Cyclone Jawad: ಜವಾದ್​ ಚಂಡಮಾರುತದಿಂದ ಒಡಿಶಾದಲ್ಲಿ ವಿಪರೀತ ಮಳೆ; ಆಂಧ್ರದ ಕರಾವಳಿ ತೀರಗಳಿಂದ 54 ಸಾವಿರ ಜನರ ಸ್ಥಳಾಂತರ

Cyclone Jawad: ಜವಾದ್​ ಚಂಡಮಾರುತದಿಂದ ಒಡಿಶಾದಲ್ಲಿ ವಿಪರೀತ ಮಳೆ; ಆಂಧ್ರದ ಕರಾವಳಿ ತೀರಗಳಿಂದ 54 ಸಾವಿರ ಜನರ ಸ್ಥಳಾಂತರ
ಒಡಿಶಾದಲ್ಲಿ ಮಳೆ (ಚಿತ್ರಕೃಪೆ-ಇಂಡಿಯಾ ಟುಡೆ)

ಈಗಾಗಲೇ ಒಡಿಶಾದಲ್ಲಿ ಮಳೆ ಶುರುವಾಗಿದ್ದು, ಅದರ ಪ್ರಮಾಣ ಹೆಚ್ಚಾಗಲಿದೆ. ಪ್ರವಾಹ, ಭೂಕುಸಿತದಂತಹ ಹಾನಿಗಳೂ ಉಂಟಾಗಬಹುದು ಎಂದು ಐಎಂಡಿ ತಿಳಿಸಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದೆ.

TV9kannada Web Team

| Edited By: Lakshmi Hegde

Dec 04, 2021 | 11:27 AM

ಐಎಂಡಿ ಮುನ್ಸೂಚನೆಯಂತೆ ಜವಾದ್​ ಚಂಡಮಾರುತ (Cyclone Jawad) ತನ್ನ ಪ್ರಭಾವ ತೋರಿಸುತ್ತಿದೆ. ಇಂದು ಬೆಳಗ್ಗೆಯಿಂದಲೇ ಒಡಿಶಾದ ರಾಜಧಾನಿ ಭುವನೇಶ್ವರ್​ ಸೇರಿ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಈಗಾಗಲೇ 19 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನು ಜವಾದ್​ ಚಂಡಮಾರುತದ ವೇಗ ಗಂಟಗೆ 70-80 ಕಿಮೀ ಇರಲಿದ್ದು, ಅದು ಗಂಟೆಗೆ 90 ಕಿಮೀ ವೇಗವನ್ನೂ ತಲುಪಲಿದೆ. ಹೀಗಾಗಿ ಭಾನುವಾರದವರೆಗೂ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಹಾಗಿದ್ದಾಗ್ಯೂ ಕೂಡ ಇದು ಗಂಭೀರ ಸ್ವರೂಪದ ಚಂಡಮಾರುತವಲ್ಲ ಎಂದೂ ಹೇಳಿದೆ.  

ಇತ್ತೀಚೆಗಿನ ಹವಾಮಾನ ವರದಿ ಪ್ರಕಾರ ಜವಾದ್​ ಚಂಡಮಾರುತವು ಭಾನುವಾರ ಮಧ್ಯಾಹ್ನದ ಹೊತ್ತಿಗೆ ಒಡಿಶಾದ ಪುರಿ ಕರಾವಳಿಯಿಂದ 35 ಕಿಮೀ ದೂರಕ್ಕೆ ಚಲಿಸುತ್ತದೆ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಪ್ರವೇಶಿಸುತ್ತದೆ. ಆದರೆ ಹಾಗೆ ಪ್ರವೇಶ ಮಾಡುವುದಕ್ಕೂ ಮೊದಲೇ ಜವಾದ್​ ಪುರಿ ಕರಾವಳಿ ತೀರದಲ್ಲಿ ದುರ್ಬಲಗೊಳ್ಳುತ್ತದೆ ಎಂದು ಪ್ರಾದೇಶಕ ಹವಾಮಾನ ಇಲಾಖೆ ಹಬೀಬುರ್​ ರೆಹಮಾನ್ ಬಿಸ್ವಾಸ್​ ತಿಳಿಸಿದ್ದಾರೆ.

ಈಗಾಗಲೇ ಒಡಿಶಾದಲ್ಲಿ ಮಳೆ ಶುರುವಾಗಿದ್ದು, ಅದರ ಪ್ರಮಾಣ ಹೆಚ್ಚಾಗಲಿದೆ. ಪ್ರವಾಹ, ಭೂಕುಸಿತದಂತಹ ಹಾನಿಗಳೂ ಉಂಟಾಗಬಹುದು ಎಂದು ಐಎಂಡಿ ತಿಳಿಸಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಕರಾವಳಿ ತೀರದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಒಡಿಶಾದ ಬಹುತೇಕ ಪ್ರದೇಶಗಳಲ್ಲಿ ಭಯಂಕರ ಮಳೆಯಾಗಬಹುದು. ಅದರಲ್ಲೂ ಗಜಪತಿ, ಗಂಜಮ್​, ಪುರಿ ಮತ್ತು ಜಗತ್​ಸಿಂಘ್ಪುರ್​​, ಕಟಖ್​ ಮತ್ತು ಭುವನೇಶ್ವರಗಳಲ್ಲಿ ಅತಿಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ.

ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮ ಆಂಧ್ರಪ್ರದೇಶದ ಕರಾವಳಿಗೆ ಜವಾದ್​ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಿಂದ ಸುಮಾರು 54 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಶ್ರೀಕುಲಂ ಜಿಲ್ಲೆಯಿಂದ 15, 755 ಜನರು, ವಿಜಯನಗರಂನಿಂದ 1700 ಮತ್ತು ವಿಶಾಖಪಟ್ಟಣಂನಿಂದ 36,553 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.  ಹಾಗೇ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF)ಯ 11 ತಂಡಗಳು, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಯ (SDRF)5 ತಂಡಗಳನ್ನು ನಿಯೋಜಿಸಲಾಗಿದೆ. ಹಾಗೇ, ಕರಾವಳಿ ಪ್ರದೇಶಗಳಲ್ಲಿ 6 ಕರಾವಳಿ ರಕ್ಷಕ ಪಡೆ ಮತ್ತು 10 ಮರಿನ್​ ಪೊಲೀಸ್​ ತಂಡಗಳನ್ನೂ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:ಹಾಸನದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಕೊಚ್ಚಿ ಹೋದ ರಸ್ತೆ; ವಾಹನ ಸವಾರರ ಪರದಾಟ

Follow us on

Most Read Stories

Click on your DTH Provider to Add TV9 Kannada