ನಾಳೆ ಮಹಾರಾಷ್ಟ್ರ, ಗೋವಾಕ್ಕೆ ಪ್ರಧಾನಿ ಮೋದಿ; ಸಮೃದ್ಧಿ ಮಹಾಮಾರ್ಗ, ಮೋಪಾ ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಹ್ನ 3:15ಕ್ಕೆ ಪ್ರಧಾನಿ ಮೋದಿ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್​ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ.

ನಾಳೆ ಮಹಾರಾಷ್ಟ್ರ, ಗೋವಾಕ್ಕೆ ಪ್ರಧಾನಿ ಮೋದಿ; ಸಮೃದ್ಧಿ ಮಹಾಮಾರ್ಗ, ಮೋಪಾ ವಿಮಾನ ನಿಲ್ದಾಣ ಉದ್ಘಾಟನೆ
ಸಮೃದ್ಧಿ ಮಹಾಮಾರ್ಗದ ನೋಟImage Credit source: PMO
Follow us
TV9 Web
| Updated By: Ganapathi Sharma

Updated on:Dec 10, 2022 | 3:03 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಮಹಾರಾಷ್ಟ್ರ (Maharashtra) ಮತ್ತು ಗೋವಾಕ್ಕೆ (Goa) ಭೇಟಿ ನೀಡಲಿದ್ದಾರೆ. ಇದೇ ವೇಳೆ ನಾಗ್ಪುರ ಮತ್ತು ಶಿರಡಿಯನ್ನು ಸಂಪರ್ಕಿಸುವ ಸಮೃದ್ಧಿ ಮಹಾಮಾರ್ಗದ (Samruddhi Mahamarg) ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಗೋವಾದಲ್ಲಿ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Mopa International Airport) ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಸಮೃದ್ಧಿ ಮಹಾಮಾರ್ಗದ ಮೊದಲನೇ ಹಂತವು ನಾಗ್ಪುರ ಮತ್ತು ಶಿರಡಿಯನ್ನು ಸಂಪರ್ಕಿಸಲಿದ್ದು, 520 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇದು ದೇಶದಾದ್ಯಂತ ಸಂಪರ್ಕ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುವ ಪ್ರಧಾನಿಯವರ ದೃಷ್ಟಿಯನ್ನು ಸಾಕಾರಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಯೋಜನೆಯು ಒಟ್ಟು 701 ಕಿ.ಮೀ. ಎಕ್ಸ್​ಪ್ರೆಸ್​ ವೇಯನ್ನು ಹೊಂದಿರಲಿದ್ದು, ಸುಮಾರು 55,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಭಾರತದ ಅತಿ ಉದ್ದದ ಎಕ್ಸ್​ಪ್ರೆಸ್​ ವೇಗಳಲ್ಲಿ ಒಂದಾಗಿದೆ. ಇದು ಮಹಾರಾಷ್ಟ್ರದ 10 ಜಿಲ್ಲೆಗಳು ಮತ್ತು ಅಮರಾವತಿ, ಔರಂಗಾಬಾದ್ ಮತ್ತು ನಾಸಿಕ್​ನಂತಹ ಪ್ರಮುಖ ನಗರ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಎಕ್ಸ್​ಪ್ರೆಸ್​ ವೇ ಪಕ್ಕದ 14 ಜಿಲ್ಲೆಗಳ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ವಿದರ್ಭ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರ ಪ್ರದೇಶಗಳು ಸೇರಿದಂತೆ ರಾಜ್ಯದ ಸುಮಾರು 24 ಜಿಲ್ಲೆಗಳ ಅಭಿವೃದ್ಧಿಗೆ ಇದರಿಂದ ನೆರವಾಗಲಿದೆ ಎಂದು ಪಿಎಂಒ ತಿಳಿಸಿದೆ.

ಇದನ್ನೂ ಓದಿ: ಕಳೆದ 5 ವರ್ಷದಲ್ಲಿ ಮೋದಿ ವಿದೇಶಿ ಪ್ರವಾಸಕ್ಕಾದ ಖರ್ಚೆಷ್ಟು? ರಾಜ್ಯಸಭೆಗೆ ಕೊಟ್ಟ 36 ವಿದೇಶಿ ಪ್ರವಾಸಗಳ ಖರ್ಚು-ವೆಚ್ಚದ ಲೆಕ್ಕ ಇಲ್ಲಿದೆ

ಇಷ್ಟೇ ಅಲ್ಲದೆ, ನಾಗ್ಪುರದಲ್ಲಿ ಬೆಳಗ್ಗೆ 11:30ರ ಸುಮಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿಯವರು 1500 ಕೋಟಿ ರೂ.ಗೂ ಹೆಚ್ಚು ಮೊತ್ತದ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಾಗ್ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (ಎನ್‌ಐಒ) ಮತ್ತು ನಾಗ್ ನದಿ ಮಾಲಿನ್ಯ ನಿವಾರಣೆ ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಮೋಪಾ ವಿಮಾನ ನಿಲ್ದಾಣ ಲೋಕಾರ್ಪಣೆ

ಮಹಾರಾಷ್ಟ್ರದಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಗೋವಾಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 3:15ಕ್ಕೆ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್​ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ.

ಸಂಜೆ 5:15 ರ ಸುಮಾರಿಗೆ ಗೋವಾದ ಮೋಪಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. 2016ರ ನವೆಂಬರ್​​ನಲ್ಲಿ ಪ್ರಧಾನಿ ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿದ್ದರು.

ಸುಮಾರು 2,870 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಮಾನ ನಿಲ್ದಾಣವು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್​ವೇಯಲ್ಲಿ ಎಲ್ಇಡಿ ದೀಪಗಳು, ಮಳೆ ನೀರು ಕೊಯ್ಲು, ಮರುಬಳಕೆ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಒಳಚರಂಡಿ ಸಂಸ್ಕರಣಾ ಘಟಕವನ್ನು ಹೊಂದಿದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಪಿಎಂಒ ತಿಳಿಸಿದೆ.

ವಿಮಾನ ನಿಲ್ದಾಣವು 3-D ಏಕಶಿಲೆಯ ಪ್ರೀಕಾಸ್ಟ್ ಕಟ್ಟಡಗಳು, ಸ್ಟೆಬಿಲ್ರೋಡ್, ರೋಬೋಮ್ಯಾಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು, 5ಜಿ ಸಕ್ರಿಯವಾದ ಐಟಿ ಮೂಲಸೌಕರ್ಯಗಳಂತಹ ಕೆಲವು ಅತ್ಯುತ್ತಮ ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವಿಮಾನ ನಿಲ್ದಾಣದ ಕೆಲವು ವೈಶಿಷ್ಟ್ಯಗಳಲ್ಲಿ ವಿಶ್ವದ ಅತಿದೊಡ್ಡ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ರನ್​ವೇ, 14 ಪಾರ್ಕಿಂಗ್ ಬೇಗಳು ಜೊತೆಗೆ ವಿಮಾನಗಳಿಗೆ ರಾತ್ರಿ ಪಾರ್ಕಿಂಗ್ ಸೌಲಭ್ಯ, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯಗಳು, ಅತ್ಯಾಧುನಿಕ ಮತ್ತು ಸ್ವತಂತ್ರ ಏರ್ ನ್ಯಾವಿಗೇಷನ್ ಮೂಲಸೌಕರ್ಯಗಳು ಸೇರಿವೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:02 pm, Sat, 10 December 22