Punjab New DGP: ಪ್ರಧಾನಿ ಭದ್ರತಾ ಲೋಪದ ಆರೋಪದ ಬೆನ್ನಲ್ಲೇ ಪಂಜಾಬ್​ನಲ್ಲಿ ನೂತನ ಡಿಜಿಪಿ ನೇಮಕ

ಪಂಜಾಬ್​ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಅವರ ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಪಂಜಾಬ್ ನೂತನ ಪೊಲೀಸ್ ಮುಖ್ಯಸ್ಥರನ್ನಾಗಿ ವಿಕೆ ಭಾವ್ರಾ ಅವರನ್ನು ನೇಮಕ ಮಾಡಲಾಗಿದೆ.

Punjab New DGP: ಪ್ರಧಾನಿ ಭದ್ರತಾ ಲೋಪದ ಆರೋಪದ ಬೆನ್ನಲ್ಲೇ ಪಂಜಾಬ್​ನಲ್ಲಿ ನೂತನ ಡಿಜಿಪಿ ನೇಮಕ
ಪಂಜಾಬ್ ಡಿಜಿಪಿ ಭಾವ್ರಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 08, 2022 | 5:48 PM

ಚಂಡೀಗಢ: ಪಂಜಾಬ್​ನಲ್ಲಿ ಉಂಟಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಆ ಘಟನೆಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಹಾಗೇ, ಸುಪ್ರೀಂ ಕೋರ್ಟ್​ನಲ್ಲೂ ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಇಂದು (ಶನಿವಾರ) ವಿಕೆ ಭಾವ್ರ ಅವರನ್ನು ಪಂಜಾಬ್​ನ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಡಿಜಿಪಿ) ನೇಮಕ ಮಾಡಿದೆ.

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಂತಿಮಗೊಳಿಸಿದ್ದ ಮೂರು ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾವ್ರ ಅವರನ್ನು ಡಿಜಿಪಿಯಾಗಿ ಆಯ್ಕೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ದಿನಕರ್ ಗುಪ್ತಾ ಮತ್ತು ಪ್ರಬೋಧ್ ಕುಮಾರ್ ಇತರರ ಹೆಸರು ಕೂಡ ಇತ್ತು. ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ವಿ.ಕೆ. ಭಾವ್ರ 1987ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಪಂಜಾಬ್​ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಅವರ ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಚುನಾವಣಾ ಆಯೋಗವು ಮುಂದಿನ ತಿಂಗಳ ಚುನಾವಣೆಗೆ ಇಂದು ದಿನಾಂಕವನ್ನು ನಿಗದಿ ಮಾಡಿದ್ದು, ಅದಕ್ಕೂ ಮೊದಲೇ ಪಂಜಾಬ್ ಸರ್ಕಾರ ನೂತನ ಡಿಜಿಪಿಯನ್ನು ನೇಮಕ ಮಾಡಿದೆ.

ನಿರ್ಗಮಿತ ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವಾಲಯದ ತಂಡವು ಕರೆಸಿದ್ದು, ಫಿರೋಜ್‌ಪುರ ಜಿಲ್ಲೆಯ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಪ್ರಧಾನಿಯವರ ವಾಹನ ಮೆರವಣಿಗೆಯನ್ನು ಹಿಡಿದಿಟ್ಟುಕೊಳ್ಳಲು ಕಾರಣವಾದ ಸಂದರ್ಭಗಳ ಕುರಿತು ವಿಚಾರಣೆ ನಡೆಸುತ್ತಿದೆ. ಇದೀಗ ಹೊಸತಾಗಿ ನೇಮಕವಾಗಿರುವ ಡಿಜಿಪಿ ವಿಕೆ ಭಾವ್ರ ಎರಡು ವರ್ಷಗಳ (ಕನಿಷ್ಠ) ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಚಟ್ಟೋಪಾಧ್ಯಾಯ ಅವರ ಬದಲಾಗಿ ಭಾವ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಭದ್ರತಾ ಲೋಪ; ಪಂಜಾಬ್​ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು 27 ಐಪಿಎಸ್ ಅಧಿಕಾರಿಗಳಿಂದ ರಾಷ್ಟ್ರಪತಿಗೆ ಪತ್ರ

ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಕಾರಣ; ಮಲ್ಲಿಕಾರ್ಜುನ ಖರ್ಗೆ ಆರೋಪ