BJP Executive Meeting: ದ್ರೌಪದಿ ಮುರ್ಮು ಉಮೇದುವಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ರಾಜಕೀಯ ನಿರ್ಣಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಮುರ್ಮು ಅವರ ಬಗ್ಗೆ ಮಾತನಾಡಿದರು.

BJP Executive Meeting: ದ್ರೌಪದಿ ಮುರ್ಮು ಉಮೇದುವಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 03, 2022 | 3:05 PM

ಹೈದರಾಬಾದ್: ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP National Executive Meeting) ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಉಮೇದುವಾರಿಕೆಯನ್ನು ‘ಐತಿಹಾಸಿಕ’ ಎಂದು ಶ್ಲಾಘಿಸಿದರು. ರಾಜಕೀಯ ನಿರ್ಣಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಮುರ್ಮು ಅವರ ಬಗ್ಗೆ ಮಾತನಾಡಿದರು.

ಮುರ್ಮು ಅವರ ಜೀವನ ಮತ್ತು ಸಾಧನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಗೌರವದಿಂದ ಮಾತನಾಡಿದರು. ಅವರ ವಿನಯವಂತಿಕೆ ಮತ್ತು ಇಡೀ ಜೀವನದಲ್ಲಿ ಅವರು ಹೋರಾಡಿದ ರೀತಿಯನ್ನು ವಿವರಿಸಿದ ಪ್ರಧಾನಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ಸಾಧನೆಗಳನ್ನು ಅವರು ಮಾಡಿದರು ಎಂದು ಹೇಳಿದರು. ಮುರ್ಮು ಅವರ ಸಾರ್ವಜನಿಕ ಬದುಕಿನ ಬಗ್ಗೆ ಮಾತನಾಡಿದ ಮೋದಿ, ಸಮಾಜದ ವಿವಿಧ ವರ್ಗಗಳ ಜನರನ್ನು ಮೇಲೆತ್ತಲು ಅವರು ಅವಿರತ ಶ್ರಮಿಸಿದರು ಎಂದು ಹೇಳಿದರು.

ಭಾರತವು ಮೊದಲ ಬಾರಿಗೆ ಬುಡಕಟ್ಟು ವರ್ಗಕ್ಕೆ ಸೇರಿದ ಮಹಿಳೆಯನ್ನು ರಾಷ್ಟ್ರಪತಿಯಾಗಿ ಹೊಂದುವ ಗೌರವ ಪಡೆದುಕೊಳ್ಳುತ್ತಿದೆ. ಅವರ ಉಮೇದುವಾರಿಕೆಯು ಎಲ್ಲ ರಾಜಕೀಯ ನಡೆಗಳನ್ನೂ ಮೀರಿದ್ದು ಎಂದು ಮೋದಿ ತಿಳಿಸಿದರು. ಮುರ್ಮು ಅವರು ಜೂನ್ 24ರಂದು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರ ಸಮಕ್ಷಮ ರಾಷ್ಟ್ರಪತಿ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಆಂಧ್ರ ಪ್ರದೇಶದ ವೈಎಸ್​ಆರ್ ಕಾಂಗ್ರೆಸ್ ಮತ್ತು ಒಡಿಶಾದ ಬಿಜು ಜನತಾದಳ ಸಹ ಮುರ್ಮು ಅವರನ್ನು ಬೆಂಬಲಿಸಿವೆ.

ಮುರ್ಮು ಅವರ ಪರವಾಗಿ ಬೆಂಬಲ ಕೋರಿ ಬಿಜೆಪಿಯು ಹಲವು ಪಕ್ಷಗಳ ನಾಯಕರನ್ನು ಸಂಪರ್ಕಿಸಿದೆ. ಮುರ್ಮು ಅವರೇ ಸ್ವತಃ ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್​ಸಿಪಿ ನಾಯಕ ಶರದ್ ಪವಾರ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬೆಂಬಲ ಯೋಚಿಸಿದ್ದರು. ಬಿಜೆಪಿ ನಾಯಕ ಜೆಪಿ ನಡ್ಡಾ ಸಹ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಕೋರಿ ಹಲವು ನಾಯಕರನ್ನು ವಿನಂತಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಎನ್​ಸಿಪಿ ನಾಯಕ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಮತ್ತು ಶಿರೋಮಣಿ ಅಕಾಲಿದಳದ ನಾಯಕ ಸುಖ್​ದೀರ್ ಬಾದಲ್ ಅವರನ್ನು ಜೆಪಿ ನಡ್ಡಾ ಸಂಪರ್ಕಿಸಿದ್ದರು.

ಶಿರೋಮಣಿ ಅಕಾಲಿ ದಳ ಮತ್ತು ಎಚ್.ಡಿ.ದೇವೇಗೌಡರ ಜೆಡಿಎಸ್ ಈಗಾಗಲೇ ಮುರ್ಮು ಅವರನ್ನು ಬೆಂಬಲಿಸಿವೆ. ರಾಷ್ಟ್ರಪತಿ ಸ್ಥಾನಕ್ಕೆ ಜುಲೈ 18ರಂದು ಚುನಾವಣೆಗಳು ನಡೆಯಲಿದ್ದು, ಜುಲೈ 21ರಂದು ಮತಎಣಿಕೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ.

Published On - 3:05 pm, Sun, 3 July 22