Narendra Modi Birthday: ಎಂಟು ವರ್ಷ ‘ಮೋದಿ ಆಡಳಿತ’ದಲ್ಲಿ ಘೋಷಣೆಯಾದ ಮಹತ್ವದ ಯೋಜನೆಗಳು, ಸಾಧನೆಗಳು

Achievements and Major Projects: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಕಳೆದಿವೆ. ವೈಫಲ್ಯಗಳಿಗಿಂತ ಹೆಚ್ಚಿನ ಸಾಧನೆಗಳನ್ನ ಮಾಡಿರುವ ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

Narendra Modi Birthday: ಎಂಟು ವರ್ಷ 'ಮೋದಿ ಆಡಳಿತ'ದಲ್ಲಿ ಘೋಷಣೆಯಾದ ಮಹತ್ವದ ಯೋಜನೆಗಳು, ಸಾಧನೆಗಳು
ಎಂಟು ವರ್ಷಗಳ ಮೋದಿ ಆಡಳಿತದಲ್ಲಿ ಘೋಷಣೆಯಾದ ಮಹತ್ವದ ಯೋಜನೆಗಳು ಮತ್ತು ಸಾಧನೆಗಳು
Follow us
TV9 Web
| Updated By: Rakesh Nayak Manchi

Updated on: Sep 16, 2022 | 8:01 AM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಕಳೆದಿವೆ. 2014 ರ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿ ಮೋದಿ, 2019ರ ಚುನಾವಣೆಯಲ್ಲೂ ಪಕ್ಷವನ್ನು ಗೆಲ್ಲಿಸಿಕೊಡುವಲ್ಲಿ ಸಫಲರಾದರು. ಆ ಮೂಲಕ ಎರಡನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿದರು. ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ವಿಷಯಗಳಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುವ ಮೂಲಕ ಮೋದಿ ಸರ್ಕಾರವು ಭಾರತದ ನಾಗರಿಕರನ್ನು ಮಾತ್ರವಲ್ಲದೆ ಜಾಗತಿಕವಾಗಿ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಮೋದಿ ಅವರು ತಮ್ಮ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಅನೇಕ ಪ್ರಮುಖ ಯೋಜನೆಗಳು ಕೈಗೊಂಡಿದ್ದು, ಅವುಗಳು ಈ ಕೆಳಗಿನಂತಿವೆ.

370 ಆರ್ಟಿಕಲ್ ರದ್ದತಿ: ಎರಡನೇ ಬಾರಿ ಅಧಿಕಾರಕ್ಕೆ ಏರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾರೂ ಊಹಿಸಿರದ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿತು. ಅದೇನೆಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಆರ್ಟಿಕಲ್ ರದ್ದತಿ. ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಯಿತು.

ಅಯೋಧ್ಯೆ ರಾಮಮಂದಿರ: ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಂತೆ ರಾಮಮಂದಿರ ನಿರ್ಮಾಣ ಭರವಸೆ ಈಡೇರುವ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ರಧಾನಿ ಮೋದಿಯವರು 2020ರ ಆಗಸ್ಟ್ ತಿಂಗಳಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ನೆರವೇರಿಸಿದರು. ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, 2023 ರ ವೇಳೆಗೆ ಭವ್ಯ ರಾಮಮಂದಿರ ಸಿದ್ಧವಾಗಲಿದೆ. ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಈಡೇರಿಸುವ ಗರ್ಭಗೃಹದಲ್ಲಿ ರಾಮಲಲ್ಲಾನನ್ನು ಪುನಃ ಸ್ಥಾಪಿಸಲಾಗುವುದು ಎಂದು ಬಿಜೆಪಿ ಹೆಮ್ಮೆಪಡುತ್ತಿದೆ.

