ಪುದುಚೇರಿಯಲ್ಲಿ ಮತದಾನಕ್ಕೆ ಕ್ಷಣಗಣನೆ: ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಬಿಜೆಪಿಗೆ ಗೆಲುವಿನ ಆತ್ಮವಿಶ್ವಾಸ

Puducherry Assembly Elections: ಪುದುಚೇರಿ ಚುನಾವಣೆಯು ಗಾಯಗೊಂಡ ಹುಲಿಯಂತಾಗಿರುವ ಕಾಂಗ್ರೆಸ್​ ಮತ್ತು ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾದ ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ವಿರುದ್ಧದ ಹೋರಾಟ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪುದುಚೇರಿಯಲ್ಲಿ ಮತದಾನಕ್ಕೆ ಕ್ಷಣಗಣನೆ: ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಬಿಜೆಪಿಗೆ ಗೆಲುವಿನ ಆತ್ಮವಿಶ್ವಾಸ
ಕಾಂಗ್ರೆಸ್​ ನಾಯಕ ನಾರಾಯಣಸ್ವಾಮಿ ಮತ್ತು ಎನ್​ಡಿಎ ಮೈತ್ರಿಕೂಟದ ನಾಯಕ ರಂಗಸ್ವಾಮಿ
Follow us
|

Updated on:Apr 05, 2021 | 7:09 PM

ಪುದುಚೇರಿ: ದೇಶದ ಚಿಕ್ಕ ರಾಜ್ಯಗಳ ಪೈಕಿ ಒಂದಾಗಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಾಳೆ (ಏಪ್ರಿಲ್ 6) ಚುನಾವಣೆ ನಡೆಯಲಿದೆ. ಕೆಲ ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿಕೊಂಡಿದ್ದರಿಂದ ಪುದುಚೇರಿ ಸರ್ಕಾರ ಪತನವಾಗಿತ್ತು. ಪುದುಚೇರಿ ಚುನಾವಣೆಯು ಗಾಯಗೊಂಡ ಹುಲಿಯಂತಾಗಿರುವ ಕಾಂಗ್ರೆಸ್​ ಮತ್ತು ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ಪರವಾಗಿರುವ ಎನ್.ರಂಗಸ್ವಾಮಿ ವಿರುದ್ಧದ ಹೋರಾಟ ಎಂದೇ ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಕಾಂಗ್ರೆಸ್ ಶಾಸಕರಿಗೆ ಆಮಿಷ-ಬೆದರಿಕೆಯೊಡ್ಡಿ ಬಿಜೆಪಿ ತನ್ನ ಪಾಳಯಕ್ಕೆ ಸೇರಿಸಿಕೊಂಡಿತ್ತು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಸ್ತುತ ಪುದುಚೇರಿಯಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿಯೂ ಇದೇ ಆರೋಪಗಳು ಪ್ರತಿಧ್ವನಿಸುತ್ತಿವೆ.

ದಕ್ಷಿಣ ಭಾರತದಲ್ಲಿದ್ದ ಏಕೈಕ ಕಾಂಗ್ರೆಸ್ ಸರ್ಕಾರವು 15 ದಿನಗಳ ಅವಧಿಯಲ್ಲಿ 7 ಮಂದಿ ನಾಟಕೀಯವಾಗಿ ನೀಡಿದ ರಾಜೀನಾಮೆಯಿಂದಾಗಿ ಉರುಳಿತ್ತು. ಈ ಏಳೂ ಮಂದಿಯು ಬಿಜೆಪಿಗೆ ಸೇರಿಕೊಂಡಿದ್ದರು. ಜನರಲ್ಲಿ ಕಾಂಗ್ರೆಸ್​ ಪರವಾಗಿ ಅನುಕಂಪವಿದೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಈ ಅನುಕಂಪ ಸಹಾಯ ಮಾಡಬಲ್ಲದು ಎಂದು ಕಾಂಗ್ರೆಸ್ ನಾಯಕರು ನಂಬಿಕೊಂಡಿದ್ದಾರೆ.

