
ನವದೆಹಲಿ, ನವೆಂಬರ್ 07: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಂಸತ್ನಲ್ಲಿನ ಎರಡು ಹೇಳಿಕೆಗಳನ್ನು ಹೋಲಿಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಪ್ರಶ್ನೆ ಎತ್ತಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯ ಕತ್ತರಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಮಿತ್ ಶಾ ಅವರ ಎರಡು ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದರು. ಕಳೆದ ವರ್ಷದ ಡಿಸೆಂಬರ್ 5ರಂದು ಸಂಸತ್ನಲ್ಲಿ ಮಾತನಾಡಿದ್ದ ಅಮಿತ್ ಶಾ, SIR ವಿಚಾರವನ್ನು ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸುತ್ತಿರುವುದರಿಂದ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಯಾರು ಉತ್ತರಿಸುತ್ತಾರೆ ಎಂಬುದು ಅವರ ವಾದವಾಗಿತ್ತು.
ಆದರೆ, ನವೆಂಬರ್ 6ರಂದು ಮಾತನಾಡಿದ ಅಮಿತ್ ಶಾ, SIR ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಚರ್ಚೆಯ ಸವಾಲು ಹಾಕುತ್ತಿರುವುದಾದರೆ, ಅದಕ್ಕಾಗಿ ಸಂಸತ್ನ ವಿಶೇಷ ಅಧಿವೇಶನ ಕರೆಯಲೂ ಸಿದ್ಧರಿದ್ದೇವೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ಎರಡೂ ಹೇಳಿಕೆಗಳನ್ನು ಹೋಲಿಕೆ ಮಾಡಿದ್ದ ರಾಹುಲ್ ಗಾಂಧಿ, ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ SIR ವಿಚಾರದಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗ ಪ್ರಕ್ರಿಯೆ ಸರಿಯಾಗಿದೆ ಎನ್ನುವ ಕಾಂಗ್ರೆಸ್, ಸೋತಾಗ ಅದೇ ಪ್ರಕ್ರಿಯೆಯನ್ನು ಪ್ರಶ್ನಿಸುತ್ತದೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ್ದಾರೆ.
2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ SIR ಇಲ್ಲದಿದ್ದರೂ ಕಾಂಗ್ರೆಸ್ ಸೋತಿದೆ. ಆ ಸೋಲಿನ ಹೊಣೆಯನ್ನು ರಾಹುಲ್ ಗಾಂಧಿ ಹೊರುತ್ತಾರೆಯೇ ಅಥವಾ ಬೇರೆಯವರ ಮೇಲೆ ಆರೋಪ ಮಾಡುತ್ತಾರೆಯೇ ಎಂದು ಜೋಶಿ ಪ್ರಶ್ನಿಸಿದ್ದಾರೆ.
ರಾಜಕೀಯ ನಾಟಕ ಮಾಡುವುದನ್ನು ಬಿಟ್ಟು ಸಂಸತ್ಗೆ ಬಂದು ದಾಖಲೆ ಹಾಗೂ ವಾಸ್ತವಾಂಶಗಳೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ. SIR ವಿಚಾರ ಇದೀಗ ಸಂಸತ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಪ್ರಮುಖ ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