ಮುಂಬೈನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಶೇ. 96ರಷ್ಟು ರೋಗಿಗಳು ಐಸಿಯುಗೆ ದಾಖಲು

ಮುಂಬೈನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಶೇ. 96ರಷ್ಟು ರೋಗಿಗಳು ಐಸಿಯುಗೆ ದಾಖಲು
ಪ್ರಾತಿನಿಧಿಕ ಚಿತ್ರ

Mumbai Covid Cases: ಮುಂಬೈನಲ್ಲಿ ಪ್ರಸ್ತುತ ಆಮ್ಲಜನಕ ಹಾಸಿಗೆಗಳಲ್ಲಿರುವ 1,900 ರೋಗಿಗಳಲ್ಲಿ ಶೇ. 96ರಷ್ಟು ಮಂದಿ ಕೊವಿಡ್ ಲಸಿಕೆಯ ಒಂದು ಡೋಸ್ ಸಹ ತೆಗೆದುಕೊಂಡಿಲ್ಲ. ಮುಂಬೈನ 186 ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೆಡ್‌ಗಳ ಮೇಲೆ ದಾಖಲಾಗುವ ಶೇ. 96ರಷ್ಟು ರೋಗಿಗಳು ಲಸಿಕೆ ಪಡೆದಿಲ್ಲ.

S Chandramohan

| Edited By: Sushma Chakre

Jan 08, 2022 | 3:55 PM

ನವದೆಹಲಿ: ನಮ್ಮ ದೇಶದಲ್ಲಿ ಇನ್ನೂ ಅನೇಕರು ಕೊರೊನಾ ಲಸಿಕೆ (Coronavirus Vaccine) ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಲಸಿಕೆ ಪಡೆಯಲು ಹಿಂದೇಟು ಹಾಕಿದವರೇ ಈಗ ಮುಂಬೈನಲ್ಲಿ (Mumbai) ಆಸ್ಪತ್ರೆಯ ಐಸಿಯುಗೆ ದಾಖಲಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಐಸಿಯುಗೆ ದಾಖಲಾಗಿರುವವರ ಪೈಕಿ ಶೇ.96ರಷ್ಟು ಕೊರೊನಾ ರೋಗಿಗಳು (Covid Patients) ಒಂದು ಡೋಸ್ ಕೊರೊನಾ ಲಸಿಕೆಯನ್ನು ಸಹ ಪಡೆದಿಲ್ಲ. ಇದು ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ.

ಮುಂಬೈನಲ್ಲಿ ಪ್ರಸ್ತುತ ಆಮ್ಲಜನಕ ಹಾಸಿಗೆಗಳಲ್ಲಿರುವ 1,900 ರೋಗಿಗಳಲ್ಲಿ ಶೇ. 96ರಷ್ಟು ಮಂದಿ ಕೊವಿಡ್ ಲಸಿಕೆಯ ಒಂದು ಡೋಸ್ ಸಹ ತೆಗೆದುಕೊಂಡಿಲ್ಲ ಎಂದು ಬಿಎಂಸಿ ಕಮಿಷನರ್ ಇಕ್ಬಾಲ್ ಚಹಾಲ್ ಹೇಳಿದ್ದಾರೆ. ಮುಂಬೈನ 186 ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೆಡ್‌ಗಳ ಮೇಲೆ ದಾಖಲಾಗುವ ಶೇ. 96ರಷ್ಟು ರೋಗಿಗಳು ಲಸಿಕೆ ಪಡೆದಿಲ್ಲ. ಕೊರೊನಾ ಲಸಿಕೆ ಪಡೆದ ಜನರು ಐಸಿಯುಗಳನ್ನು ತಲುಪುತ್ತಿಲ್ಲ ಎಂಬುದನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ ಎಂದು ಮುಂಬೈ ಪಾಲಿಕೆ ಕಮೀಷನರ್ ಇಕ್ಬಾಲ್ ಚಹಲ್ ಹೇಳಿದ್ದಾರೆ.