30 ಸದಸ್ಯಬಲದ ಪುದುಚೇರಿ ವಿಧಾನಸಭೆಯ ಮತದಾರರ ಸಂಖ್ಯೆ 10.03 ಲಕ್ಷ. ಕಾಂಗ್ರೆಸ್ ಪಕ್ಷವು ಈ ಬಾರಿ 7 ಸ್ಥಾನಗಳಲ್ಲಿ ಸ್ಪರ್ಧಿಸಿದೆ. 2016ರ ಚುನಾವಣೆಗೆ ಹೋಲಿಸಿದರೆ ಇದು ತುಸು ಕಡಿಮೆ. ಉಳಿದ ಕ್ಷೇತ್ರಗಳನ್ನು ಮೈತ್ರಿಪಕ್ಷಗಳಾದ ಡಿಎಂಕೆ (13), ವಿಸಿಕೆ (1) ಮತ್ತು ಸಿಪಿಐ (1) ಜೊತೆಗೆ ಹಂಚಿಕೊಂಡಿದೆ. ಕಳೆದ ಮಾರ್ಚ್​ ತಿಂಗಳಲ್ಲಿ ವಿಶ್ವಾಸಮತ ಗಳಿಸಲು ವಿಫಲರಾಗಿ ರಾಜೀನಾಮೆ ನೀಡಿದ ಹಿಂದಿನ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಿಲ್ಲ.

ಮುಖ್ಯಮಂತ್ರಿಗೇ ಟಿಕೆಟ್ ನೀಡದ ಕಾಂಗ್ರೆಸ್​ನ ನಡೆಯನ್ನು ಬಿಜೆಪಿ ಮಿತ್ರಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಚುನಾವಣೆಗೆ ಮೊದಲೇ ಕಾಂಗ್ರೆಸ್​ಗೆ ಸೋಲುವ ಭೀತಿ ಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ನಿಂದ ಹೊರ ನಡೆದವರು ಸಹ ನಾರಾಯಣಸ್ವಾಮಿಯೇ ಇದಕ್ಕೆ ಕಾರಣ ಎಂದು ದೂರಿದ್ದರು. ಕಾಂಗ್ರೆಸ್​ಗೆ ಎದುರಾಳಿಯಾಗಿರುವ ಆಲ್ ಇಂಡಿಯಾ ಎನ್​ಆರ್ ಕಾಂಗ್ರೆಸ್ (ಎಐಎನ್​ಆರ್​ಸಿ) ಪಕ್ಷವನ್ನು ರಂಗಸ್ವಾಮಿ ಮುನ್ನಡೆಸುತ್ತಿದ್ದಾರೆ. ಈ ಬಾರಿ 16 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಪುದುಚೇರಿಯಲ್ಲಿ ಈವರೆಗೆ ಒಂದೂ ಸ್ಥಾನ ಗೆಲ್ಲದ ಬಿಜೆಪಿ 9 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇದೇ ಮೈತ್ರಿಕೂಟದ ಭಾಗವಾಗಿರುವ ಎಐಎಡಿಂಕೆ 5 ಸ್ಥಾನಗಳಲ್ಲಿ ಹೋರಾಡುತ್ತಿದೆ. ಇಬ್ಬರು ನಾಮನಿರ್ದೇಶಿತ ಸದಸ್ಯರ ಮೂಲಕ ವಿಧಾನಸಭೆಯಲ್ಲಿ ಅಸ್ತಿತ್ವ ಕಂಡುಕೊಂಡಿದ್ದ ಬಿಜೆಪಿಗೆ ಪುದುಚೇರಿಯನ್ನು ತನ್ನದಾಗಿಸಿಕೊಳ್ಳುವ ತವಕವಿದೆ.

ತಮಿಳುನಾಡಿನಲ್ಲಿ ಅಡಗಿ ಕುಳಿತಂತೆ ಕಾಣುವ ಪುದುಚೇರಿ ರಾಜ್ಯದ ವ್ಯಾಪ್ತಿಯು ಮಾಹೆಯ ಮೂಲಕ ಕೇರಳ ಮತ್ತು ಯಾನಂ ಮೂಲಕ ಆಂಧ್ರ ಪ್ರದೇಶದಲ್ಲಿಯೂ ವಿಸ್ತರಿಸಿದೆ. ಸದ್ಯದ ಮಟ್ಟಿಗೆ ಕರ್ನಾಟಕ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಬಿಜೆಪಿ ಅಧಿಕಾರದಲ್ಲಿಲ್ಲ. ಪುದುಚೇರಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾದರೆ ಪಕ್ಕದ ತಮಿಳುನಾಡು, ಕೇರಳ ಮತ್ತು ಅಂಧ್ರದಲ್ಲಿಯೂ ಪ್ರಭಾವ ವಿಸ್ತರಿಸಲು ಸಾಧ್ಯವಾಗುತ್ತದೆ ಎನ್ನುವುದು ಬಿಜೆಪಿ ಕೇಂದ್ರ ನಾಯಕರ ಲೆಕ್ಕಾಚಾರ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಪುದುಚೇರಿಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು ಇದೇ ಕಾರಣಕ್ಕೆ.