ಆಜಾದಿ ಕಾ ಅಮೃತ್ ಮಹೋತ್ಸವ: ಭಾರತವು ತನ್ನ 75ನೇ ಸ್ವಾತಂತ್ರ್ಯದ ವರ್ಷವನ್ನು ಪೂರೈಸಿದ ಹಿನ್ನೆಲೆ ಕೇಂದ್ರ ಸರ್ಕಾರವು “ಆಜಾದಿ ಕಾ ಅಮೃತ್ ಮಹೋತ್ಸವ” ಎಂಬ ಕಾರ್ಯಕ್ರಮವನ್ನು ಆರಂಭಿಸಿತು, ಇದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಕೊಡುಗೆ ನೀಡಿದ ಎಲ್ಲರನ್ನು ಗುರುತಿಸಿ ದೇಶಾದ್ಯಂತ ಆಚರಿಸಲಾಯಿತು. ಇದರ ಅಡಿಯಲ್ಲಿ ಆರಂಭಿಸಿದ ಹರ್​ ಘರ್ ತಿರಂಗ ಅಭಿಯಾನವೂ ಯಶಸ್ವಿಯಾಯಿತು. ಅದರಂತೆ ಕೋಟ್ಯಾಂತರ ದೇಶವಾಸಿಗಳ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿತು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY): ಇದು ಕೋವಿಡ್‌ನ ಮೊದಲ ಅಲೆಯ ಸಮಯದಲ್ಲಿ ಸಮಾಜದ ಅಂಚಿನಲ್ಲಿರುವ ಜನರಿಗಾಗಿ ಉಚಿತ ಪಡಿತರವನ್ನು ಕೇಂದ್ರ ಸರ್ಕಾರವು ಘೋಷಿಸಿತು. ನಂತರ ಎರಡನೇ ಅಲೆಯಲ್ಲಿ ಯೋಜನೆಯನ್ನು ವಿಸ್ತರಿಸಿತು. ಈ ಯೋಜನೆಯ ಮೂಲಕ 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಯಿತು.

ಕೋವಿಡ್ ವ್ಯಾಕ್ಸಿನೇಷನ್: ಕೋವಿಡ್-19 ರ ಕಠಿಣ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿತು. ಇದು ವಿಶ್ವದ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಎಂದು ಹೇಳಲಾಗಿದ್ದು, ಭಾರತವು ಇದುವರೆಗೆ 193 ಕೋಟಿ ಡೋಸ್‌ಗಳಷ್ಟು ಕೋವಿಡ್ ಲಸಿಕೆಯನ್ನು ನೀಡಿದೆ. 15 ಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಕೋವಿಡ್ ಲಸಿಕೆಗಳನ್ನು ಹಾಕಲಾಯಿತು. ವಯಸ್ಕ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್‌ಗಾಗಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಕೋವಿಡ್ ಲಸಿಕೆಗಳನ್ನು ಕಡಿಮೆ ಸಮಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೇಶದ ಜನರಿಗೆ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಿಗೂ ಲಸಿಕೆಗಳನ್ನು ಒದಗಿಸಲಾಯಿತು.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ: ಇದು ಭಾರತ ಸರ್ಕಾರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ನಿಧಿಯಾಗಿದ್ದು, ದೇಶದಲ್ಲಿ ಕಡಿಮೆ ಆದಾಯದವರಿಗೆ ಆರೋಗ್ಯದ ರಕ್ಷಣೆಯನ್ನು ನೀಡುವ ಗುರಿಯನ್ನು ಹೊಂದಿದೆ. 22 ಕೋಟಿಗೂ ಹೆಚ್ಚು ಜನರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ ಮತ್ತು ಉಕ್ರೇನ್‌ನಿಂದ ರಕ್ಷಣಾ ಕಾರ್ಯಾಚರಣೆ: ಉಗ್ರ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ದೇವಿ ಶಕ್ತಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ 700ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿತು. ಇನ್ನು, ಯುದ್ಧ ಪೀಡಿತ ಉಕ್ರೇನ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿರುವುದು ಸರ್ಕಾರದ ಮತ್ತೊಂದು ಪ್ರಮುಖ ಸಾಧನೆಯಾಗಿದೆ. ಕೆಲವು ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 23,000 ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರವು ಆಪರೇಷನ್​ ಗಂಗಾ ಹೆಸರಿನಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ನಾಲ್ಕು ಕೇಂದ್ರ ಸಚಿವರನ್ನು ವಿಶೇಷ ಪ್ರತಿನಿಧಿಗಳಾಗಿ ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಕಳುಹಿಸಿತ್ತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿ ಮಾಡಿತು. ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ನಂತೆ ವರ್ಷಕ್ಕೆ 6,000 ರೂ. ಸಹಾಯಧನ ನೀಡುವ ಯೋಜನೆ ಇದಾಗಿದ್ದು, ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಕೃಷಿ ಕಾಯ್ದೆಗಳು: ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು 2020ರಲ್ಲಿ ಪರಿಚಯಿಸಿತು. ಈ ಕಾನೂನುಗಳು ವ್ಯಾಪಾರಿಗಳ ಏಕಸ್ವಾಮ್ಯವನ್ನು ಕೊನೆಗೊಳಿಸುವ ಮತ್ತು ರೈತರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿವೆ ಎಂದು ಸರ್ಕಾರ ಹೇಳಿಕೊಂಡಿತ್ತು. ಕೃಷಿ ಕಾನೂನುಗಳ ಪ್ರಕಾರ, ತಮ್ಮ ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿರ್ಬಂಧಗಳಿಂದ ರೈತರನ್ನು ಮುಕ್ತಗೊಳಿಸಲು ಮತ್ತು ಅವರ ಕೃಷಿ ಉತ್ಪನ್ನಗಳನ್ನು ಅವರಿಗೆ ಬೇಕಾದ ಬೆಲೆಗೆ ಮಾರಾಟ ಮಾಡಬಹುದು, ಇದರಿಂದಾಗಿ ಉತ್ತಮ ಗ್ರಾಮೀಣ ಆದಾಯಕ್ಕೆ ಕಾರಣವಾಗುತ್ತದೆ. ಆದರೆ ನಿರಂತರ ಪ್ರತಿಭಟನೆಗಳು ನಡೆದ ಹಿನ್ನೆಲೆ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ಹಿಂಪಡೆಯಿತು.

