Ram Mandir Inauguration: ಅಯೋಧ್ಯೆಗೆ ಬರುವ ಗಣ್ಯ ಅತಿಥಿಗಳಿಗೆ ನೀಡುವ ಆ ಪವಿತ್ರವಾದ ಉಡುಗೊರೆ ಏನು ಗೊತ್ತಾ?

|

Updated on: Jan 14, 2024 | 3:07 PM

ಅಯೋಧ್ಯೆಯ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದೇಶಾದ್ಯಂತ 11 ಸಾವಿರಕ್ಕೂ ಹೆಚ್ಚು ಅತಿಥಿಗಳನ್ನು ಟ್ರಸ್ಟ್‌ನಿಂದ ಆಹ್ವಾನಿಸಲಾಗಿದ್ದು, ಅತಿಥಿಗಳು ಸದಾ ಸ್ಮರಿಸುವಂತಹ ಉಡುಗೊರೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.

Ram Mandir Inauguration: ಅಯೋಧ್ಯೆಗೆ ಬರುವ ಗಣ್ಯ ಅತಿಥಿಗಳಿಗೆ ನೀಡುವ ಆ ಪವಿತ್ರವಾದ ಉಡುಗೊರೆ ಏನು ಗೊತ್ತಾ?
Ram Mandir Inauguration
Follow us on

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜನವರಿ 22 ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಸಾವಿರಾರು ಗಣ್ಯ ಅತಿಥಿಗಳನ್ನು ಆಹ್ವಾನಿಸಲಾಗಿದೆ . ಈ ಐತಿಹಾಸಿಕ ಸಂದರ್ಭದಲ್ಲಿ ಎಲ್ಲಾ ಆಹ್ವಾನಿತ ಅತಿಥಿಗಳನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಲಾಗಿದ್ದು, ಇದರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಅತಿಥಿಗಳಿಗೆ ಟ್ರಸ್ಟ್‌ನಿಂದ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಮಾಹಿತಿ ಪ್ರಕಾರ, ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ರಾಮಮಂದಿರದ ಅಡಿಪಾಯದ ಉತ್ಖನನದ ಸಮಯದಲ್ಲಿ ತೆಗೆದ ರಾಮಜನ್ಮಭೂಮಿಯ ಮಣ್ಣನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ನೀಡಲಾಗುವುದು. ಇದಲ್ಲದೆ ದೇಸಿ ತುಪ್ಪದಿಂದ ಮಾಡಿದ ವಿಶೇಷ ಮೋತಿಚೂರು ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆ ರಾಮಮಂದಿರದ 15 ಮೀಟರ್ ಉದ್ದದ ಚಿತ್ರವನ್ನು ಸೆಣಬಿನ ಚೀಲದಲ್ಲಿ ಪ್ಯಾಕ್​​ ಮಾಡಿ ನೀಡಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ. ಕೆಲವು ಕಾರಣಗಳಿಂದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಇಲ್ಲಿಗೆ ಬರಲು ಸಾಧ್ಯವಾಗದ ಅಂತಹ ಆಹ್ವಾನಿತರು ಇಲ್ಲಿಗೆ ಬಂದಾಗಲೆಲ್ಲಾ ಈ ಉಡುಗೊರೆಯನ್ನು ನೀಡುವ ಸಾಧ್ಯತೆಯೂ ಇದೆ .

ಇದನ್ನೂ ಓದಿ: ಅಯೋಧ್ಯೆ ತಲುಪುವುದರಿಂದ ಹಿಡಿದು ಶ್ರೀರಾಮನ ದರ್ಶನದವರೆಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇವಸ್ಥಾನದ ಆವರಣದಲ್ಲಿ 7500 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ. ವಾರಣಾಸಿಯ ಅರ್ಚಕರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರೊಂದಿಗೆ ಕಾರ್ಯಕ್ರಮದ ಸಮಯದಲ್ಲಿ, ದೇವಾಲಯದಲ್ಲಿ ನಿರ್ಮಿಸಲಾದ ಐದು ಮಂಟಪಗಳಲ್ಲಿ ವಿವಿಧ ಸಾಮಾಜಿಕ ಸಮುದಾಯಗಳ 15 ಜೋಡಿಗಳು ಇರುತ್ತಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಇಡೀ ಜಗತ್ತಿಗೆ ಸಂದೇಶ ನೀಡಲಿರುವ ಪ್ರಧಾನಿ ಮೋದಿಯವರ ಭಾಷಣಕ್ಕೂ ಸ್ಥಳವನ್ನು ಗುರುತಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