ಇದನ್ನೂ ಓದಿ: ಚುನಾವಣೆಯಲ್ಲಿ ನಾನೇಕೆ ಸ್ಪರ್ಧಿಸುತ್ತಿಲ್ಲ: ಕಾರಣ ವಿವರಿಸಿದ ಪುದುಚೇರಿ ಮಾಜಿ ಸಿಎಂ ವಿ. ನಾರಾಯಣಸ್ವಾಮಿ

BJP Flag

ಬಿಜೆಪಿ ಧ್ವಜ

ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಚಾರದಲ್ಲಿ ಈವರೆಗೆ ಮೈತ್ರಿಕೂಟಕ್ಕೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ರಂಗಸ್ವಾಮಿ ತಮ್ಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಈ ಹೇಳಿಕೆಗೆ ಅನುಮೋದನೆ ನೀಡಿಲ್ಲ. ‘ಎಐಎನ್​ಆರ್​ಸಿ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ ಎನ್​ಡಿಎ ಚುನಾವಣೆಯ ನಂತರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸುತ್ತದೆ. ನಾವು ಈ ಚುನಾವಣೆಯಲ್ಲಿ ನಿಚ್ಚಳ ಗೆಲುವು ಸಾಧಿಸುತ್ತೇವೆ. ಹಲವು ಸಮೀಕ್ಷೆಗಳು ಇದೇ ವಿಷಯವನ್ನು ತಿಳಿಸಿವೆ’ ಎಂದು ಬಿಜೆಪಿಯ ಪುದುಚೇರಿ ಚುನಾವಣಾ ಉಸ್ತುವಾರಿ ನಿರ್ಮಲ್ ಸುರಾನಾ ಹೇಳಿದ್ದಾರೆ.

ತಮಿಳುನಾಡಿನಲ್ಲಿಯೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆಯಲ್ಲಿ ಎಡವಿತ್ತು. ಚುನಾವಣೆಯ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆ ಎಂಬ ನಿಲುವು ಬದಲಿಸಿಕೊಂಡು, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎನ್​ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಮೂರು ತಿಂಗಳು ತೆಗೆದುಕೊಂಡಿತ್ತು. ಪುದುಚೇರಿಯಲ್ಲಿ ಬಿಜೆಪಿಗೆ ಹೆಚ್ಚು ಆಯ್ಕೆಗಳಿಲ್ಲ. ಕಾಂಗ್ರೆಸ್​ನ ಬಂಡಾಯ ಅಭ್ಯರ್ಥಿಗಳನ್ನು ನಿರ್ವಹಿಸುತ್ತಾ ಹಿರಿಯ ರಾಜಕಾರಿಣಿ ರಂಗಸ್ವಾಮಿ ಅವರ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ. 2011ರವರೆಗೆ ರಂಗಸ್ವಾಮಿ ಸಹ ಕಾಂಗ್ರೆಸ್​ನಲ್ಲಿಯೇ ಇದ್ದವರು. ಕಾಂಗ್ರೆಸ್​ ತೊರೆದು ಸ್ವಂತ ಪಕ್ಷ ಸ್ಥಾಪಿಸಿ, ಚುನಾವಣೆ ಗೆದ್ದು ಮುಖ್ಯಮಂತ್ರಿಯಾಗಿದ್ದರು.

ಇದನ್ನೂ ಓದಿ: ಪುದುಚೇರಿಯಲ್ಲಿ ಅಮಿತ್​ ಶಾ ಉದ್ಯೋಗ ಮಂತ್ರ: ನಿರುದ್ಯೋಗ ನಿವಾರಣೆಗೆ ಬಿಜೆಪಿಗೆ ಮತ ನೀಡಿ ಎಂದ ‘ಚಾಣಕ್ಯ’

