ಅಗ್ನಿಪಥ್ ಪ್ರತಿಭಟನೆ ವೇಳೆ ರೈಲ್ವೆಗೆ ಉಂಟಾದ ನಷ್ಟ ₹259 ಕೋಟಿ: ಕೇಂದ್ರ ಸರ್ಕಾರ
ಸಂಸತ್ಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು, ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಹಲವು ರೈಲುಗಳಿಗೆ ಹಾನಿಯುಂಟಾಗಿದ್ದು ಒಟ್ಟು ₹259.44 ಕೋಟಿ ನಷ್ಟವಾಗಿದೆ ಎಂದಿದ್ದಾರೆ.
ಜೂನ್ ತಿಂಗಳಲ್ಲಿ ಅಗ್ನಿಪಥ್ ಯೋಜನೆ (Agnipath protest) ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ 2000ಕ್ಕಿಂತಲೂ ಹೆಚ್ಚು ರೈಲುಗಳು ರದ್ದಾಗಿವೆ. ಇದರಿಂದಾಗಿ ಭಾರತೀಯ ರೈಲ್ವೆಗೆ ₹259 ಕೋಟಿ ನಷ್ಟವುಂಟಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶುಕ್ರವಾರ ಸಂಸತ್ಗೆ ತಿಳಿಸಿದ್ದಾರೆ . ಸಂಸತ್ಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು, ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಹಲವು ರೈಲುಗಳಿಗೆ ಹಾನಿಯುಂಟಾಗಿದ್ದು ಒಟ್ಟು ₹259.44 ಕೋಟಿ ನಷ್ಟವಾಗಿದೆ ಎಂದಿದ್ದಾರೆ. ಪ್ರತಿಭಟನೆ ವೇಳೆ ರದ್ದು ಮಾಡಲಾದ ರೈಲುಗಳನ್ನು ಪುನಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 2019, 2020 ಮತ್ತು 2021ರಲ್ಲಿ ವಿವಿಧ ಪ್ರತಿಭಟನೆಗಳಿಂದಾಗಿ ರೈಲ್ವೆಗೆ ಕ್ರಮವಾಗಿ 151 ಕೋಟಿ, 904 ಕೋಟಿ ಮತ್ತು 62 ಕೋಟಿ ನಷ್ಟವುಂಟಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಗ್ನಿವೀರ್ ವಿವಾದ ಬಗ್ಗೆ ಚರ್ಚೆ ಇಲ್ಲ, ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯಿಂದ ಹೊರ ನಡೆದ ಸಂಸದರು
ಅಗ್ನಿವೀರ್ ವಿವಾದ ಬಗ್ಗೆ ಚರ್ಚೆ ನಡೆಸಲು ಅನುಮತಿಸುತ್ತಿಲ್ಲ ಎಂದು ಹೇಳಿ ವಿಪಕ್ಷದ ಮೂವರು ಸಂಸದರು ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯಿಂದ ಹೊರ ನಡೆದಿದ್ದಾರೆ. ಕಾಂಗ್ರೆಸ್ ಸಂಸದರಾದ ಕೆಸಿ ವೇಣುಗೋಪಾಲ್ ಮತ್ತು ಉತ್ತಮ್ ಕುಮಾರ್ ರೆಡ್ಡಿ ಮತ್ತು ಬಿಎಸ್ಪಿ ಸಂಸದ ಕನ್ವರ್ ಡ್ಯಾನಿಶ್ ಅಲಿ ಅವರು ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯ ಸಭೆಯಿಂದ ಹೊರನಡೆದರು. ಅಗ್ನಿಪಥ್ ಯೋಜನೆಭಾರಿ ಪರಿಣಾಮಗಳನ್ನು ಹೊಂದಿದೆ. ಈ ಬಗ್ಗೆ ಸಂಸದೀಯ ಪರಿಶೀಲನೆಯ ಅಗತ್ಯವಿದೆ ಎಂದು ವಾದಿಸಿ ಚರ್ಚೆಗೆ ಅವರು ಕರೆ ನೀಡಿದ್ದರು.
ಸಭೆಯ ಕಾರ್ಯಸೂಚಿಯ ಹೊರಗಿನ ಯಾವುದನ್ನೂ ಚರ್ಚಿಸಲಾಗುವುದಿಲ್ಲ ಎಂದು ಅಧ್ಯಕ್ಷ ಜುಯಲ್ ಓರಮ್ ಹೇಳಿದ್ದಾರೆ.ಅಗ್ನಿಪಥದ ಕುರಿತು ಚರ್ಚೆಗೆ ಅವಕಾಶ ನೀಡದಿರುವುದು ಸಂಸತ್ತಿಗೆ ಅವಮಾನ ಮಾಡಿದಂತೆ. ಯೋಜನೆಯ ಬಗ್ಗೆ ಸಮಿತಿಗೆ ಮಾಹಿತಿ ನೀಡದಿರುವುದು ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಅಧ್ಯಕ್ಷರೊಂದಿಗೆ ವಾದಿಸಿದರು ಎಂದು ವರದಿಯಾಗಿದೆ.
ಮುಂದಿನ ಸಭೆಯಲ್ಲಿ ಚರ್ಚೆಗೆ ಈ ವಿಷಯವನ್ನು ಸೇರಿಸುವಂತೆ ಅವರು ಒತ್ತಾಯಿಸಿದರು, ಆದರೆ ಅಧ್ಯಕ್ಷರು ಅನುಮತಿ ನಿರಾಕರಿಸಿದರು ಎಂದು ಹೇಳಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಸಂಸದೀಯ ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ವರ್ಷದ ಆರಂಭದಲ್ಲಿ ಮುಂಚಿತವಾಗಿ ನಿರ್ಧರಿಸಲಾಗುತ್ತದೆ ಎಂದು ಓರಂ ಹೇಳಿದ್ದಾರೆ.