ಸ್ವಿಜರ್ಲೆಂಡ್ಗೆ ಪರಾರಿಯಾಗುವ ಮೆಹುಲ್ ಚೋಕ್ಸಿಯ ಪ್ಲಾನ್ ಭಾರತದಿಂದ ವಿಫಲಗೊಂಡಿದ್ದು ಹೇಗೆ?
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ 13,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತದ ತನಿಖಾ ಸಂಸ್ಥೆಗಳು ಹಸ್ತಾಂತರ ಕೋರಿದ ನಂತರ ಬೆಲ್ಜಿಯಂ ಪೊಲೀಸರು ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದಾರೆ. ಪಿಎನ್‌ಬಿ ಹಗರಣ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬರುವ ಮೊದಲೇ 2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ ಮೆಹುಲ್ ಚೋಕ್ಸಿಯನ್ನು ಭಾರತದ ಕೋರಿಕೆಯ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ಬಂಧಿಸಿದ್ದಾರೆ. ಸ್ವಿಜರ್ಲೆಂಡ್ಗೆ ಪಲಾಯನ ಮಾಡುವ ಪ್ಲಾನ್ ಮಾಡಿದ್ದ ಚೋಕ್ಸಿಯ ಲೆಕ್ಕಾಚಾರ ಭಾರತದಿಂದಾಗಿ ಉಲ್ಟಾ ಹೊಡೆದಿದೆ.

ನವದೆಹಲಿ, ಏಪ್ರಿಲ್ 14: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ. ಮೆಹುಲ್ ಚೋಕ್ಸಿ ವೈದ್ಯಕೀಯ ಚಿಕಿತ್ಸೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಪಲಾಯನ ಮಾಡಲು ಯೋಜಿಸುತ್ತಿದ್ದಾಗಲೇ ಆತನ ಬಂಧನ ನಡೆದಿದೆ. ಚೋಸ್ಕಿ ಅವರ ಸೋದರಳಿಯ ನೀರವ್ ಮೋದಿ, ಅವರ ಪತ್ನಿ ಅಮಿ ಮೋದಿ ಮತ್ತು ಅವರ ಸಹೋದರ ನೀಶಾಲ್ ಮೋದಿ ಜೊತೆ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 12,636 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. 2018ರಲ್ಲಿ ಚೋಕ್ಸಿ ಭಾರತದಿಂದ ಪಲಾಯನ ಮಾಡಿ ಆಂಟಿಗುವಾದಲ್ಲಿ ಪೌರತ್ವ ಪಡೆದರು.
ಪೌರತ್ವ-ಹೂಡಿಕೆ ಕಾರ್ಯಕ್ರಮದ ಮೂಲಕ ಆಂಟಿಗುವಾದಲ್ಲಿ ನೆಲೆಸಿದ್ದ ಚೋಕ್ಸಿ, ಕಳೆದ ವರ್ಷ ನವೆಂಬರ್ 15ರಂದು ಬೆಲ್ಜಿಯಂನಿಂದ ಎಫ್ ರೆಸಿಡೆನ್ಸಿ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾದರು. ಅವರು ಬೆಲ್ಜಿಯಂ ಪ್ರಜೆಯಾಗಿರುವ ತಮ್ಮ ಪತ್ನಿ ಪ್ರೀತಿ ಚೋಕ್ಸಿಗೆ ಸೇರಿದ ದಾಖಲೆಗಳನ್ನು ಬಳಸಿದ್ದರು. ಜಾರಿ ನಿರ್ದೇಶನಾಲಯ (ED) ಮೂಲಗಳ ಪ್ರಕಾರ, ಚೋಕ್ಸಿ ವೈದ್ಯಕೀಯ ಚಿಕಿತ್ಸೆಗಾಗಿ ಮಾನವೀಯ ಕಾರಣಗಳನ್ನು ಉಲ್ಲೇಖಿಸುವ ಮೂಲಕ ಬೆಲ್ಜಿಯಂ ಸರ್ಕಾರವನ್ನು ದಾರಿ ತಪ್ಪಿಸಿದ್ದರು. ಅದಕ್ಕಾಗಿ ನಕಲಿ ಮತ್ತು ಸುಳ್ಳು ದಾಖಲೆಗಳನ್ನು ಬಳಸಿದರು. ಚೋಕ್ಸಿ ತಮ್ಮ ಭಾರತೀಯ ಅಥವಾ ಆಂಟಿಗುವಾ ಪೌರತ್ವವನ್ನು ತ್ಯಜಿಸಿಲ್ಲ. ಆದರೆ ಬೆಲ್ಜಿಯಂ ಅಧಿಕಾರಿಗಳಿಂದ F ನಿವಾಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಅವರು ಯಶಸ್ವಿಯಾಗಿ ಪಡೆದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Mehul Choksi: ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ
ಚೋಕ್ಸಿ ತನ್ನ ಸ್ಥಿತಿಯನ್ನು F+ ನಿವಾಸ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದಾರೆಂದು ಭಾರತೀಯ ಅಧಿಕಾರಿಗಳಿಗೆ ತಿಳಿಯಿತು. ಇದು ಬೆಲ್ಜಿಯಂನಿಂದ ಭಾರತಕ್ಕೆ ಚೋಕ್ಸಿಯ ಹಸ್ತಾಂತರವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂಬ ಕಾರಣದಿಂದ ಅವರು ಆತನನ್ನು ಹಸ್ತಾಂತರಿಸಲು ವಿನಂತಿಸಲು ತ್ವರಿತವಾಗಿ ಮುಂದಾದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬೆಲ್ಜಿಯಂ ಅಧಿಕಾರಿಗಳು ಚೋಕ್ಸಿ ಅವರ F ನಿವಾಸ ಕಾರ್ಡ್ ಅನ್ನು F+ ಸ್ಥಿತಿಗೆ ಪರಿವರ್ತಿಸುವುದನ್ನು ನಿಲ್ಲಿಸಿದರು.
ಚೋಕ್ಸಿ ಸ್ವಿಜರ್ಲೆಂಡ್‌ನಲ್ಲಿರುವ ವಿಶೇಷ ಕ್ಯಾನ್ಸರ್ ಸೌಲಭ್ಯವಾದ ಹಿರ್ಸ್‌ಲ್ಯಾಂಡೆನ್ ಕ್ಲಿನಿಕ್ ಆರಾವ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಬಹುತೇಕ ಪ್ರವೇಶವನ್ನು ಪಡೆದುಕೊಂಡಿದ್ದರು. ಬಹುತೇಕ ಅಗತ್ಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಅವರು ಬೆಲ್ಜಿಯಂನಿಂದ ಹೊರಡುವ ಮೊದಲು ಅವರನ್ನು ಆಂಟ್ವೆರ್ಪ್‌ನಲ್ಲಿರುವ ಅಧಿಕಾರಿಗಳು ತಾತ್ಕಾಲಿಕ ಬಂಧನಕ್ಕೆ ಒಳಪಡಿಸಿದರು. ಸ್ವಿಜರ್ಲೆಂಡ್ನಲ್ಲಿ ಅವರು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದರು. ಮತ್ತೆ ಅವರು ತಮ್ಮ ಆರೋಗ್ಯ ಸ್ಥಿತಿ ಮತ್ತು ಮಾನವೀಯ ಕಾರಣಗಳನ್ನು ಉಲ್ಲೇಖಿಸಿದ್ದರು.
ಇದನ್ನೂ ಓದಿ: PNB Scam: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ
2018 ಮತ್ತು 2021ರಲ್ಲಿ ಮುಂಬೈ ನ್ಯಾಯಾಲಯ ಹೊರಡಿಸಿದ ಎರಡು ಜಾಮೀನು ರಹಿತ ವಾರಂಟ್‌ಗಳ ಆಧಾರದ ಮೇಲೆ ಬೆಲ್ಜಿಯಂ ಅಧಿಕಾರಿಗಳು ಚೋಕ್ಸಿ ಅವರನ್ನು ಬಂಧಿಸಿದ್ದಾರೆ. ಚೋಕ್ಸಿ ಪ್ರಸ್ತುತ ಬೆಲ್ಜಿಯಂ ಜೈಲಿನಲ್ಲಿದ್ದಾರೆ ಮತ್ತು ಅವರ ಜಾಮೀನು ಅರ್ಜಿ ವಿಚಾರಣೆಯು ಕನಿಷ್ಠ 1 ವಾರದ ನಂತರ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