ರಾಜಸ್ಥಾನ: ಮೇಲ್ವರ್ಗದವರಿಗಾಗಿ ಇರಿಸಿದ್ದ ಮಡಿಕೆಯಿಂದ ನೀರು ಕುಡಿದ ದಲಿತ ವ್ಯಕ್ತಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ
ದಿಗ್ಗಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜೈಸಲ್ಮೇರ್: ರಾಜಸ್ಥಾನದ (Rajasthan)ಜೈಸಲ್ಮೇರ್ (Jaisalmer) ಜಿಲ್ಲೆಯಲ್ಲಿ ಮೇಲ್ವರ್ಗದ ಜನರಿಗೆ ಇರಿಸಲಾಗಿದ್ದ ಮಡಿಕೆಯಿಂದ ನೀರು ಕುಡಿದಿದ್ದಕ್ಕಾಗಿ ದಲಿತ (Dalit) ವ್ಯಕ್ತಿಯೊಬ್ಬನಿಗೆ ಪುರುಷರ ಗುಂಪೊಂದು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಗ್ಗಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಮಂಗಳವಾರ ಸಂಜೆ ಚತುರ ರಾಮ್ ಎಂಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ನಿಲ್ಲಿಸಿ ಅಂಗಡಿಯ ಹೊರಗೆ ಇಟ್ಟಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದ. ನಾಲ್ಕೈದು ಜನರು ಆತನನ್ನು ನಿಂದಿಸಿ, ಮೇಲ್ಜಾತಿಯವರಿಗೆ ನೀರು ಕುಡಿಯಲು ಇಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದೇಕೆ ಎಂದು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ಅವರ ಒಂದು ಕಿವಿಯ ಹಿಂದೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗುಂಡು ಹಾರಿಸಿದ್ದಾರೆ ಎಂದು ರಾಮ್ ಆರೋಪಿಸಿದ್ದು, ಹೇಳಿಕೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದಿದ್ದಾರೆ ಪೊಲೀಸರು.