ಪ್ರಧಾನ ಮಂತ್ರಿ ಆವಾಸ್ ಯೋಜನೆ: ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುವಂತೆ ಮಾಡಲು ಮೋದಿ ಸರ್ಕಾರವು 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಮಾರ್ಚ್ 2020 ರ ಅಂತ್ಯದವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ 2 ಕೋಟಿಗೂ ಹೆಚ್ಚು ಜನರಿಗೆ ಮನೆಗಳನ್ನು ಒದಗಿಸಲಾಗಿದೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ: ಎಲ್ಲಾ ಭಾರತೀಯ ನಾಗರಿಕರಿಗೆ ಈ ಯೋಜನೆ ಮುಕ್ತವಾಗಿದೆ. ಶೂನ್ಯ ನಿರ್ವಹಣೆ ಮೊತ್ತದೊಂದಿಗೆ ಬ್ಯಾಂಕ್ ಖಾತೆಗಳು, ಹಣ ರವಾನೆ, ವಿಮಾ ಸೇವೆಗಳು, ಬ್ಯಾಂಕ್ ಖಾತೆಗಳು, ಕ್ರೆಡಿಟ್ ಮತ್ತು ಪಿಂಚಣಿಗಳಂತಹ ಕೈಗೆಟುಕುವ ಹಣಕಾಸು ಸೇವೆಗಳನ್ನು ಲಭ್ಯವಾಗುವಂತೆ ಮಾಡುವುದು ಇದರ ಗುರಿಯಾಗಿದೆ.

ಶ್ರಮೇವ್ ಜಯತೆ ಯೋಜನೆ: ಕಾರ್ಮಿಕರ ಹಕ್ಕುಗಳಿಗೆ ಮೀಸಲಾದ ಯೋಜನೆ ಇದಾಗಿದ್ದು, ಇದನ್ನು 2014ರ ಅಕ್ಟೋಬರ್ 16 ರಂದು ಪ್ರಾರಂಭಿಸಲಾಯಿತು.

ಸ್ವಚ್ಛ ಭಾರತ ಅಭಿಯಾನ: 2014ರಲ್ಲಿ ಮಹಾತ್ಮ ಗಾಂಧಿಯವರ ಜನ್ಮದಿನದ 150 ನೇ ವಾರ್ಷಿಕೋತ್ಸವದಂದು ಸ್ವಚ್ಛ ಭಾರತ ಅಭಿಯಾನ (“ಸ್ವಚ್ಛ ಭಾರತ”) ಅಭಿಯಾನವನ್ನು ಪ್ರಮುಖ ಆರೋಗ್ಯ ಅಂಶವಾಗಿ ನೈರ್ಮಲ್ಯವನ್ನು ಉತ್ತೇಜಿಸಲು ಪ್ರಾರಂಭಿಸಲಾಯಿತು. ಬಯಲು ಮಲವಿಸರ್ಜನೆ ಮತ್ತು ಕೈಯಿಂದ ಕಸ ತೆಗೆಯುವುದನ್ನು ತೊಡೆದುಹಾಕುವುದು ಮತ್ತು ತ್ಯಾಜ್ಯ ನಿರ್ವಹಣೆಯ ಅಭ್ಯಾಸಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.

