲ್ಲಿ ಅವರಿಗೆ ಥಿಂಪುವಿನ ಟೆಂಡ್ರೆಲ್ಥಾಂಗ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭೂತಾನ್ ರಾಜರಿಂದ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರಕ್ ಗಯಾಲ್ಪೊ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