ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಕಾರಣ; ಮಲ್ಲಿಕಾರ್ಜುನ ಖರ್ಗೆ ಆರೋಪ

PM Security Breach: ಪ್ರಧಾನಿ ಮೋದಿಯವರ ಭದ್ರತಾ ವೈಫಲ್ಯವಾಗಿದ್ದು ಕೇಂದ್ರ ಸರ್ಕಾರದಿಂದಲೇ ಹೊರತು ಪಂಜಾಬ್​ ಸರ್ಕಾರದಿಂದಲ್ಲ. ನರೇಂದ್ರ ಮೋದಿಯವರಿಗೆ ಇಂದಿರಾ ಗಾಂಧಿಗಿಂತ 10 ಪಟ್ಟು ಹೆಚ್ಚು ಭದ್ರತೆಯಿದೆ. ಅವರ ಪ್ರಯಾಣವನ್ನು ಬದಲಿಸಿರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಕಾರಣ; ಮಲ್ಲಿಕಾರ್ಜುನ ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 06, 2022 | 3:17 PM

ಬೆಂಗಳೂರು: ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ (PM Narendra Modi Security Breach) ವಿಚಾರವಾಗಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮೋದಿ ಭದ್ರತಾ ವೈಫಲ್ಯದ ಕುರಿತು ಪ್ರಧಾನಿಗಳ ಕಚೇರಿ ಹಾಗೂ ಬಿಜೆಪಿ ವಕ್ತಾರರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಾಯಿಗೆ ಬಂದ ಹಾಗೇ ಮಾತನಾಡ್ತಾ ಇದ್ದಾರೆ. ಪಂಜಾಬ್ ಸರ್ಕಾರ ಒಬ್ಬ ದಲಿತ ಸಿಎಂ ನಾಯಕತ್ವದಲ್ಲಿ ನಡೆಯುತ್ತಿದೆ. ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ (Charanjit Singh Channi) ಬಹಳ ಸರಳ ಸಜ್ಜನ ಹಾಗೂ ಮೃದುಭಾಷಿ. ಅಂತಹ ಸಜ್ಜನ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಭದ್ರತಾ ವೈಫಲ್ಯವಾಗಿದ್ದು ಕೇಂದ್ರ ಸರ್ಕಾರದಿಂದಲೇ ಹೊರತು ಪಂಜಾಬ್​ ಸರ್ಕಾರದಿಂದಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೋಗುವ ಜಾಗಕ್ಕೆ ಎಸ್​ಜಿಪಿ, ಗುಪ್ತಚರ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಮೊದಲೇ ಹೋಗಿರುತ್ತಾರೆ. ಆ ಕಾರ್ಯಕ್ರಮದಲ್ಲಿ ಯಾರ್ಯಾರು ಇರಬೇಕು ಎಂದು ನಿರ್ಧರಿಸುತ್ತಾರೆ. ಪ್ರಧಾನಿಗಳ ಕಾರ್ಯಕ್ರಮದ ಎಲ್ಲ ವಿವರಗಳನ್ನೂ ಪಂಜಾಬ್ ಸರ್ಕಾರಕ್ಕೆ ಕಳಿಸಿದ್ದಾರೆ. ಆದರೆ, ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಮಾಡಿಲ್ಲ. ಅವರು ಫಿರೋಜ್​ಪುರದಲ್ಲಿ ಬೃಹತ್ ಸಭೆ ಮಾಡಬೇಕಿತ್ತು. ಅಲ್ಲಿ ಅವರ ನಿರೀಕ್ಷೆಯಂತೆ ಜನ ಸೇರಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಟೀಕಿಸಿದ್ದಾರೆ.