ಮೇಕ್ ಇನ್ ಇಂಡಿಯಾ ಅಭಿಯಾನ: ಭಾರತೀಯರ ಅನನ್ಯ ಪ್ರತಿಭೆ ಮತ್ತು ಸೃಜನಶೀಲತೆಗೆ ದೇಶವನ್ನು ಜಾಗತಿಕ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಮೇಕ್ ಇನ್ ಇಂಡಿ ಅಭಿಯಾನವನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿತು. ಇದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಅಭಿಯಾನಗಳಲ್ಲಿ ಒಂದಾಗಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ): ಈ ವ್ಯವಸ್ಥೆ ಅನುಷ್ಠಾನವು ಒಂದು ಸವಾಲಿನ ಕೆಲಸವೇ ಆಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರವು 2017ರ ಜು.1ರಿಂದ ತೆರಿಗೆ ಸುಧಾರಣೆಯ ಜಿಎಸ್‌ಟಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಇದರೊಂದಿಗೆ 17 ಬಗೆಯ ಪರೋಕ್ಷ ತೆರಿಗೆಗಳು ಜಿಎಸ್‌ಟಿ ಅಡಿ ಒಂದೇ ತೆರಿಗೆಯಾಗಿ ಮಾರ್ಪಟ್ಟವು.

ಸೈನಿಕ ಕಾರ್ಯಾಚರಣೆ: ಹಿಂದೆಲ್ಲಾ ಪದೇ ಪದೇ ಭಯೋತ್ಪಾದಕ ದಾಳಿಗಳು ನಡೆದು ಜನರು ಆತಂಕದಲ್ಲಿ ದಿನ ದೂಡುವಂತಾಗಿತ್ತು. ಆದರೆ ಮೋದಿ ಅವರು ಅಧಿಕಾರಕ್ಕೇರಿದ ಉಗ್ರರ ಉಪಠಳ ನಿಗ್ರಹಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು. ಉಗ್ರರು ದಾಳಿ ನಡೆಸಿದರೆ ಅವರಿಗೆ ತಿರುಗೇಟು ನೀಡುವ ಪರಿಪಾಠ ಆರಂಭವಾಯಿತು. ಪಾಕಿಸ್ತಾನ ಮೇಲೆ ಸರ್ಜಿಕಲ್‌ ಸ್ಟ್ರೈಕ್ ಹಾಗೂ ವಾಯು ದಾಳಿ ನಡೆಸಿತು. ಇನ್ನು ಗಡಿಯಲ್ಲಿ ತಂಟೆ ತೆಗೆದ ಚೀನಾವನ್ನೂ ಮೋದಿ ರಾಜತಾಂತ್ರಿಕವಾಗಿ ಮಣಿಸಿದರು.

ಆತ್ಮ ನಿರ್ಭರ ಭಾರತ: ವಿದೇಶಗಳಲ್ಲಿರುವ ಕಂಪನಿಗಳಿಗೆ ಜೋತುಬೀಳುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ದೇಶದಲ್ಲೇ ಉತ್ಪಾದನೆಗೆ ಪ್ರೋತ್ಸಾಹಿಸಲು ಆತ್ಮ ನಿರ್ಭವರವನ್ನು ಜನತೆಗೆ ಪರಿಚಯ ಮಾಡಿಕೊಟ್ಟರು. ಅದರಂತೆ ದೇಶದಲ್ಲೇ ವಿವಿಧ ಉತ್ಪನ್ನಗಳನ್ನು ತಯಾರಿಸಿದರೆ ಸಬ್ಸಿಡಿ ನೀಡಲಾಗುತ್ತದೆ.

ನೀತಿ ಆಯೋಗ ರಚನೆ: ನೆಹರು ಕಾಲದ ಯೋಜನಾ ಆಯೋಗವನ್ನು ಅಧಿಕಾರಕ್ಕೇರಿದ ಹೊಸತರಲ್ಲಿ ಮೋದಿ ಅವರು ರದ್ದುಗೊಳಿಸಿ ಯೋಜನೆಗಳ ಜಾರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಮಾನ ಅವಕಾಶ ಕಲ್ಪಿಸುವ ‘ನೀತಿ ಆಯೋಗ’ ರಚನೆ ಮಾಡಿದರು.

