ಬ್ರಿಟನ್ ಮಹಾರಾಣಿ ಎಲಿಜಬೆತ್ ಕಣ್ಮರೆಯಾಗಿರಬಹುದು ಆದರೆ ಅವರ ದಾಖಲೆ, ಮೈಲಿಗಲ್ಲಿಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿರಲಿವೆ
ಗುರುವಾರದವರೆಗೆ 70 ವರ್ಷ ಮತ್ತು 4 ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕೂತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ ಹೆಸರಲ್ಲಿತ್ತು
ಲಂಡನ್: ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದ ರಾಣಿ ಎಲಿಜಬೆತ್ II (Queen Elizabeth ll) ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ (Queen) ದಾಖಲೆಯ 70 ವರ್ಷಗಳ ರಾಜ್ಯಭಾರ ನಡೆಸಿದ ಅವರು ಹಲವಾರು ಮೈಲಿಗಲ್ಲುಗಳನ್ನು (milestones) ಸ್ಥಾಪಿಸಿದ್ದಾರೆ. ಮಹಾರಾಣಿ ಗತಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ.
ದೀರ್ಘಾಯುಷ್ಯ:
ಗುರುವಾರದವರೆಗೆ 70 ವರ್ಷ ಮತ್ತು 4 ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕೂತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ ಹೆಸರಲ್ಲಿತ್ತು. 1901 ರವರೆಗೆ ಅವರು 63 ವರ್ಷ 7 ತಿಂಗಳು ಮತ್ತು ಎರಡು ದಿನಗಳವರೆಗೆ ಬ್ರಿಟಿಷ್ ಅರಸೊತ್ತಿಗೆಯ ಮಹಾರಾಣಿ ಆಗಿದ್ದರು.
96 ರ ಇಳಿವಯಸ್ಸಿನಲ್ಲಿದ್ದ ಎಲಿಜಬೆತ್ ಪ್ರಸ್ತುತವಾಗಿ ಪ್ರಪಂಚದಲ್ಲೇ ಅರಸೊತ್ತಿಗೆಯೊಂದರ ಅತ್ಯಂತ ಹಿರಿಯ ಮುಕುಟಧಾರಿ ಎನಿಸಿಕೊಂಡಿದ್ದರು. ಕೇವಲ ಇಬ್ಬರು ರಾಜರು ಮಾತ್ರ ಎಲಿಜಬೆತ್ ಗಿಂತ ಹೆಚ್ಚು ಅವಧಿಯವರೆಗೆ ಸಾಮ್ರಾಟರಾಗಿದ್ದರು. ಫ್ರಾನ್ಸ್ ನ ಲೂಯಿಸ್ XIV 1643 ರಿಂದ 1715 ರವರೆಗೆ 72 ವರ್ಷಗಳಿಗಿಂತ ಹೆಚ್ಚು ಕಾಲ ಮತ್ತು ಥೈಲ್ಯಾಂಡ್ ನ ಬೂಮಿಬೋಲ್ ಅದುಲ್ಯದೇಜ್ ಅಕ್ಟೋಬರ್ 2016 ರಲ್ಲಿ ಕೊನೆಯುಸಿರೆಳೆಯುವವರೆಗೆ 70 ವರ್ಷ 4 ತಿಂಗಳ ಕಾಲ ಅರಸನಾಗಿದ್ದರು.
ವಿಶ್ವ ಪರ್ಯಟನ
1952 ರಿಂದ ದೇಶಗಳನ್ನು ಸುತ್ತಲಾರಂಭಿಸಿದ್ದ ರಾಣಿ ಎಲಿಜಬೆತ್ 100ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು-ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ದಾಖಲೆಯಾಗಿದೆ. ಅವರ ಮತ್ತೊಂದು ದಾಖಲೆಯೆಂದರೆ ಕಾಮನ್ ವೆಲ್ತ್ ರಾಷ್ಟ್ರಗಳಿಗೆ 150 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದು.
