ದೆಹಲಿ ಜನವರಿ 20: ಅಯೋಧ್ಯೆಯ (Ayodha) ರಾಮ ಮಂದಿರ (Ram mandir) ‘ಪ್ರಾಣ ಪ್ರತಿಷ್ಠಾ’ದ ಸಂದರ್ಭದಲ್ಲಿ ಜನವರಿ 22 ರಂದು ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನದ ರಜೆಯ ಅಧಿಕೃತ ಆದೇಶಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ (V K Saxena) ಶನಿವಾರ ಅನುಮೋದನೆ ನೀಡಿದ್ದಾರೆ. ರಾಜ್ ನಿವಾಸ್ ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಕಾರಣ ಜನವರಿ 22 ರಂದು ಎಲ್ಲಾ ದೆಹಲಿ ಸರ್ಕಾರಿ ಕಚೇರಿಗಳು, ನಾಗರಿಕ ಸಂಸ್ಥೆಗಳು ಮತ್ತು ಇತರ ಉದ್ಯಮಗಳಿಗೆ ಅರ್ಧ ದಿನದ ರಜೆಯನ್ನು ಎಲ್-ಜಿ ಅನುಮೋದಿಸಿದ್ದಾರೆ.
ದೆಹಲಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ಮುಚ್ಚಲ್ಪಡುತ್ತವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆದೇಶ ಹೊರಡಿಸಿದ್ದಾರೆ.
ಶುಕ್ರವಾರ, ಮಹಾರಾಷ್ಟ್ರದ ಶಿವಸೇನಾ-ಬಿಜೆಪಿ ಸರ್ಕಾರವು ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ದೃಷ್ಟಿಯಿಂದ ಜನವರಿ 22 ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆಯನ್ನು ಘೋಷಿಸಿತು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಜನವರಿ 22 ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ನಿಯೋಜಿಸಿದ ಅಧಿಕಾರದ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರವು ರಜೆಯನ್ನು ಘೋಷಿಸಿದೆ ಎಂದು ಅಧಿಸೂಚನೆ ತಿಳಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರವು ಈಗಾಗಲೇ ರಾಮಮಂದಿರ ಉದ್ಘಾಟನೆಯಂದು ದೇಶಾದ್ಯಂತ ತನ್ನ ಎಲ್ಲಾ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಅರ್ಧ ದಿನದ ರಜೆ ಘೋಷಿಸಿದೆ.
ಇದೇ ಸಂದರ್ಭದಲ್ಲಿ ಮಧ್ಯಪ್ರದೇಶ ಸರ್ಕಾರವು ರಾಜ್ಯದ ಎಲ್ಲಾ ಕಚೇರಿಗಳಿಗೆ ಅರ್ಧ ದಿನ ಮತ್ತು ಜನವರಿ 22 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಇಡೀ ದೇಶವು ಜನವರಿ 22 ರಂದು ರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಆಚರಿಸಲಿದೆ. ಹಾಗಾಗಿ ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳು ಮತ್ತು ಸಂಸ್ಥೆಗಳು ಮಧ್ಯಾಹ್ನ 2.30 ರವರೆಗೆ ಮುಚ್ಚಲ್ಪಡುತ್ತವೆ, ಇದರಿಂದಾಗಿ ಜನರು ಆಚರಣೆಯಲ್ಲಿ ಭಾಗವಹಿಸಬಹುದು” ಎಂದು ಗುರುವಾರ ತಡರಾತ್ರಿ ಹೊರಡಿಸಿದ ಅಧಿಕೃತ ಸರ್ಕಾರಿ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: In Pics: ತಮಿಳುನಾಡಿನ ಶ್ರೀರಂಗಂ, ರಾಮೇಶ್ವರಂ ದೇವಾಲಯಗಳಲ್ಲಿ ಮೋದಿ ಪ್ರಾರ್ಥನೆ
ರಾಜ್ಯದ ಶಾಲೆ ಮತ್ತು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಇತರ ಎರಡು ಪ್ರತ್ಯೇಕ ಅಧಿಸೂಚನೆಗಳಲ್ಲಿ, ಮಧ್ಯಪ್ರದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಾಮಮಂದಿರ ಉದ್ಘಾಟನೆಯ ದಿನದಂದು ರಜೆ ಘೋಷಿಸಲಾಗಿದೆ. ಹಲವಾರು ಇತರ ರಾಜ್ಯಗಳು ಜನವರಿ 22ರಂದು ಸಾರ್ವಜನಿಕ ರಜೆ ಅಥವಾ ಅರ್ಧ ದಿನವನ್ನು ಘೋಷಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Sat, 20 January 24