ಅಂಬರೀಶ್ ಸ್ಮಾರಕಕ್ಕೆ 12 ಕೋಟಿ, ಕೆರೆಗಳಿಗೆ ನೀರು ಹರಿಸಲು 93 ಕೋಟಿ ಅನುದಾನ: ಸಚಿವ ಸಂಪುಟ ನಿರ್ಣಯ
ಬೆಂಗಳೂರಿನ 22 ಮತ್ತು ಹೊಸಕೋಟೆ ಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ₹ 93 ಕೋಟಿ ಮಂಜೂರು ಮಾಡಲಾಗಿದೆ.
ಬೆಂಗಳೂರು: ಕಂಠೀರವ ಸ್ಟುಡಿಯೊದಲ್ಲೇ ಅಂಬರೀಶ್ ಸ್ಮಾರಕ ನಿರ್ಮಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ. ಸ್ಟುಡಿಯೊದಲ್ಲಿ ₹ 12 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಸಚಿವ ಸಂಪುಟ ಸಭೆಯ ನಂತರ ವಿವರಗಳನ್ನು ನೀಡಿದ ಅವರು, ಅಂಬರೀಶ್ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದರು. ಬೆಂಗಳೂರಿನ 22 ಮತ್ತು ಹೊಸಕೋಟೆ ಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ₹ 93 ಕೋಟಿ ಮಂಜೂರು ಮಾಡಲಾಗಿದೆ. ಕಾರ್ಕಳ ಕೋರ್ಟ್ ಕಟ್ಟಡಕ್ಕೆ ₹ 19 ಕೋಟಿ, ಕೋಲಾರದ ಮುಳಬಾಗಲು ಕೋರ್ಟ್ ಕಟ್ಟಡಕ್ಕೆ ₹ 16.3 ಕೋಟಿ, ದೊಡ್ಡಬಳ್ಳಾಪುರ ಮಾರುತಿ ಎಜುಕೇಶನ್ ಟ್ರಸ್ಟ್‌ಗೆ 2.8 ಎಕರೆ ಭೂಮಿ ಒದಗಿಸಲು ನಿಯಮಾವಳಿ ತಿದ್ದುಪಡಿ ಮಾಡಲು ಸಭೆ ನಿರ್ಧರಿಸಿತು.
ಹಾಸನ ಜಿಲ್ಲೆ ಹೊಳೆನರಸೀಪುರದ ಹಿರಿಸಾವೆ ಬಳಿ ಆದಿಚುಂಚನಗಿರಿ ಮಠಕ್ಕೆ 22 ಎಕರೆ ಭೂಮಿ ಮಂಜೂರು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಈ ಭೂಮಿಯನ್ನು ಶಾಲೆ, ವಿದ್ಯಾರ್ಥಿ ನಿಲಯ, ಧ್ಯಾನಮಂದಿರ, ಅನಾಥಾಶ್ರಮ ನಿರ್ಮಾಣಕ್ಕೆ ಮಠವು ಬಳಸಲಿದೆ. ಮುದ್ರಾಂಕ ಇಲಾಖೆಗೆ ಐಟಿ ಸೇವೆಗಳನ್ನು ಒದಗಿಸಲು ₹ 406 ಕೋಟಿ ಅನುದಾನ ನೀಡಲಾಗಿದೆ. ಜಲಜೀವನ ಮಿಷನ್ ಅಡಿ ನೀರಿಗಾಗಿ ₹ 9152 ಕೋಟಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಕಾರ್ಕಳ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ₹ 19 ಕೋಟಿ, ಕೋಲಾರ ಜಿಲ್ಲೆ ಮುಳಬಾಗಲು ಕೋರ್ಟ್ ಕಟ್ಟಡಕ್ಕೆ ₹ 16.3 ಕೋಟಿ ಒದಗಿಸಲಾಗುವುದು. ಶುಶ್ರೂಷಕರ 80 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂಪುಟವು ಒಪ್ಪಿಗೆ ಸೂಚಿಸಿದೆ. ಮೈಸೂರಿನ ಅಂಬೇಡ್ಕರ್ ಭವನಕ್ಕೆ ₹ 16.5 ಕೋಟಿ ಹೆಚ್ಚುವರಿ ಹಣ ನೀಡಲು ಸರ್ಕಾರ ಒಪ್ಪಿಕೊಂಡಿದೆ. 