
ನವದೆಹಲಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II (Queen Elizabeth) ನಿನ್ನೆ (ಗುರುವಾರ) ರಾತ್ರಿ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಬ್ರಿಟನ್ನ ಬಲ್ಮೋರಾಲ್ನಲ್ಲಿ ವೈದ್ಯಕೀಯ ನಿಗಾದಡಿ ಇದ್ದ 96 ವರ್ಷದ ರಾಣಿ ಎಲಿಜಬೆತ್- II ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
“2015 ಮತ್ತು 2018ರಲ್ಲಿ ನಾನು ಇಂಗ್ಲೆಂಡ್ಗೆ ಭೇಟಿ ನೀಡಿದ್ದಾಗ ಬ್ರಿಟನ್ ರಾಣಿ ಎಲಿಜಬೆತ್-II ಅವರನ್ನು ಭೇಟಿಯಾಗಿದ್ದೆ. ಅವರ ಪ್ರೀತಿ, ಉದಾರತೆ, ದಯೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರನ್ನು ಭೇಟಿಯಾಗಿದ್ದಾಗ ಒಂದು ಸಭೆಯಲ್ಲಿ ರಾಣಿ ಎಲಿಜಬೆತ್ ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದ್ದರು. ಅವರ ಸರಳತೆ ಎಲ್ಲರಿಗೂ ಮಾದರಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬ್ರಿಟನ್ ಮಹಾರಾಣಿ ಎಲಿಜಬೆತ್ ಕಣ್ಮರೆಯಾಗಿರಬಹುದು ಆದರೆ ಅವರ ದಾಖಲೆ, ಮೈಲಿಗಲ್ಲಿಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿರಲಿವೆ
2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಗ್ಲೆಂಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಣಿ 2ನೇ ಎಲಿಜಬೆತ್ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ರಾಣಿ ಎಲಿಜಬೆತ್ ಅವರಿಗೆ ಮಹಾತ್ಮ ಗಾಂಧಿ ನೀಡಿದ್ದ ಕರವಸ್ತ್ರವು ಕೈಯಿಂದ ನೇಯ್ದ ಹತ್ತಿಯ ಲೇಸ್ ಆಗಿದ್ದು ಅದರಲ್ಲಿ “ಜೈ ಹಿಂದ್” ಎಂದು ಬರೆಯಲಾಗಿತ್ತು. ಇದನ್ನು ಮಹಾತ್ಮಾ ಗಾಂಧಿಯವರು ನವೆಂಬರ್ 1947ರಲ್ಲಿ ಪ್ರಿನ್ಸ್ ಫಿಲಿಪ್ ಅವರೊಂದಿಗೆ ರಾಣಿ ಎಲಿಜಬೆತ್ ಅವರ ವಿವಾಹದ ಉಡುಗೊರೆಯಾಗಿ ಕಳುಹಿಸಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಿ 2ನೇ ಎಲಿಜಬೆತ್ ಈ ವಾರದ ಆರಂಭದಲ್ಲಿ ಸ್ಕಾಟ್ಲೆಂಡ್ನಲ್ಲಿ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. 2ನೇ ಎಲಿಜಬೆತ್ 1953ರಿಂದ ಬ್ರಿಟನ್ ರಾಣಿಯಾಗಿ ಸುದೀರ್ಘ 70 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಅತ್ಯಂತ ಸುದೀರ್ಘ ಅವಧಿಯವರೆಗೆ ದೇಶವನ್ನು ಆಳಿದವರು ಎಂಬ ವಿಶ್ವ ದಾಖಲೆಯನ್ನು ಕೂಡ ರಾಣಿ ಎಲಿಜಬೆತ್ ಪಡೆದಿದ್ದಾರೆ.
Published On - 8:50 am, Fri, 9 September 22