
ಮುಂಬೈ: ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಯೋಗ ಗುರು ಬಾಬಾ ರಾಮದೇವ್ (Baba Ramdev) ಇದೀಗ ಕ್ಷಮೆ ಯಾಚಿಸಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ (Pune) ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬಾಬಾ ರಾಮ್‌ದೇವ್, ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳಿದ್ದರು. ಅವರು ಈ ಹೇಳಿಕೆ ನೀಡಿದಾಗ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ (Amrita Fadnavis) ಕೂಡ ಆ ವೇದಿಕೆಯಲ್ಲಿದ್ದರು.
ಆ ಹೇಳಿಕೆಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ವಿರೋಧ ವ್ಯಕ್ತಪಡಿಸಿ ನೋಟಿಸ್ ನೀಡಿದ್ದರು. ಶಿವಸೇನೆ ಸಂಸದ ಸಂಜಯ್ ರಾವತ್ ಕೂಡ ವಾಗ್ದಾಳಿ ನಡೆಸಿದ್ದರು. ಬಳಿಕ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಮಹಿಳೆಯರ ವಿರುದ್ಧದ ರಾಮದೇವ್ ಹೇಳಿಕೆಗಳನ್ನು ಟೀಕಿಸಿದ್ದರು. ಅದಾದ ಬಳಿಕ ಇಂದು ಬಾಬಾ ರಾಮದೇವ್ ತಮ್ಮ ಹೇಳಿಕೆಯಿಂದ ಯಾರ ಮನಸಿಗಾದರೂ ನೋವಾಗಿದ್ದರೆ ಕ್ಷಮಿಸುವಂತೆ ಮನವಿ ಮಾಡಿದ್ದಾರೆ.
ಪತಂಜಲಿ ಯೋಗಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ಥಾಣೆಯಲ್ಲಿ ಆಯೋಜಿಸಿದ್ದ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಾಬಾ ರಾಮ್‌ದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಅವರ ಪಕ್ಕದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಇದ್ದರು. ಬಾಬಾ ರಾಮದೇವ್ ಅವರ ಈ ಹೇಳಿಕೆಯಿಂದ ವೇದಿಕೆಯಲ್ಲಿದ್ದವರು ಮುಜುಗರಕ್ಕೀಡಾಗಿದ್ದರು.
महाराष्ट्र के उपमुख्यमंत्री जी की पत्नी के सामने स्वामी रामदेव द्वारा महिलाओं पर की गई टिप्पणी अमर्यादित और निंदनीय है। इस बयान से सभी महिलाएँ आहत हुई हैं, बाबा रामदेव जी को इस बयान पर देश से माफ़ी माँगनी चाहिए! pic.twitter.com/1jTvN1SnR7
— Swati Maliwal (@SwatiJaiHind) November 26, 2022
ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗಳಿಂದ ಮಹಾರಾಷ್ಟ್ರದಲ್ಲಿ ಆಕ್ರೋಶದ ಅಲೆ ಎದ್ದಿರುವಾಗ ರಾಮ್‌ದೇವ್ ಬಾಬಾ ಈ ರೀತಿ ಅಸಂಬದ್ಧವಾಗಿ ಮಾತನಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಂಡು ಟ್ರೋಲ್ ಮಾಡಲಾಗಿತ್ತು.
ಇದನ್ನೂ ಓದಿ: Baba Ramdev: ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗೇ ಕಾಣುತ್ತಾರೆ; ಮತ್ತೆ ಟ್ರೋಲ್ ಆದ ಬಾಬಾ ರಾಮದೇವ್
ಈ ಕಾರ್ಯಕ್ರಮದಲ್ಲಿ ಮಹಿಳೆಯರು ಯೋಗಕ್ಕಾಗಿ ಉಡುಪುಗಳನ್ನು ತಂದಿದ್ದರು. ಕೆಲವರು ಸೀರೆಯುಟ್ಟು ಬಂದಿದ್ದರು. ಇನ್ನು ಕೆಲವರಿಗೆ ಯೋಗದ ಬಳಿಕ ಸೀರೆಯುಡಲು ಸಮಯ ಆಗಿರಲಿಲ್ಲವಾದ್ದರಿಂದ ಯೋಗದ ಡ್ರೆಸ್ನಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಹಿನ್ನೆಲೆಯಲ್ಲಿ ತಮಾಷೆಯಾಗಿ ಮಾತನಾಡಿದ ಬಾಬಾ ರಾಮದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದಿದ್ದರು.