ಮುಂಬೈನ ಈ ಬೆಳವಣಿಗೆಯು ಇನ್ನೂ ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಡೇಂಜರ್ ಸಂದೇಶವಾಗಿದೆ. ತಕ್ಷಣವೇ ಕೊರೊನಾ ಲಸಿಕೆ ಪಡೆಯಿರಿ, ಐಸಿಯುಗೆ ದಾಖಲಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಈಗ ಮುಂಬೈ ಪಾಲಿಕೆ ಜನರಿಗೆ ಹೇಳುತ್ತಿದೆ. ಇದರಿಂದಾಗಿ ಕೊರೊನಾ ಲಸಿಕೆ ಪಡೆದರೆ, ಕೊರೊನಾ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗುವುದು. ಐಸಿಯುಗೆ ಹೋಗಿ ಜೀವನ್ಮರಣ ಹೋರಾಟ ನಡೆಸುವುದು ತಪ್ಪುತ್ತದೆ ಎಂಬುದು ಸಾಬೀತಾಗಿದೆ. ಹಾಗಾಗಿ, ಇನ್ನೂ ಕೊರೊನಾ ಲಸಿಕೆ ಪಡೆಯದೇ ಇರುವ ಜನರು ತಕ್ಷಣವೇ ಕೊರೊನಾ ಲಸಿಕೆ ಪಡೆಯುವುದು ಉತ್ತಮ.

ಕೊರೊನಾ ಲಸಿಕೆ ಪಡೆಯುವ ಮೂಲಕ ತಮ್ಮನ್ನು ತಾವು ಆಸ್ಪತ್ರೆ, ಐಸಿಯುಗೆ ದಾಖಲಾಗುವುದನ್ನು ತಪ್ಪಿಸಿಕೊಳ್ಳಬಹುದು. ಕೊರೊನಾ ಲಸಿಕೆ ಪಡೆಯುವುದರಿಂದ ಕೊರೊನಾದಿಂದ ಸಾವು ಸಂಭವಿಸುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂಬುದು ಈಗ ಅಧ್ಯಯನಗಳಿಂದ ಸಾಬೀತಾಗಿದೆ. ನಮ್ಮ ಬಳಿ 21 ಲಕ್ಷಡೋಸ್ ಲಸಿಕೆ ದಾಸ್ತಾನು ಇದೆ. ವಯಸ್ಕ ಜನಸಂಖ್ಯೆಯು ಲಸಿಕೆಯನ್ನು ಪಡೆಯಲು ಪ್ರಸ್ತುತ 2 ಡೋಸ್‌ಗಳ ನಡುವೆ 84 ದಿನಗಳ ಅಂತರ ಇರಬೇಕು. ಇಂದು ಕೂಡ, ನಮ್ಮ ವ್ಯಾಕ್ಸಿನೇಷನ್ ಶೇಕಡಾವಾರು ಭಾರತದಲ್ಲಿ ಅತ್ಯುತ್ತಮವಾಗಿದೆ” ಎಂದು ಇಕ್ಬಾಲ್ ಚಾಹಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಇಲ್ಲಿಯವರೆಗೆ, ಬಿಎಂಸಿ ಎರಡೂ ಲಸಿಕೆ ಡೋಸ್‌ಗಳನ್ನು ಮುಂಬೈನಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ನೀಡಿದ್ದು, ಸುಮಾರು 90 ಲಕ್ಷ ಜನರು ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಆಸ್ಪತ್ರೆಗಳು ಮತ್ತು ಆಮ್ಲಜನಕದ ಪೂರೈಕೆಗೆ ಹೆಚ್ಚಿನ ಹೊರೆಯಾದರೆ ಮಾತ್ರ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಇಕ್ಬಾಲ್ ಚಹಲ್‌ ಪುನರುಚ್ಚರಿಸಿದರು.

