
ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ (Sardar Vallabhbhai Patel) ಜನ್ಮದಿನದ ಅಂಗವಾಗಿ ಇಂದು (ಅ. 31) ರಾಷ್ಟ್ರೀಯ ಏಕತಾ ದಿನವನ್ನು (Rashtriya Ekta Divas) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಕತಾ ಪ್ರತಿಮೆಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ಮೋದಿ, ರಾಷ್ಟ್ರೀಯ ಏಕತಾ ದಿವಸದಂದು ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಗುಜರಾತ್ನ ಮೋರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮಾಚರಣೆಗಳನ್ನು ಮಾಡುವುದಿಲ್ಲ ಎಂದು ತಿಳಿಸಲಾಗಿದೆ. ಮೋರ್ಬಿ ದುರಂತಕ್ಕೆ (Morbi Tragedy) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಸರ್ದಾರ್ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31 ಅನ್ನು 2014ರಿಂದ ಪ್ರತಿ ವರ್ಷ ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಲಾಗುತ್ತಿದೆ. ಈ ವರ್ಷವೂ ಪ್ರಧಾನಮಂತ್ರಿಯವರು ಏಕತಾ ಪ್ರತಿಮೆ ಬಳಿ ನಡೆಯುವ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Morbi bridge collapse: ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆ
ಈ ಬಗ್ಗೆ ಮಾತನಾಡಿರುವ ಬಿಜೆಪಿ ಗುಜರಾತ್ ಮಾಧ್ಯಮ ಸಂಚಾಲಕ ಡಾ. ಯಜ್ಞೇಶ್ ದವೆ, ಮೋರ್ಬಿ ದುರಂತದಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಯಾವುದೇ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಆದರೂ 2,900 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯ ಕಾರ್ಯಕ್ರಮಗಳು ಈ ಹಿಂದಿನ ವೇಳಾಪಟ್ಟಿಯಂತೆ ನಡೆಯಲಿದೆ. 8,000 ಕೋಟಿ ರೂ.ಗಳ ಥರಾಡ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ, ಬನಸ್ಕಾಂತ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರು ಅಹಮದಾಬಾದ್ನಲ್ಲಿ ಪ್ರಮುಖ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಹಾಗೇ, ನವೆಂಬರ್ 1ರಂದು ರಾಜಸ್ಥಾನದ ಮಂಗಢ್ ಹಿಲ್ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಮೋದಿ ಭಾಗವಹಿಸಲಿದ್ದಾರೆ. ಬಳಿಕ ಗುಜರಾತ್ನ ಪಂಚಮಹಲ್ ಜಿಲ್ಲೆಯ ಜಂಬುಗೋಡವನ್ನು ತಲುಪಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮೋದಿ ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಂಜೆ ಗುಜರಾತ್ನ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಹಾಗೇ, ಗುಜರಾತ್ ಮತ್ತು ರಾಜಸ್ಥಾನಕ್ಕೆ 3 ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ರೋಡ್ಶೋ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಮೋರ್ಬಿ ಕೇಬಲ್ ಸೇತುವೆ ಕುಸಿತದ ಘಟನೆಯ ಹಿನ್ನೆಲೆಯಲ್ಲಿ ಇದುವರೆಗೆ 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ, ರೋಡ್ ಶೋ ರದ್ದುಗೊಳಿಸಲಾಗಿದೆ.
Published On - 8:26 am, Mon, 31 October 22