ಕೆನಡಾಗೆ ಅವರು ಉಳಿದ ದೇಶಗಳಿಗಿಂತ ಹೆಚ್ಚು ಬಾರಿ (22 ಸಲ) ಭೇಟಿ ನೀಡಿದ್ದಾರೆ. ಯುರೋಪಿಯನ್ ರಾಷ್ಟ್ರಗಳ ಪೈಕಿ ಫ್ರಾನ್ಸ್ ಗೆ 13 ಬಾರಿ ಭೇಟಿ ನೀಡಿರುವ ರಾಣಿ ಫ್ರೆಂಚ್ ಭಾಷೆಯನ್ನು ಮಾತಾಡಬಲ್ಲವರಾಗಿದ್ದರು. ನವೆಂಬರ್ 2015ರಲ್ಲಿ ಅಂದರೆ ತಮ್ಮ 89ನೇ ವಯಸ್ಸಿನಲ್ಲಿ ಅವರು ವಿದೇಶಗಳಿಗೆ ಹೋಗುವುದನ್ನು ಅವರು ನಿಲ್ಲಿಸಿದರು. ನವೆಂಬರ್ 1953 ರಿಂದ 1954 ಮೇ ವರೆಗೆ 168 ದಿನಗಳ ಕಾಲ 13 ದೇಶಗಳನ್ನು ಸುತ್ತಿದ್ದು ಅವರ ಸುದೀರ್ಘ ಪ್ರವಾಸವಾಗಿದೆ.
ಕಾರ್ಯಶೀಲತೆ
ತಮ್ಮ 21 ನೇ ವಯಸ್ಸಿನಲ್ಲಿ ರಾಜಕುಮಾರಿಯಾದ ಎಲಿಜಬೆತ್ ತಮ್ಮ ಬದುಕನ್ನು ರಾಷ್ಟ್ರದ ಸೇವೆಗೆ ಮುಡುಪಾಗಿಟ್ಟರು.
ರಾಣಿಯಾಗಿ, ಅವರು ಸುಮಾರು 21,000 ಸಭೆಗಳನ್ನು ನಡೆಸಿದ್ದಾರೆ, 4,000 ಶಾಸನಗಳಿಗೆ ರಾಜಮನೆತನದ ಒಪ್ಪಿಗೆಯನ್ನು ನೀಡಿದ್ದಾರೆ ಮತ್ತು 112 ವಿದೇಶಿ ರಾಷ್ಟ್ರಗಳ ಮುಖ್ಯಸ್ಥರಿಗೆ ಅತಿಥೇಯರಾಗಿದ್ದರು.
ಅವರಿಂದ ಆತಿಥ್ಯ ಸ್ವೀಕರಿಸಿದವರಲ್ಲಿ ಇಥಿಯೋಪಿಯಾದ ಚಕ್ರವರ್ತಿ ಹೈಲೆ ಸೆಲಾಸಿ (1954), ಜಪಾನ್‌ನ ಚಕ್ರವರ್ತಿ ಹಿರೋಹಿಟೊ (1971), ಪೋಲೆಂಡ್‌ನ ಅಧ್ಯಕ್ಷ ಲೆಚ್ ವಲೇಸಾ (1991) ಮತ್ತು ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ (2011) ಸೇರಿದ್ದಾರೆ.
ಬಕಿಂಗ್ಹ್ಯಾಮ್ ಅರಮನೆಯಲ್ಲಿ 180 ಕ್ಕೂ ಹೆಚ್ಚು ಗಾರ್ಡನ್ ಪಾರ್ಟಿಗಳನ್ನು ಆಯೋಜಿಸಲಾಗಿದೆ, ಮತ್ತು 15 ಲಕ್ಷಗಳಿಗಿಂತ ಹೆಚ್ಚು ಜನ ಇವುಗಳಲ್ಲಿ ಭಾಗವಹಿಸಿದ್ದಾರೆ.