ಮುಂಬೈನಲ್ಲಿ ಇಂದಿನವರೆಗೆ 1 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳಿದ್ದರೂ, ಕೇವಲ 10 ಟನ್ ಆಮ್ಲಜನಕವನ್ನು ಮಾತ್ರ ಬಳಸಲಾಗುತ್ತಿದೆ. ಎರಡನೇ ಅಲೆಯ ಸಮಯದಲ್ಲಿ, ಬಿಎಂಸಿಯಿಂದ ಆಮ್ಲಜನಕ ಉತ್ಪಾದನೆಯು ಶೂನ್ಯವಾಗಿತ್ತು. ಆದರೆ, ಈ ಬಾರಿ ನಾವು 400 ಟನ್ ಆಮ್ಲಜನಕ ಸಂಗ್ರಹವನ್ನು ಹೊಂದಿದ್ದೇವೆ. ನಮ್ಮದೇ ಆದ 200 ಟನ್ ಉತ್ಪಾದನೆಯನ್ನು ಹೊಂದಿದ್ದೇವೆ. ಅದರಲ್ಲಿ 10 ಟನ್ ಮಾತ್ರ ಬಳಸಲಾಗುತ್ತಿದೆ. ಆಸ್ಪತ್ರೆಗಳ ಮೇಲೆ ಒತ್ತಡವಿದ್ದರೆ ಮಾತ್ರ ನಿರ್ಬಂಧಗಳನ್ನು ಪರಿಗಣಿಸಲಾಗುತ್ತದೆ. ಆದರೆ, ಇಂದು ಶೇ. 84ರಷ್ಟು ಆಸ್ಪತ್ರೆಯ ಹಾಸಿಗೆಗಳು ಖಾಲಿ ಇವೆ. ಮುಂಬೈನಲ್ಲಿ ಜನವರಿ 6ರಂದು ವರದಿಯಾದ 20,000 ಪ್ರಕರಣಗಳಲ್ಲಿ 102 ಜನರನ್ನು ಮಾತ್ರ ಮುನ್ನೆಚ್ಚರಿಕೆಯಾಗಿ ಆಮ್ಲಜನಕದ ಹಾಸಿಗೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 16 ದಿನಗಳಲ್ಲಿ 19 ಸಾವುಗಳು ಸಂಭವಿಸುವುದರೊಂದಿಗೆ ಸಾವುಗಳು ನಿಯಂತ್ರಣದಲ್ಲಿವೆ ”ಎಂದು ಇಕ್ಬಾಲ್ ಚಹಾಲ್ ಹೇಳಿದ್ದಾರೆ.

ಮಹಾರಾಷ್ಟ್ರದ ಒಂದೇ ದಿನದ ಕೊವಿಡ್-19 ಕೇಸ್ ಶುಕ್ರವಾರ 40,000ಕ್ಕಿಂತ ಹೆಚ್ಚಿದೆ. ಆದರೂ ಒಮಿಕ್ರಾನ್ ರೂಪಾಂತರದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಒಟ್ಟಾರೆ ಕೋವಿಡ್ ಸಂಖ್ಯೆಯು 68 ಲಕ್ಷ ದಾಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸತತ 11ನೇ ದಿನ ರಾಜ್ಯವು ಕೋವಿಡ್-19 ಸೋಂಕುಗಳಲ್ಲಿ ಭಾರೀ ಏರಿಕೆ ವರದಿಯಾಗಿದೆ ಮತ್ತು ಜೀನೋಮ್ ಸಿಕ್ವೇನ್ಸಿಂಗ್​ಗಾಗಿ ಸ್ಯಾಂಪಲ್​ಗಳನ್ನು ಕಳುಹಿಸಲಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19 ಕೇಸ್​ಗಳು ಗುರುವಾರ 36,265ರಿಂದ ಶುಕ್ರವಾರ 40,925ಕ್ಕೆ ಏರಿವೆ. ಆದರೆ ಮರಣ ಪ್ರಮಾಣವು ಒಂದು ದಿನದ ಹಿಂದಿನ 13ರಿಂದ 20ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣವು ಶೇ. 2.07ರಷ್ಟಿದೆ. ಗುರುವಾರ 79 ಒಮಿಕ್ರಾನ್ ಸೋಂಕುಗಳನ್ನು ದಾಖಲಿಸಿದ ನಂತರ, ರಾಜ್ಯವು ಶುಕ್ರವಾರ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಿಲ್ಲ, ಏಕೆಂದರೆ ಅದರ ಸಂಖ್ಯೆ 876 ರಷ್ಟಿದೆ, ಮುಂಬೈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಡಿಸೆಂಬರ್ 1ರಿಂದ 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಮುಂಬೈ, ಪುಣೆ ಮತ್ತು ನಾಗ್ಪುರಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಆರೋಗ್ಯ ಅಧಿಕಾರಿಗಳು ತೀವ್ರ ನಿಗಾವನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: Mumbai Lockdown: ಮುಂಬೈನಲ್ಲಿ ಕೊವಿಡ್, ಒಮಿಕ್ರಾನ್ ಅಟ್ಟಹಾಸ; ಲಾಕ್​ಡೌನ್ ಸುಳಿವು ನೀಡಿದ ಮೇಯರ್

Omicron Variant: ಹೊಸ ಕೊವಿಡ್ ಪ್ರಕರಣಗಳ ಸುನಾಮಿ ಜಾಗತಿಕ ಆರೋಗ್ಯ ವ್ಯವಸ್ಥೆಗೆ ಅಡ್ಡಿಯಾಗಿದೆ; WHO ಕಳವಳ

Follow us on

Related Stories

Most Read Stories

Click on your DTH Provider to Add TV9 Kannada