300 ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿಗೆ ₹ 100 ಕೋಟಿ ಸಹಾಯಧನ ನೀಡಲಾಗುವುದು. ಕೊಯ್ಲು ಯಂತ್ರಗಳಿಗೆ ವಿಧಿಸಲಾಗುತ್ತಿರುವ ತೆರಿಗೆಯಲ್ಲಿ ಶೇ 3ರಷ್ಟು ಕಡಿಮೆ ಮಾಡಲಾಗುವುದು. ಜೋಗ ಜಲಪಾತದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ಮತ್ತು ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ₹ 116 ಕೋಟಿ ನಿಗದಿಪಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ತೆರಿಗೆ ವ್ಯತ್ಯಾಸ ಮಾಡಿರುವ 78,254 ಜನರಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗುವುದು. ತೆರಿಗೆ ಕಟ್ಟದವರಿಗೆ ಸರಳ ಬಡ್ಡಿ ವಿಧಿಸಿ, ಕೆಲ ರಿಯಾಯ್ತಿಗನ್ನೂ ನೀಡಲಾಗುವುದು ಎಂದರು. ನೇರ ನೇಮಕಾತಿ ವಿಧಾನದಲ್ಲಿ ಶುಶ್ರೂಷಕರ 80 ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ ಇದ್ದವರಿಗೆ 20 ಅಂಕದವರೆಗೆ ಕೃಪಾಂಕಗಳನ್ನು ನೀಡಲಾಗುವುದು ಎಂದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ನಗರೋತ್ಥಾನ ಯೋಜನೆಯಡಿ ಅಡಿ ₹ 3885 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 307 ಸ್ಥಳೀಯ ಸಂಸ್ಥೆಗಳಿಗೆ ಇದು ಅನ್ವಯವಾಗಲಿದೆ. ಬೆಂಗಳೂರು ಅಭಿವೃದ್ಧಿಗೆ ಅಮೃತ್ ಯೋಜನೆಯಡಿ ₹ 6000 ಕೋಟಿ ಅನುದಾನ ನೀಡಲಾಗಿದೆ. ಅನುದಾನದ ಮೊತ್ತವನ್ನು ವರ್ಷಕ್ಕೆ ₹ 2000 ಕೋಟಿಯಂತೆ ಮೂರು ವರ್ಷಗಳಲ್ಲಿ ಮಂಜೂರು ಮಾಡಲಾಗುವುದು. ಬೆಂಗಳೂರು ಹೆಬ್ಬಾಳ ಜಂಕ್ಷನ್ ಅಭಿವೃದ್ಧಿಗೆ ಸಂಪುಟವು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.ಇದನ್ನೂ ಓದಿ: ಸಚಿವ ಮಾಧುಸ್ವಾಮಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಪಿಸುಪಿಸು ಮಾತು! ಸಂಸದ ಜಿಎಸ್ ಬಸವರಾಜ್, ಸಚಿವ ಭೈರತಿ ಬಸವರಾಜ್ ಮಾತಿಗೆ ಮಾಧುಸ್ವಾಮಿ ರಿಯಾಕ್ಷನ್ ಇದನ್ನೂ ಓದಿ: ಜನವರಿಯಲ್ಲಿ ವಿಧೇಯಕ ಮಂಡನೆ; ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸವಲತ್ತು ನಿಲ್ಲಿಸುತ್ತೇವೆ- ಸಚಿವ ಮಾಧುಸ್ವಾಮಿ ಹೇಳಿಕೆ
Published On - 3:25 pm, Thu, 6 January 22