Raghuram Rajan: ಸ್ವಾತಂತ್ರ್ಯಾ ನಂತರ ಭಾರತ ಕಂಡ ಅತ್ಯಂತ ದೊಡ್ಡ ಸವಾಲು ಕೋವಿಡ್-19 ಬಿಕ್ಕಟ್ಟು ಎಂದ ರಘುರಾಮ್ ರಾಜನ್
ಸ್ವಾತಂತ್ರ್ಯಾ ನಂತರದಲ್ಲಿ ಭಾರತ ಕಂಡ ಅತಿ ದೊಡ್ಡ ಸವಾಲು ಕೊರೊನಾ ಬಿಕ್ಕಟ್ಟು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ವರ್ ರಘುರಾಮ್ ರಾಜನ್ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.
ಸ್ವಾತಂತ್ರ್ಯಾ ನಂತರ ಬಹುಶಃ ಭಾರತ ಕಂಡ ಅತ್ಯಂತ ದೊಡ್ಡ ಸವಾಲು ಕೋವಿಡ್-19 ಬಿಕ್ಕಟ್ಟು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ. ಹಲವು ಜಾಗಗಳಲ್ಲಿ ನಾನಾ ಕಾರಣಗಳಿಗಾಗಿ ಜನರಿಗೆ ಸಹಾಯ ಮಾಡುವುದಕ್ಕೆ ಸರ್ಕಾರ ಇಲ್ಲ ಎಂದು ಅವರು ಹೇಳಿದ್ದಾರೆ. ಶಿಕಾಗೋ ವಿಶ್ವವಿದ್ಯಾಲಯದ ದೆಹಲಿ ಕೇಂದ್ರ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತ ಎಂಎಸ್ಎಂಇ ವಲಯಗಳಿಗೆ ಶೀಘ್ರವೇ ದಿವಾಳಿ ಪ್ರಕ್ರಿಯೆ ಬೇಕು. ಭಾರತದಲ್ಲಿ ಇದು ಕೊರೊನಾ ತಂದಿರುವ ದುರಂತದ ಸಮಯ. ಸ್ವಾತಂತ್ರ್ಯಾ ನಂತರದಲ್ಲಿ ಬಹುಶಃ ಭಾರತದ ಪಾಲಿನ ಅತಿ ದೊಡ್ಡ ಸವಾಲು ಈ ಕೋವಿಡ್- 19 ಬಿಕ್ಕಟ್ಟು ಎಂದು ಹೆಳಿದ್ದಾರೆ.
ಭಾರತದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ವರದಿ ಆಗುತ್ತಿವೆ. ಜತೆಗೆ ಸೋಂಕಿನ ಕಾರಣಕ್ಕೆ ಸಾವಿನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. “ಕೊರೊನಾ ಬಿಕ್ಕಟ್ಟಿನ ಪರಿಣಾಮ ಏನೆಂದರೆ, ಸರ್ಕಾರದ ಇರುವಿಕೆಯನ್ನು ಹಲವು ಕಾರಣಗಳಿಗಾಗಿ ನಾವು ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ,” ಎಂದು ರಾಜನ್ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಕೋವಿಡ್-19 ರೋಗಿಗಳಿಗೆ ಆಕ್ಸಿಜನ್, ಬೆಡ್ ಒದಗಿಸಲು ಸಾಧ್ಯವಾಗಿದೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಹಲವು ಸ್ಥಳಗಳಲ್ಲಿ ಸರ್ಕಾರವು ಆ ಮಟ್ಟದಲ್ಲಿ ಕೂಡ ಕೆಲಸ ಮಾಡಿಲ್ಲ ಎಂದು ಹೇಳಿದರು.
ರಘುರಾಮರಾಜನ್ ಹೇಳುವ ಪ್ರಕಾರ, ಕೊರೊನಾ ಬಿಕ್ಕಟ್ಟಿನ ನಂತರ ನಾವು ಗಂಭೀರವಾಗಿ ಸಮಾಜವನ್ನು ಪ್ರಶ್ನಿಸದೇ ಉಳಿದುಹೋದರೂ ಸಹ ಅದು ಕೂಡ ಕೊರೊನಾದಂಥ ಮತ್ತೊಂದು ದೊಡ್ಡ ದುರಂತವೇ. ನಾವೆಲ್ಲರೂ ಒಬ್ಬರಿಗೊಬ್ಬರು ಬೆಸುಕೊಂಡಿದ್ದೇವೆ ಅನ್ನೋದನ್ನು ಈ ಬಿಕ್ಕಟ್ಟು ತೋರಿಸಿಕೊಟ್ಟಿದೆ. ಯಾವ ಪುರುಷನೂ ದ್ವೀಪವಲ್ಲ, ಯಾವ ಮಹಿಳೆಯೂ ದ್ವೀಪವಲ್ಲ ಎಂದು ಅವರು ಹೇಳಿದರು. ಅಂದ ಹಾಗೆ ರಾಜನ್ ಅವರು ಸದ್ಯಕ್ಕೆ ಶಿಕಾಗೋ ಬೂತ್ ಸ್ಕೂಲ್ ಆಫ್ ಬಿಜಿನೆಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾರೆ. ಯಾವುದೇ ಸುಧಾರಣೆಯನ್ನು ಮುಚ್ಚುಮರೆಯಿಂದ ಮಾಡಬಾರದು, ಮುಕ್ತವಾಗಿರಬೇಕು ಎಂದ ರಾಜನ್, ಡೆಲ್ಲಿ ಐಐಟಿಯಲ್ಲಿನ ತಮ್ಮ ಭಾಷಣವನ್ನು ಹೇಗೆ ಮಾಧ್ಯಮಗಳು ವಿರೋಧ ಪಕ್ಷಗಳ ಧ್ವನಿ ಎಂಬಂತೆ ನೋಡಿದವು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಂಡರು.
ಐಐಟಿ ಡೆಲ್ಲಿಯಲ್ಲಿನ ನನ್ನ ಭಾಷಣ ಸರ್ಕಾರದ ಬಗ್ಗೆ ವಿಮರ್ಶೆ ಆಗಿರಲಿಲ್ಲ. ಕೆಲವು ವಿಚಾರಗಳನ್ನು ವಿಪರೀತ ವ್ಯಾಖ್ಯಾನ ಮಾಡಲಾಗುತ್ತದೆ ಎಂದರು. ಈ ಹಿಂದೆ, 2015ರ ಅಕ್ಟೋಬರ್ನಲ್ಲಿ ಡೆಲ್ಲಿ ಭಾಷಣದಲ್ಲಿ ಅವರು, ಸಹಿಷ್ಣುತೆ ಮತ್ತು ಪರಸ್ಪರ ಗೌರವ ಅತ್ಯಂತ ಅವಶ್ಯಕ. ಯಾವುದೇ ನಿರ್ದಿಷ್ಟ ಗುಂಪಿನ ಮೇಲೆ ದೈಹಿಕ ಹಲ್ಲೆ ಹಾಗೂ ನಿಂದನೆ ಮಾಡಬಾರದು. ಆಲೋಚನೆ ಹೊಸದಾಗಿ ಮೂಡಲು ಬೇಕಾದ ವಾತಾವರಣಕ್ಕೆ ಇದು ಅಗತ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಿಮರ್ಶೆ ಮಾಡುವ ಸ್ವಾತಂತ್ರ್ಯವು ಭಾರತವನ್ನು 21ನೇ ಶತಮಾನಕ್ಕೆ ಸಿದ್ಧಗೊಳಿಸುತ್ತದೆ ಎಂದಿದ್ದರು.
ಇದನ್ನೂ ಓದಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್: ಆರ್ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ
(Covid 19 biggest challenge India faced post independence said Reserve Bank Of India former governor Raghuram Rajan)