Delhi-Mumbai Expressway: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಸೊಹ್ನಾ-ದೌಸಾ ಮಾರ್ಗಕ್ಕೆ ಇಂದು ಮೋದಿ ಚಾಲನೆ
ದೆಹಲಿ ಮತ್ತು ಜೈಪುರದ ನಡುವೆ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಸೊಹ್ನಾ (ಹರಿಯಾಣ)- ದೌಸಾ (ರಾಜಸ್ಥಾನ) ಮಾರ್ಗವು ಮಂಗಳವಾರದಿಂದ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು (ಫೆಬ್ರವರಿ 12) ದೆಹಲಿ-ದೌಸಾ-ಲಾಲ್ಸೋಟ್ ಮಾರ್ಗದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯನ್ನು (Delhi-Mumbai Expressway) ಉದ್ಘಾಟಿಸಲಿದ್ದಾರೆ.ಇದರಿಂದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಜೈಪುರದ ನಡುವೆ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಸೊಹ್ನಾ (ಹರಿಯಾಣ)- ದೌಸಾ (ರಾಜಸ್ಥಾನ) ಮಾರ್ಗವು ಮಂಗಳವಾರದಿಂದ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ದೆಹಲಿ-ದೌಸಾ ವಿಸ್ತರಣೆಯೊಂದಿಗೆ ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯವು ಗಮನಾರ್ಹವಾಗಿ ಕಡಿಮೆಯಾಗಲಿದೆ. ಇದುವರೆಗೂ ಈ ದೂರವನ್ನು ಕ್ರಮಿಸಲು ಸುಮಾರು 5.5 ಗಂಟೆಗಳು ಬೇಕಾಗುತ್ತಿತ್ತು. ಆದರೆ, ಈ ಎಕ್ಸ್ಪ್ರೆಸ್ವೇಯಿಂದ ಆ ಪ್ರಯಾಣದ ಸಮಯವು 3 ಗಂಟೆಗೆ ಇಳಿಕೆಯಾಗಲಿದೆ.
ಇದರ ಜೊತೆಗೆ, ಸಂಪೂರ್ಣ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಮೂಲಕ ಪ್ರಯಾಣಿಕರು ದೆಹಲಿಯಿಂದ ಮುಂಬೈಗೆ ಕೇವಲ 12 ಗಂಟೆಗಳಲ್ಲಿ ರಸ್ತೆಯ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Nitin Gadkari Karnataka Visit: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ವೀಕ್ಷಿಸಿದ ನಿತಿನ್ ಗಡ್ಕರಿ
ಈ ಎಕ್ಸ್‌ಪ್ರೆಸ್‌ವೇಯ 5 ಪ್ರಮುಖ ಅಂಶಗಳು ಇಲ್ಲಿವೆ: 1. ಸೊಹ್ನಾ ಮತ್ತು ದೌಸಾ ನಡುವಿನ ವಿಸ್ತರಣೆಯು 246 ಕಿ.ಮೀ ಆಗಿದ್ದರೆ, ಭಾರತದ 2 ಪ್ರಮುಖ ನಗರಗಳನ್ನು ಸಂಪರ್ಕಿಸುವ ಸಂಪೂರ್ಣ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,380 ಕಿ.ಮೀ. ಉದ್ದವಿದೆ.
2. ಸೋಹ್ನಾ-ದೌಸಾ ಮಾರ್ಗವು ಜನನಿಬಿಡ ಭಾಗವಾದ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಗೆ ಪರ್ಯಾಯವಾಗಲಿದೆ.
3. ಸೊಹ್ನಾ-ದೌಸಾ ಮಾರ್ಗವನ್ನು 12,150 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
4. ಸೋಹ್ನಾ-ದೌಸಾ ಸ್ಟ್ರೆಚ್ ಹರಿಯಾಣದಲ್ಲಿ 160 ಕಿಮೀ ಕ್ರಮಿಸುತ್ತದೆ. ಇದು ಗುರುಗ್ರಾಮ್, ಪಲ್ವಾಲ್ ಮತ್ತು ನುಹ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಗುರುಗ್ರಾಮ್ ಜಿಲ್ಲೆಯ 11 ಗ್ರಾಮಗಳು, ಪಲ್ವಾಲ್‌ನ 7 ಗ್ರಾಮಗಳು ಮತ್ತು ನುಹ್ ಜಿಲ್ಲೆಯ 47 ಗ್ರಾಮಗಳನ್ನು ಒಳಗೊಂಡಿದೆ.
ಇದನ್ನೂ ಓದಿ: PM Narendra Modi: ನಾಳೆ ಏರ್ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ
5. ಈ ವಿಸ್ತರಣೆಯು ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ವೇಯೊಂದಿಗೆ ನೇರವಾಗಿ ಸಂಪರ್ಕಗೊಳ್ಳುತ್ತದೆ. ಈ ವಿಸ್ತರಣೆಯು ಎಕ್ಸ್‌ಪ್ರೆಸ್‌ವೇಯ ಇತರ ಭಾಗಗಳಂತೆ, 8 ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ದಟ್ಟಣೆಯನ್ನು ಅವಲಂಬಿಸಿ ಭವಿಷ್ಯದಲ್ಲಿ 12 ಲೇನ್‌ಗಳಿಗೆ ವಿಸ್ತರಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:39 am, Sun, 12 February 23