ರಾಜಕೀಯ ಮತ್ತು ಧರ್ಮ
ರಾಣಿ ಎಲಿಜಬೆತ್ ಅಡಿಯಲ್ಲಿ ಒಟ್ಟು 14 ಬ್ರಿಟಿಷ್ ಪ್ರಧಾನ ಮಂತ್ರಿಗಳು ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಮೊದಲನೆಯವರು ವಿನ್ಸ್ಟನ್ ಚರ್ಚಿಲ್ (1952-1955) ಮತ್ತು ಇತ್ತೀಚಿನವರೆಂದರೆ ಲಿಜ್ ಟ್ರಸ್ (2022 ರಿಂದ)
ಅವರು ನಿಯಮಿತವಾಗಿ ಪ್ರಧಾನ ಮಂತ್ರಿಯೊಂದಿಗೆ ಖಾಸಗಿ ಸಭೆಗಳನ್ನು ನಡೆಸುತ್ತಿದ್ದರು. ಅವುಗಳನ್ನು ಸಾಮಾನ್ಯವಾಗಿ ವಾರಕ್ಕೊಮ್ಮೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಯೋಜಿಸಲಾಗುತ್ತದೆ.
ಲಿಂಡನ್ ಬಿ ಜಾನ್ಸನ್ ಅವರನ್ನು ಹೊರತುಪಡಿಸಿ ಎಲಿಜಬೆತ್ II ಕಳೆದ 14 ಯುಎಸ್ ಅಧ್ಯಕ್ಷರಲ್ಲಿ 13 ಜನರನ್ನು ಎಲಿಜಬೆತ್ ಭೇಟಿಯಾಗಿದ್ದರು. ಶ್ವೇತಭವನದಿಂದ ಅವರನ್ನು ಭೇಟಿಯಾದ ಕೊನೆಯವರೆಂದರೆ 2021 ರಲ್ಲಿ ಜೋ ಬೈಡೆನ್.
ರಾಣಿಯವರ ಚರ್ಚ್ ಆಫ್ ಇಂಗ್ಲೆಂಡ್‌ನ ಸರ್ವೋಚ್ಚ ಗವರ್ನರ್ ಆಗಿದ್ದರು, ಈ ಸ್ಥಾನವನ್ನು 16 ನೇ ಶತಮಾನದಲ್ಲಿ ಹೆನ್ರಿ VIII ರ ಅವಧಿಯಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು.
ಅವರು ಅಧಿಕೃತ ಭೇಟಿಗಳ ಅಂಗವಾಗಿ ಅವರು ನಾಲ್ಕು ಪೋಪ್‌ಗಳನ್ನು ಭೇಟಿಯಾಗಿದ್ದರು-ಜಾನ್ XXIII (1961), ಜಾನ್ ಪಾಲ್ II (1980, 1982 ಮತ್ತು 2000), ಬೆನೆಡಿಕ್ಟ್ XVI (2010) ಮತ್ತು ಫ್ರಾನ್ಸಿಸ್ I (2014).
ಶುಭಾಷಯ ಕೋರುವ ಕಾರ್ಡ್‌ಗಳು
ರಾಣಿ ಎಲಿಜಬೆತ್ ಶತಾಯುಷಿಗಳಿಗೆ ಸುಮಾರು 300,000 ಅಭಿನಂದನಾ ಕಾರ್ಡ್‌ಗಳನ್ನು ಮತ್ತು 60 ವರ್ಷಗಳ ದಾಂಪತ್ಯ ಪೂರೈಸಿದ ದಂಪತಿಗಳಿಗೆ 900,000 ಕ್ಕೂ ಹೆಚ್ಚು ಕಾರ್ಡ್‌ಗಳನ್ನು ಕಳುಹಿಸಿದ್ದಾರೆ.
ಎಲಿಜಬೆತ್ ಅವರು 73 ವರ್ಷಗಳ ಕಾಲ ದಾಂಪತ್ಯ ನಡೆಸಿದರು- ಇದು ಬ್ರಿಟಿಷ್ ಅರಸೊತ್ತಿಗೆಯ ಮತ್ತೊಂದು ದಾಖಲೆ. ಅವರ ಪತಿ ಪ್ರಿನ್ಸ್ ಫಿಲಿಪ್ ಕಳೆದ ವರ್ಷ ಏಪ್ರಿಲ್‌ನಲ್ಲಿ ತಮ್ಮ 99 ನೇ ವಯಸ್ಸಿನಲ್ಲಿ ನಿಧನರಾದರು.
