ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ; ಸುಪ್ರೀಂ ಕೋರ್ಟ್
ಜನವರಿ 5ರಂದು ರೈತರ ಪ್ರತಿಭಟನೆಯಿಂದಾಗಿ ಚುನಾವಣಾ ರ್ಯಾಲಿಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಅವರನ್ನು ಹುಸೇನಿವಾಲಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜನವರಿಯಲ್ಲಿ ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಂಜಾಬ್ ಪೊಲೀಸರ ನಡವಳಿಕೆಯಲ್ಲಿ ಲೋಪದೋಷ ಕಂಡು ಬಂದಿದ್ದು, ಈ ಕುರಿತು ಸುಪ್ರೀಂ ಕೋರ್ಟ್ (Supreme Court) ತೀರ್ಪು ಪ್ರಕಟಿಸಿದೆ. ಪ್ರಧಾನಮಂತ್ರಿಗಳ ಭದ್ರತಾ ಲೋಪದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು ಪೊಲೀಸರ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಐವರು ಸದಸ್ಯರ ಸಮಿತಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ ಕಾರಣಕ್ಕಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಫಿರೋಜ್‌ಪುರ ವಿರುದ್ಧ ದೋಷಾರೋಪಣೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಫಿರೋಜ್‌ಪುರ ಎಸ್‌ಎಸ್‌ಪಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಾಕಷ್ಟು ಪೊಲೀಸ್ ಸಿಬ್ಬಂದಿ ಲಭ್ಯವಿದ್ದರೂ ಅವರು ಭದ್ರತೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. 2 ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಆ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ ಎಂದು ತಿಳಿಸಿದ್ದರೂ ಸಹ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: PM Modi’s Security Breach ಪಂಜಾಬ್ ಭೇಟಿ ವೇಳೆ ಮೋದಿ ಭದ್ರತಾ ಲೋಪ ಪ್ರಕರಣ; ಸುಪ್ರೀಂ ತೀರ್ಪು ಇಂದು
ಐವರು ಸದಸ್ಯರ ಸಮಿತಿಯು ಪ್ರಧಾನಿ ಭದ್ರತೆಯನ್ನು ಬಲಪಡಿಸಲು ಪರಿಹಾರ ಕ್ರಮಗಳನ್ನು ಸೂಚಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಹೇಳಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ವರದಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನವರಿ 5ರಂದು ರೈತರ ಪ್ರತಿಭಟನೆಯಿಂದಾಗಿ ಚುನಾವಣಾ ರ್ಯಾಲಿಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಅವರನ್ನು ಹುಸೇನಿವಾಲಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಬಳಿಕ ಮೋದಿ ಚುನಾವಣಾ ರ್ಯಾಲಿಗೆ ಹೋಗದೆ ವಾಪಾಸ್ ವಿಮಾನ ಹತ್ತಿ ದೆಹಲಿಗೆ ತೆರಳಿದ್ದರು.
ಈ ಘಟನೆಯ ಬಗ್ಗೆ ಭಾರೀ ಗಲಾಟೆ ಭುಗಿಲೆದ್ದಿದ್ದು, ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರವು ಪ್ರಧಾನಿ ವಿರುದ್ಧ “ಹತ್ಯಾತ್ಮಕ ಪಿತೂರಿ” ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಆಗಿನ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಈ ಆರೋಪವನ್ನು ನಿರಾಕರಿಸಿದ್ದರು.
ಇದನ್ನೂ ಓದಿ: ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಏಕನಾಥ್ ಶಿಂಧೆ
ಪ್ರೋಟೋಕಾಲ್‌ಗೆ ಅನುಗುಣವಾಗಿ ಪ್ರಧಾನಿ ಭೇಟಿಗೆ ತುರ್ತು ಮಾರ್ಗವನ್ನು ಸಿದ್ಧಪಡಿಸುವಲ್ಲಿ ಪಂಜಾಬ್ ಪೊಲೀಸರು ವಿಫಲರಾಗಿದ್ದಾರೆ ಎಂದು ಗೃಹ ಸಚಿವಾಲಯ ಟೀಕಿಸಿತ್ತು. ಆ ಫ್ಲೈಓವರ್‌ನಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಸಿಲುಕಿಕೊಳ್ಳಲು ಕಾರಣವಾದ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಘಟನೆಯಲ್ಲಿ ಯಾವುದಾದರೂ ಕ್ರಿಮಿನಲ್ ಪಿತೂರಿ ಇದೆಯೇ ಎಂದು ಪತ್ತೆಹಚ್ಚಲು ಮತ್ತು ಪಂಜಾಬ್ ಪೊಲೀಸರ ಪಾತ್ರವನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಸಮಿತಿಯನ್ನು ನೇಮಿಸಿತ್ತು.
ಪ್ರಧಾನಿ ಮೋದಿಯವರು ಕಾರಿನಲ್ಲಿ ಕುಳಿತಿರುವುದು ಮತ್ತು ಪ್ರತಿಭಟನಾಕಾರರು ಮುಂದೆ ರಸ್ತೆ ತಡೆ ನಡೆಸುತ್ತಿರುವ ವೀಡಿಯೊಗಳನ್ನು ಸಮಿತಿಯು ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ.