ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ಬಂಧನ
Ratan Lal | Gyanvapi Mosque: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ 'ಶಿವಲಿಂಗ'ದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿ (Gyanvapi Mosque) ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ದ (Shivling) ಬಗೆಗಿನ ಹೇಳಿಕೆಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ (Ratan Lal) ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಈ ಬಗ್ಗೆ ದೆಹಲಿ ಉತ್ತರ ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದು, ಭಾರತೀಯ ದಂಡ ಸಂಹಿತೆ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ದುಷ್ಪರಿಣಾಮ ಬೀರುವ ಕೃತ್ಯಗಳನ್ನು ನಡೆಸುವುದು) ಮತ್ತು 295ಎ (ಉದ್ದೇಶಪೂರ್ವಕವಾಗಿ ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವುದು) ಕಾಯ್ದೆಗಳ ಅಡಿಯಲ್ಲಿ ಲಾಲ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
The arrest of Dr. Ratan Lal, Prof of History at Hindu College, DU, is effective from May 20, under FIR no. 50/22 & under sections 153A/295A IPC: Cyber Police Station, North District
ಇದನ್ನೂ ಓದಿ— ANI (@ANI) May 20, 2022
ರತನ್ ಲಾಲ್ ಪರ ವಕೀಲರು ಮಾತನಾಡಿ, ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ‘‘ಈ ಬಂಧನವು ಸುಪ್ರೀಂ ಕೋರ್ಟ್ನ ತೀರ್ಪಾದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿನ ಸೆಕ್ಷನ್ 3 ರ ಉಲ್ಲಂಘನೆಯಾಗಿದೆ. ನಾವು ರತನ್ ಲಾಲ್ ಅವರ ಮುಗ್ಧತೆಯನ್ನು ಸಾಬೀತುಪಡಿಸುತ್ತೇವೆ’’ ಎಂದು ರತನ್ ಲಾಲ್ ಪರ ವಕೀಲ ಮೆಹಮೂದ್ ಪ್ರಾಚಾ ಎಎನ್ಐಗೆ ತಿಳಿಸಿದ್ದಾರೆ. ರತನ್ ಅವರ ಬಂಧನ ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮತ್ತು ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್‌ಎ) ಕಾರ್ಯಕರ್ತರು ದೆಹಲಿ ಉತ್ತರ ಸೈಬರ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
A false case was registered against him (Prof Ratan Lal). The FIR & complaint doesn’t mention one thing that can be termed as a cognizable offence. Despite that, arrests cannot be made u/s 153A & 295A IPC, police don’t have that power: Mehmood Pracha, advocate of Ratan Lal pic.twitter.com/NKKiUvT3D9
— ANI (@ANI) May 20, 2022
ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ, ಲಾಲ್ ಇತ್ತೀಚೆಗೆ “ಶಿವಲಿಂಗದ ಮೇಲೆ ಅವಹೇಳನಕಾರಿ, ಪ್ರಚೋದಿಸುವ ಮತ್ತು ಪ್ರಚೋದನಕಾರಿ ಟ್ವೀಟ್” ಅನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದರು.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಿಕ್ಕಿರುವ ‘ಶಿವಲಿಂಗ’ದ ವಿಚಾರದಲ್ಲಿ ರತನ್ ಲಾಲ್ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದ್ದು, ಇದು ಅತ್ಯಂತ ಸೂಕ್ಷ್ಮ ಸ್ವರೂಪದ್ದಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ವಕೀಲರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಹಿಂದೆ ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದ ಲಾಲ್, ‘‘ಭಾರತದಲ್ಲಿ, ನೀವು ಯಾವುದೇ ವಿಷಯದ ಬಗ್ಗೆ ಮಾತನಾಡಿದರೆ, ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನಲ್ಲ. ನಾನು ಇತಿಹಾಸಕಾರನಾಗಿದ್ದು ಹಲವಾರು ಬಾರಿ ಅವಲೋಕನ ಮಾಡಿದ್ದೇನೆ. ಅವುಗಳನ್ನು ಬರೆದಿದ್ದೇನೆ ಕೂಡ. ಪೋಸ್ಟ್ನಲ್ಲಿ ಬಹಳ ಸಭ್ಯ ಭಾಷೆಯಲ್ಲಿ ಬರೆದಿದ್ದೇನೆ’’ ಎಂದು ಅವರು ಹೇಳಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:55 am, Sat, 21 May 22