ತ್ರಿವಳಿ ತಲಾಖ್​ ರದ್ದು: ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್​ನಿಂದ ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2019ರ ಜು.26ರಂದು ಮುಸ್ಲಿಂ ಮಹಿಳೆಯರ ವಿವಾಹ ಕುರಿತ ಹಕ್ಕುಗಳ ರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಿತು. ತನ್ಮೂಲಕ 2019ರ ಆ.1ರಿಂದ ಯಾವುದೇ ರೀತಿಯಲ್ಲಿ ತ್ರಿವಳಿ ತಲಾಖ್‌ ಮುಖಾಂತರ ನೀಡಲಾಗುವ ವಿಚ್ಛೇದನವು ಅಕ್ರಮವೆಂದು ಪರಿಗಣಿಸಲಾಯಿತು. ಕಾಯ್ದೆಯು ಸಂತ್ರಸ್ತ ಮಹಿಳೆಯರು ತಮ್ಮ ಪತಿ ಅಥವಾ ಪತಿಯ ಕುಟುಂಬದಿಂದ ನೆರವು ಪಡೆಯಲು ಅನುಕೂಲ ಕಲ್ಪಿಸಿತು.

ನೋಟ್ ಬ್ಯಾನ್: ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಿಸುವುದು ಮತ್ತು ಕಪ್ಪು ಹಣವನ್ನು ಹೊರಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನೋಟ್ (1ಸಾವಿರ ಮತ್ತು 500ರೂಪಾಯಿ) ಬ್ಯಾನ್ ಮಾಡಿತು. ಈಗ ಡಿಜಿಟಲ್ ಪಾವತಿ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದು, ಎರಡೂ ಉದ್ದೇಶಗಳು ಬಹುಪಾಲು ಈಡೇರಿವೆ.

ಉಚಿತ ಗ್ಯಾಸ್ ಸಂಪರ್ಕ: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಅನುಕೂಲವುಳ್ಳವರು ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟರು. ಅದರಂತೆ ಕೋಟ್ಯಂತರ ಜನರು ತ್ಯಜಿಸಿದ್ದರು. ಈ ಹಣದಲ್ಲಿ ಬಡ ಮಹಿಳೆಯರಿಗೆ ಉಜ್ವಲಾ ಹೆಸರಿನಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದರು.

ಬೇಟಿ ಬಚಾವೋ ಬೇಟಿ ಪಢಾವೋ: ಕ್ಷೀಣಿಸುತ್ತಿರುವ ಮಕ್ಕಳ ಲಿಂಗ ಅನುಪಾತ (CSR) ಮತ್ತು ನಿರ್ಣಾಯಕ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೆಣ್ಣು ಶಿಶುಹತ್ಯೆಗಳನ್ನು ಗಮನಿಸಿದ ನಂತರ, 2015ರ ಜನವರಿ 22ರಂದು ಸಮಸ್ಯೆಯನ್ನು ಪರಿಹರಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯನ್ನು ಘೋಷಿಸಲಾಯಿತು. 2018ರ ಮಾರ್ಚ್ 8 ರಂದು ಮಹಿಳಾ ದಿನದಂದು ಪ್ರಧಾನಿ ಮೋದಿಯವರಿಂದ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದ ವಿಸ್ತರಣೆಯ ಭಾಗವಾಗಿ ರಾಷ್ಟ್ರೀಯ ಪೋಷಣೆ ಮಿಷನ್ ಅನ್ನು ಸಹ ಪ್ರಾರಂಭಿಸಲಾಯಿತು.

ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ: ದೇಶದ ಡಿಜಿಟಲ್ ಮೂಲಸೌಕರ್ಯವನ್ನು ಸುಧಾರಿಸಲು, ಭಾರತವನ್ನು ವಿಶ್ವದ ಮಾನವ ಸಂಪನ್ಮೂಲ ಬಂಡವಾಳವನ್ನಾಗಿ ಮಾಡಲು ಮತ್ತು EWS ವರ್ಗಕ್ಕೆ ಅವಕಾಶಗಳನ್ನು ನೀಡಲು ಮೋದಿ ಸರ್ಕಾರ, ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮಿಷನ್‌ ಅನ್ನು ಪ್ರಾರಂಭಿಸಿತು. ಸ್ಮಾರ್ಟ್ ಸಿಟಿ ಮಿಷನ್, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, ಹೆರಿಟೇಜ್ ಸಿಟಿ ಡೆವಲಪ್‌ಮೆಂಟ್ ಮತ್ತು ಆಗ್ಮೆಂಟೇಶನ್ ಯೋಜನೆಗಳನ್ನು ಕೂಡ ಜಾರಿ ಮಾಡಲಾಗಿದೆ.

ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನ: ವಿವಿಧ ಕ್ಷೇತ್ರಗಳಲ್ಲಿ ಯುವ ವ್ಯವಹಾರಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿತು.