ಭಾವಚಿತ್ರಗಳು
ಏಳನೇ ವಯಸ್ಸಿನಿಂದ ರಾಣಿ ಎಲಿಜಬೆತ್ 200 ಕ್ಕೂ ಹೆಚ್ಚು ಭಾವಚಿತ್ರಗಳಿಗೆ ಪೋಸ್ ನೀಡಿದ್ದಾರೆ. ಹೆಚ್ಚಿನವು ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರಿಸಲ್ಪಟ್ಟವು. ಆದರೆ, 2001 ರಲ್ಲಿ ಲೂಸಿಯನ್ ಫ್ರಾಯ್ಡ್ ರಚಿಸಿದ ಚಿತ್ರ ವಿವಾದಕ್ಕೀಡಾಗಿತ್ತು. ಒಬ್ಬ ವಿಮರ್ಶಕ ಚಿತ್ರದಲ್ಲಿ ಮಹಾರಾಣಿ ಅವಳ ಕಾರ್ಗಿ ನಾಯಿಗಳಲ್ಲಿ ಒಂದರಂತೆ ಕಾಣುತ್ತಾರೆ ಅಂತ ಹೇಳಿದ್ದರು.
ಪ್ರವರ್ತಕರು
1996 ರಲ್ಲಿ, ರಾಣಿ ಚೀನಾದ ಮುಖ್ಯ ಭೂಭಾಗಕ್ಕೆ ಭೇಟಿ ನೀಡಿದ ಬ್ರಿಟಿಷ್ ಸಾಮ್ರಾಜ್ಯದ ಮೊದಲ ಪ್ರತಿನಿಧಿಯೆನಿಸಿದರು. ವಾಷಿಂಗ್ಟನ್‌ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಉದ್ದೇಶಿಸಿ ಮಾತನಾಡಿದ ಮೊದಲ ಮಹಿಳೆಯೂ ಎಂಬ ಗೌರವವೂ ಅವರಿಗೆ ದಕ್ಕಿದೆ.
ಮಾರ್ಚ್ 26, 1976 ರಂದು ರಕ್ಷಣಾ ಸಚಿವಾಲಯದ ಸಂಶೋಧನಾ ಸೌಲಭ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಮ್ಮ ಮೊದಲ ಇಮೇಲ್ ಅನ್ನು ಕಳಿಹಿಸಿದ್ದರು.
1997 ರಲ್ಲಿ, ಅವರು ಬಕಿಂಗ್ಹ್ಯಾಮ್ ಅರಮನೆ ವೆಬ್‌ಸೈಟ್ ಪ್ರಾರಂಭಿಸಿದರು ಮತ್ತು 2014 ರಲ್ಲಿ ತಮ್ಮ ಮೊದಲ ಟ್ವೀಟ್ ಕಳುಹಿಸಿದರು. ಮೂರು ವರ್ಷಗಳ ಹಿಂದೆ, ಅವರು ಇನ್ಸ್ಟಾಗ್ರಾಮ್ ಗೆ ಪಾದಾರ್ಪಣೆ ಮಾಡಿದ್ದರು.
ಜೇಮ್ಸ್ ಬಾಂಡ್ ನೊಂದಿಗೆ ಹೆಲಿಕಾಪ್ಟರ್ ಒಂದರಿಂದ ಹೊರಜಿಗಿದ ಯಾವುದೇ ಅರಸೊತ್ತಿಗೆಯ ಏಕೈಕ ಪ್ರತಿನಿಧಿಯಾಗಿರುವ ರಾಣಿ ಎಲಿಜಬೆತ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಪ್ಯಾರಚೂಟ್ ಮೂಲಕ ಸ್ಟೇಡಿಯಂನಲ್ಲಿ ಇಳಿದಿದ್ದರು.
2012 ರ ಲಂಡನ್ ಒಲಂಪಿಕ್ಸ್ ನಲ್ಲಿ ತಮ್ಮ ನೆಚ್ಚಿನ ಕಾರ್ಗಿಸ್ ನಾಯಿ 007 ನಟ ಡೇನಿಯಲ್ ಕ್ರೇಗ್ ಜೊತೆ ಕಾಣಿಸಿಕೊಂಡಿದ್ದರು.