Congress Flag

ಕಾಂಗ್ರೆಸ್​ ಧ್ವಜ

ಬಿಜೆಪಿ-ಕಾಂಗ್ರೆಸ್​ ಕೆಸರೆರೆಚಾಟ ಬಿಜೆಪಿಯ ಪುದುಚೇರಿ ಘಟಕವು ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್​ ತನಿಖೆಗೆ ಆದೇಶಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕೆಲ ಬಿಜೆಪಿ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ‘ಪುದುಚೇರಿಯ ಜನರು ಬಿಜೆಪಿಗೆ ವಿರುದ್ಧವಾಗಿದ್ದಾರೆ. ನಮಗೆ ಬೆಂಬಲ ನೀಡಲಿದ್ದಾರೆ’ ಎಂದು ಸರ್ಕಾರದ ಮುಖ್ಯ ಸಚೇತಕರಾಗಿದ್ದ ಮನವೇಲ್ ಕ್ಷೇತ್ರದ ಅಭ್ಯರ್ಥಿ ಆರ್​.ಕೆ.ಆರ್.ಅನಂತರಾಮನ್ ಹೇಳುತ್ತಾರೆ. ‘ಪುದುಚೇರಿಯು ಜಾತ್ಯತೀತ ತತ್ವಕ್ಕೆ ಬೆಲೆಕೊಡುವ ರಾಜ್ಯ. ಹಿಂದುತ್ವ ಸಿದ್ಧಾಂತ ಇಲ್ಲಿ ಹೆಚ್ಚು ಕೆಲಸ ಮಾಡುವುದಿಲ್ಲ’ ಎಂದು ಅವರು ತಿಳಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪುದುಚೇರಿ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿತ್ತು. ಲೆಫ್ಟಿನೆಂಟ್ ಜನರಲ್ ಆಗಿದ್ದ ಕಿರಣ್​ಬೇಡಿ ಅವರ ಮೂಲಕ ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ತಡೆಯೊಡ್ಡಿತ್ತು ಎಂದು ಕಾಂಗ್ರೆಸ್ ದೂರುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯು ನಾರಾಯಣಸ್ವಾಮಿ ನೇತೃತ್ವದ ಸರ್ಕಾರವು ಅನುದಾನ ಬಳಕೆಯಲ್ಲಿ ಹಲವು ತಪ್ಪು ಮಾಡಿತ್ತು. ದೆಹಲಿಯ ಕಾಂಗ್ರೆಸ್ ಹೈಕಮಾಂಡ್​​ಗೆ ಬೇಕಾದಂತೆ ನಾರಾಯಣಸ್ವಾಮಿ ನಡೆದುಕೊಂಡರು. ಪುದುಚೇರಿ ಜನರ ಆಶಯಗಳನ್ನು ಈಡೇರಿಸಲಿಲ್ಲ ಎಂದು ಮೋದಿ ಸಾರ್ವಜನಿಕ ಸಮಾರಂಭದಲ್ಲಿಯೇ ಹರಿಹಾಯ್ದಿದ್ದರು. ಮೋದಿ ಈ ಹೇಳಿಕೆ ನೀಡಿದಾಗ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನಗೊಂಡು ಕೇವಲ 2 ದಿನಗಳಾಗಿದ್ದವು.

ಪುದುಚೇರಿಯಲ್ಲಿ ವಿಶ್ವಾಸಮತಯಾಚನೆಗೂ ಮೊದಲು ಕಿರಣ್​ಬೇಡಿ ಅವರನ್ನು ಸ್ಥಾನಚ್ಯುತಿ ಮಾಡಿ, ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಯಿತು. ಈ ಹಿಂದೆ ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥರಾಗಿದ್ದ ತಮಿಳಿಸೈ ಅವರನ್ನು ಪುದುಚೇರಿ ಜನರು ಸುಲಭವಾಗಿ ಒಪ್ಪಿಕೊಳ್ಳಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಪ್ರಸ್ತುತ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯಿದೆ.

(Puducherry elections Congress banks on sympathy as BJP looks to gain hold tough fight expected)

ಇದನ್ನೂ ಓದಿ: Assembly Elections 2021: ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಇಂದು ನರೇಂದ್ರ ಮೋದಿ ರ‍್ಯಾಲಿ, ಟ್ವಿಟರ್​ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಪಡೆದ ಕೊವಿಡ್​ ವ್ಯಾಕ್ಸಿನ್ ಯಾವುದು? ಲಸಿಕೆ ಪಡೆದ ಬಳಿಕ ಪುದುಚೇರಿ, ಕೇರಳದ ನರ್ಸ್​ಗಳಿಗೆ ಹೇಳಿದ್ದೇನು?

Published On - 7:06 pm, Mon, 5 April 21