Rajouri Terror Attack: ರಜೌರಿಯಲ್ಲಿ ಉಗ್ರರ ಅಟ್ಟಹಾಸ; ದಾಳಿ ನಡೆದ ಸ್ಥಳಕ್ಕೆ ಎನ್ಐಎ ಅಧಿಕಾರಿಗಳ ಭೇಟಿ
ಎನ್ಐಎ ತಂಡ ಕೂಡ ನಾಗರಿಕರನ್ನು ಹತ್ಯೆಗೈದ ದಾಳಿಯ ಸ್ಥಳವಾದ ಡ್ಯಾಂಗ್ರಿ ಗ್ರಾಮವನ್ನು ತಲುಪಿದೆ. ಆದರೆ, ಈ ಹತ್ಯೆಯ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ಶ್ರೀನಗರ: ಕಳೆದ 2 ದಿನಗಳಲ್ಲಿ ಜಮ್ಮು ಕಾಶ್ಮೀರದ ರಜೌರಿಯಲ್ಲಿ (Rajouri) ಉಗ್ರರ ದಾಳಿಯಲ್ಲಿ (Terrorist Attack) ಮೃತರಾದ 6 ನಾಗರಿಕರ ಅಂತಿಮ ಸಂಸ್ಕಾರಕ್ಕಾಗಿ ಕೆಲವು ಉನ್ನತ ಅಧಿಕಾರಿಗಳು ಸೇರಿದಂತೆ ನೂರಾರು ಜನರು ರಜೌರಿ ಜಿಲ್ಲೆಯ ಡ್ಯಾಂಗ್ರಿ ಗ್ರಾಮದ ಸ್ಮಶಾನದಲ್ಲಿ ಜಮಾಯಿಸಿದ್ದರು. ಈ ವೇಳೆ ಎನ್ಐಎ (NIA) ತಂಡ ಕೂಡ ನಾಗರಿಕರನ್ನು ಹತ್ಯೆಗೈದ ದಾಳಿಯ ಸ್ಥಳವಾದ ಡ್ಯಾಂಗ್ರಿ ಗ್ರಾಮವನ್ನು ತಲುಪಿದೆ. ಆದರೆ, ಈ ಹತ್ಯೆಯ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿತ್ತು. ಇದಾದ ಬಳಿಕ ಅದೇ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸಿ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಭಾನುವಾರ ಡ್ಯಾಂಗ್ರಿ ಪ್ರದೇಶದಲ್ಲಿ 3 ಮನೆಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದರು. ಇಬ್ಬರು ಭಯೋತ್ಪಾದಕರು ಅಪ್ಪರ್ ಡ್ಯಾಂಗ್ರಿ ಪ್ರದೇಶದಲ್ಲಿ 3 ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.
ಇದನ್ನೂ ಓದಿ: Rajouri Terror Attack: ರಜೌರಿಯಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 4ಕ್ಕೆ ಏರಿಕೆ, 9 ಮಂದಿಗೆ ಗಾಯ
ಭಾನುವಾರ ಸಂಜೆ, ಭಯೋತ್ಪಾದಕರು ರಜೌರಿ ಜಿಲ್ಲೆಯ 3 ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಿಂದ ನಾಲ್ವರು ನಾಗರಿಕರು ಸಾವನ್ನಪ್ಪಿದರು. ಸೋಮವಾರ ಜಮ್ಮು ಮತ್ತು ಕಾಶ್ಮೀರದ ಡ್ಯಾಂಗ್ರಿ ಗ್ರಾಮದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದವರೊಬ್ಬರ ಮನೆಯ ಬಳಿ ಬಾಂಬ್ ಸ್ಫೋಟದಲ್ಲಿ 4 ವರ್ಷದ ಮಗು ಸಾವನ್ನಪ್ಪಿತ್ತು. ಈ ವೇಳೆ 7 ಜನರು ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಂದ ನಾಲ್ವರ ಹತ್ಯೆ ಬೆನ್ನಲ್ಲೇ ರಜೌರಿಯಲ್ಲಿ ಬಾಂಬ್ ಸ್ಫೋಟ; ಒಂದು ಮಗು ಸಾವು, ಐವರಿಗೆ ಗಾಯ
ಕೇವಲ 14 ಗಂಟೆಗಳ ಅಂತರದಲ್ಲಿ ಈ ಘಟನೆಗಳು ನಡೆದಿದ್ದು, ರಜೌರಿಯಲ್ಲಿ ಸಂಪೂರ್ಣ ಬಂದ್ ಘೋಷಿಸಲಾಗಿತ್ತು. ರಜೌರಿ ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ, ರಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ನಾಗರಿಕರ ಮೇಲಿನ 2 ದಾಳಿಯ ಅಪರಾಧಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ತೊಡೆದುಹಾಕಲು ನರೇಂದ್ರ ಮೋದಿ ಬದ್ಧರಾಗಿದ್ದಾರೆ ಎಂದು ಸಾಂತತ್ವನ ಹೇಳಿದ್ದರು.