ರಾಷ್ಟ್ರೀಯ ಜಲಮಾರ್ಗ ಕಾಯ್ದೆ-2016: ಭಾರತದಲ್ಲಿ 111 ರಾಷ್ಟ್ರೀಯ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಮೋದಿ ಸರ್ಕಾರವು ರಾಷ್ಟ್ರೀಯ ಜಲಮಾರ್ಗ ಕಾಯ್ದೆ- 2016 ಅನ್ನು ಸಹ ಅಂಗೀಕರಿಸಿತು.

ಖೇಲೋ ಇಂಡಿಯಾ 2017-18 ಯೋಜನೆ: ದೇಶದ ಯುವ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಮತ್ತು ಅಂದಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಖೇಲೋ ಇಂಡಿಯಾ 2017-18  ಯೋಜನೆಯನ್ನು ಪ್ರಾರಂಭಿಸಿತು. ಯುವ ಕ್ರೀಡಾ ಪಟುಗಳಿಗೆ ತಲುಪಲು ಆನ್‌ಲೈನ್ ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹುಡುಕಾಟ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿತು.

ಶಾದಿ ಶಗುನ್ ಯೋಜನೆ: ಮುಸ್ಲಿಂ ಮಹಿಳೆಯರ ಪಾಲಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ರದ್ದತಿ ನಂತರ ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಶಾದಿ ಶಗುನ್ ಯೋಜನೆಯನ್ನು ಜಾರಿಗೊಳಿಸಿದರು. ಮುಸ್ಲಿಂ ಹುಡುಗಿಯರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ 51000 ರೂಪಾಯಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಜಲ ಜೀವನ್ ಮಿಷನ್-JJM: 2019ರ ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ಆರಂಭಿಸಿದ ಜಲ ಜೀವನ್ ಮಿಷನ್ (ಜೆಜೆಎಂ) ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. 2024 ರ ವೇಳೆಗೆ ದೇಶದ ಪ್ರತಿಯೊಂದು ಗ್ರಾಮೀಣ ಮನೆಗಳಿಗೂ ‘ಫಂಕ್ಷನಲ್ ಹೌಸ್‌ಹೋಲ್ಡ್ ಟ್ಯಾಪ್ ಕನೆಕ್ಷನ್ಸ್’ (FHTC) ಒದಗಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP): ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ 2020ರ ಜು.29ರಂದು ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ಜಾರಿ ಮಾಡಿತು. 2026ರ ವೇಳೆಗೆ ಈ ನೀತಿ ಸಂಪೂರ್ಣವಾಗಿ ಜಾರಿಯಾಗಲಿದೆ.

ಅಧಿಕಾರಾವಧಿಯಲ್ಲಿ ಮೋದಿ ಅವರು ಕೃಷಿ ಕಾಯ್ದೆ ಸೇರಿದಂತೆ ಕೆಲವೊಂದು ವಿಚಾರದಲ್ಲಿ ಹಿನ್ನೆಡೆಯಾಗಿರುವುದು ಬಿಟ್ಟರೆ ಉಳಿದೆಲ್ಲಾ ವಿಚಾರದಲ್ಲಿ ಏಳುಗಳನ್ನೇ ಕಂಡಿದ್ದಾರೆ. ಇವರು ರಾಜಕೀಯವಾಗಿ ಕಾಲಿಟ್ಟ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಸಾಧಿಸಿ ಅಧಿಕಾರವನ್ನು ಹಿಡಿದಿದೆ. ಸತತ ಎರಡನೇ ಬಾರಿಗೆ ಅಸ್ಸಾಂನಲ್ಲಿ ಸರ್ಕಾರ ರಚಿಸುವುದು ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಯಶಸ್ಸನ್ನು ಕಂಡಿದೆ. ಮಣಿಪುರ, ಉತ್ತರಾಖಂಡ ಮತ್ತು ಗೋವಾದಲ್ಲಿ ಮತ್ತೆ ಸರ್ಕಾರ ರಚಿಸಿದ್ದು, ಉತ್ತರಪ್ರದೇಶದಲ್ಲಿ ಪ್ರಚಂಡ ಗೆಲುವು ದಾಖಲಿಸಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷದ ನೆಲೆ ತೀರ ಕೆಳಗಿದೆ. ಆದರೆ ಪುದುಚೇರಿಯಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳವನ್ನು ಗೆಲ್ಲುವ ತವಕದಲ್ಲಿದ್ದ ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಮೂರು ಸ್ಥಾನಗಳಿಂದ 75 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಅದಾಗ್ಯೂ 2024ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