ಒಂದುವೇಳೆ ನಮ್ಮ ಕಾರ್ಯಕ್ರಮ ಹಾಗಾಗಿದ್ದರೆ ನಮ್ಮನ್ನು ಮುಂಜಾನೆಯಿಂದ ಸಂಜೆ ತನಕ ಅವರು ಹರಾಜ್ ಹಾಕುತ್ತಿದ್ದರು. ಅಲ್ಲಿ ಪೋಲಿಸರೇ 5 ಸಾವಿರ ಜನ ಇದ್ದರು. ಹೀಗಾಗಿ, ಹೇಗೆ ಮಾಡಬೇಕು ಎಂದು ಯೋಚಿಸಿ ಈ ರೀತಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಪ್ರಕಾರ ಅಲ್ಲಿಗೆ ಹೋಗಬೇಕಿತ್ತು. ಆದರೆ, ಜನ ಸೇರದ ಸಿಟ್ಟನ್ನು ಪಂಜಾಬ್ ಸರ್ಕಾರದ ಮೇಲೆ ತೋರಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಹೋಗುವವರು ಕೊನೆಯ 20 ನಿಮಿಷದಲ್ಲಿ ಅವರು ದಾರಿ ಬದಲಿಸಿದ್ದಾರೆ. ಐಬಿ ಡೈರೆಕ್ಟರ್ ಸಿಚುಯೇಷನ್ ಸರಿ ಇದೆ ಅಂತ ಹೇಳಿದ್ದರು. ಪಂಜಾಬ್ ಮುಖ್ಯ ಕಾರ್ಯದರ್ಶಿ ರೈತರು ಮನವಿ ಮಾಡುವ ಬಗ್ಗೆ ಹೇಳಿದ್ದರು. ಪಂಜಾಬ್ ಸರ್ಕಾರ ಸ್ಥಳೀಯ ವಾತಾವರಣವನ್ನು ತಿಳಿಸಿದ್ದರು. ಆದರೂ ಮೋದಿ ಪ್ಲಾನ್ ಬದಲಿಸಿ 10 ಕಿ.ಮೀ. ರಸ್ತೆಯಲ್ಲೇ ಹೋದರು. ಅವರಿಗೆ ಇಂದಿರಾ ಗಾಂಧಿಗಿರುವ 10 ಪಟ್ಟು ಭದ್ರತೆ ಇತ್ತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ನಾನು ರಸ್ತೆಯಲ್ಲಿ ಹೋಗಬೇಕಾದರೂ ನರೇಂದ್ರ ಮೋದಿ ಬರುತ್ತಿದ್ದಾರೆ ಅಂದರೆ 5 ನಿಮಿಷ ಮೊದಲೇ ಟ್ರಾಫಿಕ್ ನಿಲ್ಲಿಸುತ್ತಾರೆ. ನಾನು ನನ್ನ ಕಚೇರಿಗೆ ಹೋಗುವಾಗಲೂ ಮೋದಿ ಬರುತ್ತಿದ್ದಾರೆಂದರೆ ತಡೆಯುತ್ತಾರೆ. ನಾನು ಗಲಾಟೆ ಮಾಡಿದ ಬಳಿಕ ಬಿಟ್ಟಿದ್ದಾರೆ. ಇದು ನನಗೇ ಆದ ಅನುಭವ. ಈ ವಿಷಯದಲ್ಲಿ ಸುಮ್ಮನೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ನಿವೃತ್ತಿ ನ್ಯಾಯಮೂರ್ತಿಯಿಂದ ಈಗಾಗಲೇ ಪ್ರಕರಣ ತನಿಖೆಗೆ ಕೊಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕರಣವನ್ನು ತನಿಖೆಗೆ ನೀಡಿದೆ. ಬೆಳಿಗ್ಗೆ ಈ ಬಗ್ಗೆ ನನಗೆ ಪಂಜಾಬ್ ಸಿಎಂ ಮಾಹಿತಿ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ಲೋಪಕ್ಕೆ ಕಾಂಗ್ರೆಸ್ ನಾಯಕರಿಂದಲೂ ಆಕ್ಷೇಪ; ಸಿಎಂಗೆ ರಾಜೀನಾಮೆ ಕೊಡಿ ಎಂದ ಅಮರೀಂದರ್ ಸಿಂಗ್

ಭದ್ರತಾ ಲೋಪ: ಸುಪ್ರೀಂಕೋರ್ಟ್​​ನಲ್ಲಿ ಪಂಜಾಬ್ ಸರ್ಕಾರದ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಾಳೆ